Karnataka Budget 2023: ಕೊಪ್ಪಳ: ಹಳೆ ಘೋಷಣೆಗಳ ಮೆಲುಕು; ಬಜೆಟ್‌ನಲ್ಲಿಲ್ಲ ಹೊಸತು!
ಕಳೆದ ಬಜೆಟ್‌ನ ಹಲವು ಯೋಜನೆಗಳನ್ನೇ ಮತ್ತೊಮ್ಮೆ ಘೋಷಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಬಜೆಟ್‌ನಲ್ಲಿ ಈ ಬಾರಿ ಜಿಲ್ಲೆಗೆ ಏನಾದರೂ ಸಿಕ್ಕೀತು ಎಂಬ ನಿರೀಕ್ಷೆ ಹುಸಿಯಾಗಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಫೆ.18) : ಕಳೆದ ಬಜೆಟ್‌ನ ಹಲವು ಯೋಜನೆಗಳನ್ನೇ ಮತ್ತೊಮ್ಮೆ ಘೋಷಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಬಜೆಟ್‌ನಲ್ಲಿ ಈ ಬಾರಿ ಜಿಲ್ಲೆಗೆ ಏನಾದರೂ ಸಿಕ್ಕೀತು ಎಂಬ ನಿರೀಕ್ಷೆ ಹುಸಿಯಾಗಿದೆ.
ನೀರಾವರಿ ಯೋಜನೆ(Irrigation project)ಗಳು ಸೇರಿದಂತೆ ಹಲವು ನನೆಗುದಿಗೆ ಬಿದ್ದಿರುವ ಕಾಮಗಾರಿಗೆ ಅನುದಾನ ದೊರಕುತ್ತದೆ ಎನ್ನುವ ಜಿಲ್ಲೆಯ ಜನರ ಕುತೂಹಲಕ್ಕೆ ತಣ್ಣೀರೆರೆಚಿದಂತಾಗಿದೆ. ಕಿನ್ನಾಳ ಕಲೆ ಕೌಶಲ್ಯ ತರಬೇತಿ ನೀಡಲು ನಿರ್ಧರಿಸಿರುವುದು ತುಸು ಸಮಾಧಾನಕರ ಸಂಗತಿ.
ಕೊಪ್ಪಳ: 200 ಬಡ ಹೆಣ್ಣುಮಕ್ಕಳ ಖಾತೆ ತೆರೆದು ಮಾದರಿಯಾದ ಅಂಚೆಪಾಲಕ
ನೀರಾವರಿ ಯೋಜನೆಯ ಪ್ರಸ್ತಾಪವಿಲ್ಲ:
ನೀರಾವರಿ ಬಗ್ಗೆ ಕಾಳಜಿ ಹೊಂದಿರುವ ಬೊಮ್ಮಾಯಿ(Basavaraj Bommai) ಬಜೆಟ್‌ನಲ್ಲಿ ಕೊಪ್ಪಳಕ್ಕೆ ಬೊಂಬಾಟ್ ಕೊಡುಗೆ ನೀಡುವರು ಎನ್ನುವ ಮಾತಿಗೆ ನೀರೆರೆಚುವ ಕೆಲಸ ಮಾಡಿದಂತಾಗಿದೆ. ರಾಜ್ಯ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗೆ .5 ಸಾವಿರ ಕೋಟಿ ಘೋಷಿಸಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿನ ಪ್ರತ್ಯೇಕ ಯೋಜನೆಗಳಿಗೆ ಎಷ್ಟುಅನುದಾನ ಎನ್ನುವ ಪ್ರಸ್ತಾಪ ಮಾಡಿಲ್ಲ.
