ಬೆಂಗಳೂರು [ಸೆ.19]:  ರಾಜಧಾನಿಯ ವಾಹನಗಳ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಸುತ್ತ 11,950 ಕೋಟಿ ರು. ವೆಚ್ಚದ 65.5 ಕಿ.ಮೀ. ಉದ್ದದ ಪರಿಷ್ಕೃತ ಪೆರಿಫೆರಲ್‌ ವರ್ತುಲ ರಸ್ತೆ-1 ನಿರ್ಮಾಣ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಭೂ ಸ್ವಾಧೀನ ಸೇರಿದಂತೆ ಅನೇಕ ತೊಂದರೆಗಳು ಎದುರಾದ ಹಿನ್ನೆಲೆಯಲ್ಲಿ ಯೋಜನೆ ಜಾರಿ ಮಾಡಲು ಆಗಿರಲಿಲ್ಲ. ಈಗ ಎಲ್ಲ ಸಮಸ್ಯೆ ನಿವಾರಣೆ ಮಾಡಲಾಗಿದೆ ಎಂದರು.

ಯೋಜನೆ ಜಾರಿಗೆ ಬಿಡಿಎ ಮತ್ತು ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಜೊತೆಗೂಡಿ ವಿಶೇಷ ಉದ್ದೇಶಿತ ವಾಹಕ (ಎಸ್‌ವಿಪಿ) ರಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪರಿಷ್ಕೃತ ಯೋಜನೆ:  ಈ ಮೊದಲು 75 ಮೀಟರ್‌ ಅಗಲದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದನ್ನು ಈಗ 100 ಮೀಟರ್‌ ಅಗಲಕ್ಕೆ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಸೈಕಲ್‌ ಪಥ, ಸರ್ವಿಸ್‌ ರಸ್ತೆ ನಿರ್ಮಿಸಲಾಗುವುದು, ವಿಶೇಷವಾಗಿ ಈ ಹಿಂದೆ 25 ಮೀಟರ್‌ ಜಾಗವನ್ನು ವಾಣಿಜ್ಯ ಬೆಳವಣಿಗೆಗೆ ಭೂಮಿ ಮೀಸಲಿಡಲಾಗಿತ್ತು. ಪರಿಷ್ಕೃತ ಯೋಜನೆಯಲ್ಲಿ ಅದನ್ನು ಕೈ ಬಿಟ್ಟು ಸಂಪೂರ್ಣವಾಗಿ ರಸ್ತೆ ನಿರ್ಮಿಸಲಾಗುವುದು. ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯನ್ನು ಈ ರಸ್ತೆ ಸಂಪರ್ಕಿಸಲಿದೆ ಎಂದರು.

ನಾಲ್ಕು ವರ್ಷದಲ್ಲಿ ಯೋಜನೆ ಅನುಷ್ಠಾನ:  ಯೋಜನೆ ಜಾರಿಗೆ ಬೇಕಾದ 1810 ಎಕರೆ ಭೂ ಸ್ವಾಧೀನಕ್ಕೆ ಸುಮಾರು 8100 ಕೋಟಿ ರು. ಹಾಗೂ ರಸ್ತೆ ನಿರ್ಮಾಣಕ್ಕೆ 3850 ಕೋಟಿ ರು. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ಒಂದು ವರ್ಷದಲ್ಲಿ ಭೂ ಸ್ವಾಧೀನ ಮಾಡಿಕೊಂಡು, ನಂತರದ ಮೂರು ವರ್ಷಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು. ಎಸ್‌ವಿಪಿಗೆ ಭೂ ಸ್ವಾಧೀನಕ್ಕೆ ಸರ್ಕಾರ ಸಾಲ ನೀಡಲಿದೆ. ರಸ್ತೆ ನಿರ್ಮಾಣಕ್ಕೆ ಜೈಕಾ ಸಂಸ್ಥೆಯಿಂದ ಸಾಲ ಪಡೆಯಲಾಗುವುದು, ಭೂ ಸ್ವಾಧೀನ ಶೇ.80ರಷ್ಟುಪೂರ್ಣಗೊಂಡ ನಂತರವೇ ಕಾಮಗಾರಿಗೆ ಟೆಂಡರ್‌ ಕರೆಯಲಾಗುವುದು ಎಂದು ಅವರು ವಿವರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರುಕಟ್ಟೆದರಕ್ಕಿಂತ ಹೆಚ್ಚು ದರ :  ಯೋಜನೆಗೆ ಬೇಕಾದ ಭೂಮಿ ನೀಡಿದವರಿಗೆ ಹೊಸ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಲಾಗುವುದು. ಎರಡು ಎಕರೆಗಿಂತ ಕಡಿಮೆ ಭೂಮಿ ಕಳೆದುಕೊಂಡವರಿಗೆ ಹೊಸ ಭೂ ಸ್ವಾಧೀನ ಕಾಯ್ದೆಯ ಮಾರ್ಗಸೂಚಿ ದರದ ಜೊತೆಗೆ ಮಾರುಕಟ್ಟೆದರಕ್ಕಿಂತ ಒಂದು ಪಟ್ಟು ಹೆಚ್ಚು ಮೊತ್ತವನ್ನು ಪರಿಹಾರವಾಗಿ ನೀಡಲಾಗುವುದು, 2 ಎಕರೆಗಿಂತ ಹೆಚ್ಚು ಭೂಮಿ ಕಳೆದುಕೊಂಡವರಿಗೆ ಶೇ.50ರಷ್ಟುಹಣ ಹಾಗೂ ಶೇ.50ರಷ್ಟುಟಿಡಿಆರ್‌ ನೀಡಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.