Karnataka budget 2023: ನಾಲ್ಕೇ ಘೋಷಣೆಯಲ್ಲಿ ದಾವಣಗೆರೆ ಜಿಲ್ಲೆಗೆ ದಿಗ್ಭಂಧನ!
ಸಿದ್ದರಾಮಯ್ಯ ಅಮೃತ ಮಹೋತ್ಸವ (75ವರ್ಷ) ಮೂಲಕ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಮತ್ತಷ್ಟುಹೆಚ್ಚಲು ಐತಿಹಾಸಿಕ ಸಮಾರಂಭಕ್ಕೆ ವೇದಿಕೆಯಾಗಿದ್ದ ದಾವಣಗೆರೆ ಜಿಲ್ಲೆಗೆ ಸಿದ್ದರಾಮಯ್ಯ ಈಗಿನ ಗ್ಯಾರಂಟಿ ಭರವಸೆಗಳ ಹೊಯ್ದಾಟದ ಮಧ್ಯೆ ಏನಾದರೂ ಕೈಬಿಚ್ಚಿ ಕೊಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಅದರಲ್ಲೂ ವಿಶೇಷವಾಗಿ ದಾವಣಗೆರೆಗೆ ಅಂತಾ ಯಾವುದೂ ಇಲ್ಲ.
ದಾವಣಗೆರೆ (ಜು.8) : ಸಿದ್ದರಾಮಯ್ಯ ಅಮೃತ ಮಹೋತ್ಸವ (75ವರ್ಷ) ಮೂಲಕ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಮತ್ತಷ್ಟುಹೆಚ್ಚಲು ಐತಿಹಾಸಿಕ ಸಮಾರಂಭಕ್ಕೆ ವೇದಿಕೆಯಾಗಿದ್ದ ದಾವಣಗೆರೆ ಜಿಲ್ಲೆಗೆ ಸಿದ್ದರಾಮಯ್ಯ ಈಗಿನ ಗ್ಯಾರಂಟಿ ಭರವಸೆಗಳ ಹೊಯ್ದಾಟದ ಮಧ್ಯೆ ಏನಾದರೂ ಕೈಬಿಚ್ಚಿ ಕೊಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಅದರಲ್ಲೂ ವಿಶೇಷವಾಗಿ ದಾವಣಗೆರೆಗೆ ಅಂತಾ ಯಾವುದೂ ಇಲ್ಲ.
ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್ ಮಂಡನೆಯಲ್ಲಿ ಜಿಲ್ಲೆಗೆ ಅಷ್ಟಾಗಿ ಮಹತ್ವವನ್ನೇ ನೀಡಿಲ್ಲ. ಕೊಟ್ಟಂತೆಯೂ ಆಗಬೇಕು, ಕೊಡದೆಯೂ ಇರಬೇಕೆಂಬ ನೀತಿ ಸ್ಪಷ್ಟ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದಿಂದ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ, ಒಳಾಂಗಣ ಕ್ರೀಡಾ ಸೌಲಭ್ಯ ಕಲ್ಪಿಸುವ ಭರವಸೆ ಸಿಕ್ಕಿದೆ. ಆದರೆ, ಇದರ ಬಗ್ಗೆ ಸ್ಪಷ್ಟವಾಗಿ ಘೋಷಣೆ ಇಲ್ಲ. ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ ಎಲ್ಲಿ ಸ್ಥಾಪಿಸುತ್ತಾರೆಂಬ ಸ್ಪಷ್ಟವಿವರಣೆ ಇಲ್ಲ.
ಕೆರೆ ಭರ್ತಿ ಮಾಡುವ ಯೋಜನೆಗೆ ಅನುದಾನ:
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆ ಕೈಗೆತ್ತಿಕೊಡಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರು.ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ, ಯಾದಗಿರಿ ಜಿಲ್ಲೆಗಳ 899 ಕೆರೆ ತುಂಬಿಸುವ ಯೋಜನೆಯೆಂಬುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ, 770 ಕೋಟಿ ರು.ಅನುದಾನದಲ್ಲಿ ದಾವಣಗೆರೆ ಜಿಲ್ಲೆಯ ಯಾವ್ಯಾವ ತಾಲೂಕಿನ, ಯಾವ್ಯಾವ ಯೋಜನೆ, ಅನುದಾನ ಎಷ್ಟೆಂಬ ಸ್ಪಷ್ಟಮಾಹಿತಿ ಇಲ್ಲ. 7 ಕ್ಷೇತ್ರಗಳ ಜಿಲ್ಲೆಯಲ್ಲಿ 6 ಮಂದಿ ಕಾಂಗ್ರೆಸ್‌ನ ಶಾಸಕರಿದ್ದರೆ, ಒಬ್ಬರು ಬಿಜೆಪಿ ಶಾಸಕರು. ಈಗ ಯಾರ ಕ್ಷೇತ್ರದ ಕೆರೆಗಳ ಸರ್ಕಾರ ತುಂಬಿಸಲು ಹೊರಟಿದೆಯೆಂಬ ಮಾಹಿತಿ ಇಲ್ಲವಾಗಿದೆ.