ಸಿಂಗಟಾಲೂರು ಏತ ನೀರಾವರಿ(Singataluru lift irrigation) ಯೋಜನೆಯ ಕುರಿತು ಚಕಾರವೆತ್ತಿಲ್ಲ. ಬಹದ್ದೂರಬಂಡಿ ಏತ ನೀರಾವರಿ(Bahaddoor bandi lift irrigation)ಗೆ ಮುಂದುವರಿದ ಕಾಮಗಾರಿಗೂ ಅನುದಾನ ಸಿಗಲಿಲ್ಲ. ಅಲ್ಲದೇ, ಅಳವಂಡಿ- ಬೆಟಗೇರಿ ಏತ ನೀರಾವರಿ ಯೋಜನೆ ಲೋಕಾರ್ಪಣೆ, ಮುಂದುವರಿದ ಕಾಮಗಾರಿಗೆ ಹಣ ಸಿಗದಿರುವುದು ನಿಜಕ್ಕೂ ಜಿಲ್ಲೆಯ ಜನರಲ್ಲಿ ಬೇಸರ ತರಿಸಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಸ್ತಾಪವಿಲ್ಲ:
ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ವೇಳೆ ಸಿಎಂ ಬೊಮ್ಮಾಯಿ ಅವರು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(Koppal Super Specialty Hospital) ಘೋಷಿಸಿದ್ದರು. ಆದರೆ ಆ ಘೋಷಣೆಯ ಪ್ರಸ್ತಾಪವೂ ಬಜೆಟ್‌ನಲ್ಲಿಲ್ಲ. ಹಿಂದಿನ ಬಜೆಟ್‌ನಲ್ಲಿ ಜಿಲ್ಲೆಗೆ ಅನುದಾನ ಮೀಸಲಿಡದೆ ತೋಟಗಾರಿಕೆ ಪಾರ್ಕ್ ಘೋಷಣೆಯಾಗಿತ್ತು. ಅದಕ್ಕೂ ಹಾಲಿ ಬಜೆಟ್‌ನಲ್ಲಿ ಅನುದಾನ ಸಿಗಲಿಲ್ಲ. ಪ್ರಸ್ತಾಪವನ್ನೇ ಮಾಡಿಲ್ಲ.
ಅಂಜನಾದ್ರಿ ಅಭಿವೃದ್ಧಿ:
ಅಂಜನಾದ್ರಿ ಅಭಿವೃದ್ಧಿ(Anjanadri Development)ಗೆ ಕಳೆದ ಬಾರಿಯ ಬಜೆಟ್‌ನಲ್ಲಿ .100 ಕೋಟಿ ಘೋಷಣೆ ಮಾಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ .100 ಕೋಟಿಯಲ್ಲಿ ಕ್ರಿಯಾಯೋಜನೆ ರೂಪಿಸಿದ್ದು, ಬೆಟ್ಟದಡಿ ಮೂಲ ಸೌಕರ್ಯ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎನ್ನುವ ಪ್ರಸ್ತಾಪ ಮಾಡಿದ್ದಾರೆ. ಆದರೆ ಬೆಟ್ಟಕ್ಕೆ ರೋಪ್ ವೇ ಸೇರಿ ಕೇಬಲ್ ಕಾರು ಕುರಿತು ಏನನ್ನೂ ಹೇಳಿಲ್ಲ.
