ಮೈಸೂರು[ಸೆ..6]: ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಬಿಜೆಪಿಗೆ ಹತ್ತಿರವಾದಂತಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದ್ದು, ತಾವು ಪ್ರತಿನಿಧಿಸುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಮುಂದೆ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ. ಮಹೇಶ್‌ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು, ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಜೆಡಿಎಸ್‌ ಸೋಲಲಿದೆ. ಅಲ್ಲಿ ಎಚ್‌.ವಿಶ್ವನಾಥ್‌ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಸರ್ಕಾರದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಮತ್ತು ಸಾ.ರಾ.ಮಹೇಶ್‌ ಕುರಿತು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಗೆಡಹಿದರು.

2004ರಲ್ಲಿ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಪ್ಲೇಸ್‌ಗೆ ಬೆಳೆಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆಗಲೂ ಮಂತ್ರಿ ಮಾಡಲಿಲ್ಲ. ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದ ಕಾರಣದಿಂದ ನನ್ನನ್ನು 7 ತಿಂಗಳು ಸಹಕಾರ ಮಂತ್ರಿ ಮಾಡಿದರು. ನಂತರ ಯಡಿಯೂರಪ್ಪಗೆ ಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನಾನೇ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿ ಹುಣಸೂರಲ್ಲಿ ನಿಂತು ಸೋತೆ. ಆದರೂ ಕ್ಯಾಬಿನೆಟ್‌ ದರ್ಜೆಯ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಯವರು ಕೊಟ್ಟರು. ನಂತರ ವಾಪಸ್‌ ಮರಳಿ ಮನೆಗೆ ಅಂತ ಜೆಡಿಎಸ್‌ಗೆ ಬಂದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಕ್ಷೇತ್ರದ ಜನ 36,000 ಮತಗಳ ಅಂತರದಿಂದ ಸೋಲಿಸಿದರು. ಇದರಿಂದಾಗಿಯೇ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಮುಖ್ಯಮಂತ್ರಿಗೆ ಎಷ್ಟುಅಧಿಕಾರ ಇದೆಯೋ ಅಷ್ಟುಅಧಿಕಾರವನ್ನು ಜಿಟಿಡಿಗೆ ನೀಡುತ್ತೇವೆ ಎಂದು ಆಗ ಭಾಷಣದಲ್ಲಿ ಭರವಸೆ ನೀಡಿದ್ದ ಕುಮಾರಸ್ವಾಮಿ ನಂತರ ನನಗೆ ಒಪ್ಪದ ಉನ್ನತ ಶಿಕ್ಷಣ ಖಾತೆ ನೀಡಿದರು. ನಾನು ತಿಂಗಳು ಕಾದರೂ ಬದಲಿಸುವ ಗೋಜಿಗೇ ಹೋಗಲಿಲ್ಲ. ಬಹುಶಃ ಮಂತ್ರಿ ಸ್ಥಾನ ಬಿಟ್ಟು ಹೋಗಲಿ ಅಂತಾನೇ ಆ ಖಾತೆ ಕೊಟ್ಟರೋ ಗೊತ್ತಿಲ್ಲ. ಸಚಿವನಾಗಿದ್ದಾಗ ಕ್ಷಣಕ್ಷಣಕ್ಕೂ ಅವಮಾನ ಮತ್ತು ನೋವು ಉಣ್ಣುತ್ತಿದ್ದೆ. ಈಗ ಆರಾಮವಾಗಿದ್ದೇನೆ ಎಂದರು.

ಹುಣಸೂರಲ್ಲಿ ಮಗ ನಿಲ್ಲಲ್ಲ ಅಂದಿದ್ದೆ:

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮನೆಗೆ ಹೋಗಿದ್ದಾಗ ಹುಣಸೂರು ಉಪ ಚುನಾವಣೆಯಲ್ಲಿ ನನ್ನ ಮಗನನ್ನೇ ನಿಲ್ಲಿಸಿ ಎಂದು ರೇವಣ್ಣ ಸಲಹೆ ನೀಡಿದ್ದರು. ಆಗ ನಾನೇ, ಹುಣಸೂರಲ್ಲಿ ಜೆಡಿಎಸ್‌ ಗೆಲ್ಲಲ್ಲ, ಅಲ್ಲಿ ಶೆಟ್ರು(ಎಚ್‌.ವಿಶ್ವನಾಥ್‌) ಗೆಲ್ಲುತ್ತಾರೆ ಅಂತ ಹೇಳಿದ್ದೇನೆ. ನನ್ನ ಮಗ ಚಾಮುಂಡೇಶ್ವರಿಯಲ್ಲಿ ನಿಲ್ಲಲಿ, ಹುಣಸೂರಲ್ಲಿ ಬೇಡ ಎಂದು ತಿಳಿಸಿದ್ದೇನೆ ಎಂದು ಜಿಟಿಡಿ ಮಾಹಿತಿ ನೀಡಿದರು.

ಅವಮಾನ ಇಲ್ಲ, ನೋವೂ ಇಲ್ಲ: ನಾನು ಈಗ ಬಹಳ ಆರಾಮಾಗಿದ್ದೇನೆ. ಯಾವ ಅವಮಾನವೂ ಇಲ್ಲ, ನೋವೂ ಇಲ್ಲ. ಜತೆಗೆ ಈಗ ಜೆಡಿಎಸ್‌ ಸಂಘಟನೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲದ ಕಾರಣ, ತಲೆ ಮೇಲಿದ್ದ ದೊಡ್ಡ ಬಂಡೆ ಇಳಿದಂತಾಗಿದೆ. ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದು ಮಗನಿಗೆ ಕ್ಷೇತ್ರ ಬಿಟ್ಟುಕೊಡುತ್ತಿದ್ದೇನೆ. ಈಗ ಬಡವರ ಸೇವೆ ಮಾಡಿಕೊಂಡು ನೆಮ್ಮದಿಯಾಗಿದ್ದೇನೆ ಎಂದು ಜಿ.ಟಿ.ದೇವೆಗೌಡ ಹೇಳಿದರು.

ಸಾರಾ ದೇಶದಲ್ಲಿ ಪಕ್ಷ ಕಟ್ಟುತ್ತಾರೆ!

ಎಚ್‌.ಡಿ. ಕುಮಾರಸ್ವಾಮಿ ಜತೆಜತೆಗೆ ಆ್ಯಕ್ಟಿಂಗ್‌ ಮುಖ್ಯಮಂತ್ರಿ ಆಗಿದ್ದ ಸಾ.ರಾ. ಮಹೇಶ್‌ ಸಂಘಟನೆಯಲ್ಲಿ ಬಹುಚತುರ. ನನಗಿಂತಲೂ ಸಂಘಟನಾ ಶಕ್ತಿ ತುಸು ಹೆಚ್ಚಾಗಿಯೇ ಇದೆ. ಇಷ್ಟುದಿನ ರಾಜ್ಯದಲ್ಲಿ ಅವರು ಜೆಡಿಎಸ್‌ ಕಟ್ಟಿದರು. ಈಗ ದೇಶದಲ್ಲಿ ಪಕ್ಷ ಕಟ್ಟಿತಮ್ಮ ಶಕ್ತಿ ಪ್ರದರ್ಶನ ಮಾಡ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಜಿ.ಟಿ. ದೇವೇಗೌಡ ಟಾಂಗ್‌ ನೀಡಿದರು.