ನಾಲ್ಕು ಘೋಷಣೆಗಳು ಯಾವ್ಯಾವು?
- ದಾವಣಗೆರೆ ಜಿಲ್ಲೆಯ ಕೆಲವು ಕೆರೆಗಳ ಭರ್ತಿ
- ದಾವಣಗೆರೆಯಲ್ಲಿ 4 ಕೋಟಿ ರು.ವೆಚ್ಚದಲ್ಲಿ ಅಲ್ಪಸಂಖ್ಯಾತರಿಗೆ ಕೌÜಶಲ್ಯ ತರಬೇತಿ
- ಕಾರ್ಮಿಕ ವಿಮಾ ಆಸ್ಪತ್ರೆಯಲ್ಲಿ ಆಯುಷ್ ವಿಭಾಗ
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಿಂದ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ
ಉಳಿದ ಯುವಶಕ್ತಿಗೆ ಕೌಶಲ್ಯ ತರಬೇತಿ ಬೇಡವೇ?
ದಾವಣಗೆರೆಯಲ್ಲಿ 4 ಕೋಟಿ ರು. ವೆಚ್ಚದಲ್ಲಿ ಅಲ್ಪಸಂಖ್ಯಾತ ಯುವ ಜನರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ಪ್ರಕಟಿಸಿದ್ದಾರೆ ಆದರೆ, ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡನೆ ವೇಳೆ ಹಿರಿಯ ಕವಿ ಚನ್ನವೀರ ಕಣವಿ ರಚಿತ ‘ಯಾವ ಕಾಲಕೂ ಯಾವ ದೇಶಕೂ ಯುವ ಶಕ್ತಿ ಚಿಲುಮೆ’ ಎಂಬುದಾಗಿ ಹೇಳಿದರು. ಅಲ್ಪ ಸಂಖ್ಯಾತ ಯುವ ಜನರಿಗೆ ಕೌಶಲ್ಯ ತರಬೇತಿ ನೀಡುವ ಉತ್ಸುಕತೆ ಕಾಂಗ್ರೆಸ್ ಆರು ಕ್ಷೇತ್ರದಲ್ಲಿ ಗೆಲ್ಲಿಸಿದ ಪರಿಶಿಷ್ಟಜಾತಿ, ಪಂಗಡಗಳು, ಹಿಂದುಳಿದ ವರ್ಗಗಳು, ಇತರೆ ಸಮುದಾಯಗಳ ಯುವ ಶಕ್ತಿ ಬಗ್ಗೆ ಯಾಕೆ ತೋರಿಸಿಲ್ಲವೆಂಬ ಪ್ರಶ್ನೆ ಸಹಜವಾಗಿಯೇ ಜನರಿಂದ ಕೇಳಿ ಬರುತ್ತಿದೆ.
ರಾಜ್ಯದ ಎಲ್ಲಾ ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿ ಆಯುರ್ವೇದ, ಹೋಮಿಯೋಪಥಿ, ಯೋಗ ಕೇಂದ್ರಗಳನ್ನು ಒಳಗೊಂಡ ಆಯುಷ್ ವಿಭಾಗವನ್ನು 3 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿದೆ. ರಾಜ್ಯಾದ್ಯಂತ ಇರುವ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಗಳ ಪೈಕಿ ದಾವಣಗೆರೆಯದ್ದೂ ಒಂದಾಗಿದೆ. ಹಾಗಾಗಿ, ವಿಶೇಷವಾಗಿ ಅಲ್ಪಸಂಖ್ಯಾತ ಯುವ ಜನರಿಗೆ ಕೌಶಲ್ಯ ತರಬೇತಿ ನೀಡುವ ಘೋಷಣೆ ಬಿಟ್ಟರೆ, ಉಳಿದ 4 ಘೋಷಣೆಗಳಲ್ಲಿ ಯಾವುದನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಘೋಷಣೆ ಮಾಡಿಲ್ಲ.