ನವಲಿ ಡ್ಯಾಂ ಪ್ರತಿ ಬಾರಿ ಚರ್ಚೆ:
ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿದ ವಿಷಯ ಪ್ರತಿ ಬಾರಿ ಬಜೆಟ್‌ನಲ್ಲಿ ಪ್ರಸ್ತಾಪವಾಗುತ್ತಿದ್ದು, ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡುವುದಾಗಿ ಹೇಳಲಾಗುತ್ತಿದೆ. ಡ್ಯಾಂ ನಿರ್ಮಾಣದ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದೆ. ಆಂಧ್ರ ಸಿಎಂ ಜತೆ ಸಮಾಲೋಚನೆ ನಡೆಸಿದ್ದು, ತೆಲಂಗಾಣ ಸಿಎಂ ಜತೆ ಸಮಾಲೋಚನೆ ನಡೆಸಿ ಈ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗೆ ಇದು ಅಂತರಾಜ್ಯ ವಿಷಯ ಎನ್ನುವ ನೆಪವಿಟ್ಟು ಬಜೆಟ್‌ನಲ್ಲಿ ಪ್ರಸ್ತಾಪ ಮಾಡುತ್ತಲೆ ಕಾಲಹರಣ ಮಾಡಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಮತ್ತೆ ಹೊಸ ವಿವಿ, ವಿಮಾನ ನಿಲ್ದಾಣ ಪ್ರಸ್ತಾಪ:
ಜಿಲ್ಲೆಯಲ್ಲಿ ಕಳೆದ ಬಾರಿಯ ಬಜೆಟ್‌ನಲ್ಲಿ ಹೊಸ ವಿಶ್ವ ವಿದ್ಯಾಲಯ ಸ್ಥಾಪನೆ, ಹೊಸ ವಿಮಾನ ನಿಲ್ದಾಣ ಆರಂಭಿಸುವುದಾಗಿ ಪ್ರಸ್ತಾಪಿಸಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿಯೂ ಹೊಸ ವಿವಿ ಆರಂಭಿಸಿದೆ ಎಂದಿದೆ. ಅಲ್ಲದೇ, ವಿಮಾನ ನಿಲ್ದಾಣದ ಕಾಮಗಾರಿ ಈ ವರ್ಷದಿಂದ ಆರಂಭಿಸುವುದಾಗಿ ಹೇಳಿದೆ.
ರೈಲ್ವೆ ಯೋಜನೆಗಳಿಗೆ ಸಿಕ್ತು ಅಲ್ಪ ಹಣ:
ಕೊಪ್ಪಳದಲ್ಲಿ ನಡೆದಿರುವ ಗಿಣಗೇರಾ- ರಾಯಚೂರು ರೈಲ್ವೆ ಯೋಜನೆಗೆ .150 ಕೋಟಿ ಹಾಗೂ ಗದಗ- ವಾಡಿ ರೈಲ್ವೆ ಯೋಜನೆಗೆ .200 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಇದು ಸ್ವಲ್ಪ ಸಮಾಧಾನದ ಸಂಗತಿ. ಆದರೂ ಹೆಚ್ಚಿನ ಅನುದಾನದ ನೆರವಿನ ಅಗತ್ಯ ತುಂಬಾನೇ ಇದೆ.
ಸಿಎಂ ಬೊಮ್ಮಾಯಿ ಬಜೆಟ್‌ನತ್ತ ಬೆಟ್ಟದಷ್ಟುನಿರೀಕ್ಷೆ: ಸಿಗುವುದೇ ಧಾರವಾಡಕ್ಕೆ ವಿಶೇಷ ಅನುದಾನ?
ಗಗನ್ ಮಹಲ್ ಖಾಸಗಿ ಹೊಣೆ:
ಜಿಲ್ಲೆಯ ಆನೆಗೊಂದಿ ಬಳಿ ಇರುವ ಗಗನ್ ಮಹಲ್ ಸಂರಕ್ಷಣೆಗೆ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ಬಜೆಟ್‌ನಲ್ಲಿ ಪ್ರಸ್ತಾಪ ಮಾಡುವ ಮೂಲಕ ಮತ್ತೆ ಸರ್ಕಾರವು ಖಾಸಗಿ ಮಾತನ್ನಾಡಿದೆ.
ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಯಾವುದೇ ಹೊಸ ಯೋಜನೆಗಳು ಘೋಷಣೆಯಾಗಿಲ್ಲ. ಹಳೇ ಯೋಜನೆಗಳಿಗೆ ಅಲ್ಪ ಸ್ವಲ್ಪ ಅನುದಾನ ಮೀಸಲಿಟ್ಟು ಕ್ರಿಯಾಯೋಜನೆ ಕೈಗೊಳ್ಳುವ ಮಾತನ್ನಾಡಿ, ಟೆಂಡರ್ ಕರೆಯುವ ಕುರಿತು ಪ್ರಸ್ತಾಪಿಸಿದೆ.