ಬೆಂಗಳೂರು (ಮಾ.  08)   ಬಜೆಟ್ ನಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿ ಭರ್ಜರಿ ಕೊಡುಗೆ ನೀಡಲಾಗಿದೆ.  ಅಪರಾಧ ಪತ್ತೆ  ಚುರುಕುಗೊಳಿಸಲು ಹಾಗೂ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಸ್ವಂತ ಕಟ್ಟಡಗಳಿಲ್ಲದ ನೂರು ಪೊಲೀಸ್ ಠಾಣೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟ ನಿರ್ಮಿಸಿಕೊಡಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಬಜೆಟ್‍ನಲ್ಲಿ 25 ಕೋಟಿ ಒದಗಿಸಲಾಗಿದೆ ಎಂದು ಬಿಎಸ್‌ವೈ ಮಾಹಿತಿ ನೀಡಿದ್ದಾರೆ.

ಬಜೆಟ್ ಸಂಪೂರ್ಣ ವಿವರ

ಪೊಲೀಸರ ಕ್ಷೇಮಾಭಿವೃದ್ಧಿಗಾಗಿ ಪೊಲೀಸ್ ಗೃಹ 2025 ಯೋಜನೆಯನ್ನು 2740 ಕೋಟಿ ಮೊತ್ತದಲ್ಲಿ ಪ್ರಾರಂಭಿಸಿದ್ದು, ಅಗ್ನಿಶಾಮಕ, ಕಾರಾಗೃಹ ಇಲಾಖೆಗಳ ಸಿಬ್ಬಂದಿ ಸೇರಿದಂತೆ ಗೃಹ ಇಲಾಖೆಯ 10,032 ವಸತಿ ಗೃಹ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. 

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕರ್ನಾಟಕ ರಾಜ್ಯ ಮೀಸಲು ಪಡೆಯ 10ನೇ ಬೆಟಾಲಿಯನ್‍ ಗೆ 8 ಕೋಟಿ ರೂ.  ಮೀಸಲಿಡಲಾಗಿದೆ. . ಹಾವೇರಿ, ಕೊಡಗು ಜಿಲ್ಲೆಯಲ್ಲಿ ಹೊಸ ಪೊಲೀಸ್ ಸಂಕೀರ್ಣ ನಿರ್ಮಿಸಲು  ಜಿಲ್ಲೆಗೆ 8 ಕೋಟಿ ನೀಡುತ್ತಿರುವುದು ವಿಶೇಷ.

ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅಗ್ನಿಸುರಕ್ಷತೆ ಮತ್ತು ಉನ್ನತ್ತೀಕರಿಸಿದ ಸೇವೆ ಒದಗಿಸಲು ಮುಂದಿನ ಐದು ವರ್ಷಗಳಿಗೆ ಕೆ-ಸೇಫ್-2 ಯೋಜನೆಯನ್ನು ರೂಪಿಸಲಾಗಿದೆ. . ರಾಜ್ಯದ ಕರಾವಳಿ ಪ್ರದೇಶಗಳ ಸುರಕ್ಷತೆ ಮತ್ತು ಭದ್ರತೆಗೆ ಮೀಸಲಿರುವ ಕಾವಲು ಪಡೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಲು 8 ಕೋಟಿ ರೂ.ಗಳನ್ನು ನೀಡಲಾಗಿದೆ. 40 ಕೋಟಿ ರೂ. ವೆಚ್ಚದಲ್ಲಿ 8 ಕಾರಾಗೃಹಗಳ ಸಾಮರ್ಥ್ಯ ಹೆಚ್ಚಿಸಲು 10 ಕೋಟಿ ರೂ. ಮೀಸಲಿಡಲಾಗಿದೆ.

ಇನ್ನುಳಿದಂತೆ ಕಾರಾಗೃಹದಿಂದಲೇ ಖೈದಿಗಳನ್ನು ಆನ್‍ಲೈನ್ ಮೂಲಕ ನ್ಯಾಯಾಲಯದ ಕಲಾಪಕ್ಕೆ ಹಾಜರುಪಡಿಸಲು ವಿಡಿಯೋಕಾನರೆನ್ಸಿಂಗ್ ಸೌಲಭ್ಯ ರೂಪಿಸಲು 15 ಕೋಟಿ ರೂ. ಮೀಸಲಿಡಲಾಗಿದೆ. ಪೊಲೀಸ್ ಇಲಾಖೆ ಸಹ ವಿವಿಧ ಬೇಡಿಕೆಗಳನ್ನು ಮುಂದೆ ಇಟ್ಟಿತ್ತು. 
"