ಗಂಟು ಬಿಚ್ಚದೇ ಹಾಗೆ ಉಳಿದ ನಿರೀಕ್ಷೆಗಳ ಮೂಟೆ
* ಮೆಕ್ಕೆಜೋಳ ಸೇರಿ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಸ್ಥಾಪನೆ ಬಗ್ಗೆ ಚಕಾರ ಎತ್ತಿಲ್ಲ. ಕೃಷಿ ವಿಶ್ವ ವಿದ್ಯಾನಿಲಯ ಅಥವಾ ಕಾಲೇಜು, ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಕನಸು ಹಾಗೆ ಉಳಿದಿದೆ. ಭದ್ರಾ ನಾಲೆಗಳು ಅಲ್ಲಲ್ಲಿ ಹೂಳು ತುಂಬಿದ್ದು, ಹಾಳಾಗಿರುವ ಹಿನ್ನೆಲೆಯಲ್ಲಿ ನಾಲಾ ದುರಸ್ತಿ, ಹೂಳೆತ್ತುವ ಕೆಲಸಕ್ಕೆ ಅನುದಾನ ಸಿಗಬಹುದೇ ಎಂಬ ನಿರೀಕ್ಷೆ ಹುಸಿಯಾಗಿದೆ. ಹರಿಹರ ತಾಲೂಕಿನ ಭೈರನಪಾದ ಯೋಜನೆ ಕನ್ನಡಿಯೊಳಗಿನ ಗಂಟಾಗಿ ಉಳಿದಿದೆ.
* ವಿಮಾನ ನಿಲ್ದಾಣದ ದಶಕಗಳ ಕನಸು ಹಾಗೆ ಉಳಿಯಿತು. ಆನಗೋಡು ಸಮೀಪ 500 ಎಕರೆ ಜಾಗ ಗುರುತಿಸಲಾಗಿದೆ. ಆದರೆ, ಕೇಂದ್ರ-ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ವಿಮಾನ ನಿಲ್ದಾಣ ಇನ್ನೂ ಕನಸಾಗಿ ಉಳಿದಿದೆ. ವಿಮಾನ ನಿಲ್ದಾಣವಾದಲ್ಲಿ ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಹಾವೇರಿ ಜಿಲ್ಲೆಯ ಜನರಿಗೂ ಅನುಕೂಲವಾಗಲಿದೆ.
* ಸರ್ಕಾರಿ ವೈದ್ಯಕೀಯ ಕಾಲೇಜು ಇಂದಿಗೂ ಗಗನ ಕುಸುಮವಾಗಿದೆ. ಐತಿಹಾಸಿಕ ಸೂಳೆಕೆರೆ ಹೂಳೆತ್ತುವ, ಪ್ರವಾಸಿ ತಾಣಮಾಡುವ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ವಿಚಾರವೂ ಮುನ್ನಲೆಗೆ ಬರಲೇ ಇಲ್ಲ. ಜವಳಿ ಪಾರ್ಕ್ಗೆ ಒತ್ತು ನೀಡುವ ಪ್ರಯತ್ನಕ್ಕೆ ಸಿಎಂ ಕೈಹಾಕಬಹುದೇ ಎಂಬ ನಿರೀಕ್ಷೆಗೆ ಸರ್ಕಾರ ತಣ್ಣೀರೆರಚಿದೆ.
Karnataka monsoon: ಮುಂಗಾರು ಬಿತ್ತೋಣವೇ, ಹಿಂಗಾರಿಗೆ ಹಾರೋಣವೇ? ಗೊಂದಲದಲ್ಲಿ ರೈತರು!
* ಎಚ್.ಕಲ್ಪನಹಳ್ಳಿ ಬಳಿ ಸುಮಾರು 14 ಎಕರೆ ಜಮೀನನ್ನು ಸರ್ಕಾರವು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ ಮಂಜೂರು ಮಾಡಿದೆ. ದಾವಣಗೆರೆ-ಚಿತ್ರದುರ್ಗ ಜಿಲ್ಲೆಯಲ್ಲಿರುವ 659 ಕಾರ್ಯನಿರತರ ಸಂಘಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರತಿದಿನ 3ಲಕ್ಷ ಲೀಟರ್(5 ಲಕ್ಷ ಲೀಟರ್‌ಗೆ ವಿಸ್ತರಿಸಬಹುದಾದ) ಸಾಮರ್ಥ್ಯದ ಅತ್ಯಾಧುನಿಕ ಮೆಗಾಡೈರಿ ಸುಮಾರು 174 ಕೋಟಿ ರು.ವೆಚ್ಚದಲ್ಲಿ ಸ್ಥಾಪಿಸಲು ವಿವರವಾದ ಯೋಜನಾ ವರದಿ ಸರ್ಕಾರಕ್ಕೂ ಹಿಂದೆ ಸಲ್ಲಿಕೆಯಾಗಿತ್ತು.