ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 1 ಲಕ್ಷ ರು. ಬಹುಮಾನ
SSLC ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 1 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಬೆಂಗಳೂರು [ಮಾ.06]: ಹಿಂದುಳಿದ ಹಾಗೂ ಪರಿಶಿಷ್ಟವರ್ಗಗಳ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು, ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 9,444 ಕೋಟಿ ರು. ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಗೆ ಒದಗಿಸಿದೆ.
ಪರಿಶಿಷ್ಟಜಾತಿ, ಪಂಗಡದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಷೇರು ಬಂಡವಾಳವನ್ನು 10 ಲಕ್ಷ ರು.ನಿಂದ 20 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿದೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿನ 26,131 ಕೋಟಿ ರು. ಮೊತ್ತವನ್ನು 26,930 ಕೋಟಿ ರು.ಗೆ ಹೆಚ್ಚಳ ಮಾಡಲಾಗಿದೆ. ಇದು ಕಡ್ಡಾಯವಾಗಿ ನೀಡಬೇಕಾದ ಅನುದಾನಕ್ಕಿಂತ ಹೆಚ್ಚಿದೆ. ವಸತಿ ಶಾಲೆಗಳಲ್ಲಿ ಕನಿಷ್ಠ ಶೇ.25ರಷ್ಟುಸೀಟುಗಳನ್ನು ಆಯಾ ತಾಲೂಕಿನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಸ್‌ಸಿ, ಎಸ್‌ಟಿ ನಿರುದ್ಯೋಗಿ ಯುವಕ, ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮೂಲಕ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ವ್ಯವಸ್ಥೆ ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೇ, ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೆಟ್ ಕೋರ್ಸ್‌ಗಳೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ.
SSLC, PUC, ಡಿಗ್ರಿ ಪಾಸಾದವರಿಗೂ ಕೇಂದ್ರ ಸರ್ಕಾರಿ ಹುದ್ದೆ...
ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಲ್ಲಿ ಪ್ರತಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ 1 ಲಕ್ಷ ರು. ನಗದು ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 60 ಲಕ್ಷ ರು. ನಿಗದಿ ಮಾಡಲಾಗಿದೆ.
ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕಗಳನ್ನು ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಯುಷ್ ಇಲಾಖೆಯ ಸಹಯೋಗದಲ್ಲಿ 2 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆ ಮಾಡುವುದಾಗಿ ತಿಳಿಸಿದೆ. ಚರ್ಮ ಕುಶಲಕರ್ಮಿಗಳು ಚರ್ಮ ಶಿಲ್ಪ ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ 10 ಲಕ್ಷ ರು.ನಲ್ಲಿ 5 ಲಕ್ಷ ರು. ಸಹಾಯಧನವನ್ನು 250 ಫಲಾನುಭವಿಗಳಿಗೆ ನೀಡಲಾಗುವುದು. ಈ ಉದ್ದೇಶಕ್ಕಾಗಿ 12.50 ಕೋಟಿ ರು. ಒದಗಿಸಲಾಗಿದೆ. ರಾಜ್ಯದಲ್ಲಿನ ವಿವಿಧ ಅಲೆಮಾರಿ, ಅರೆ ಅಲೆಮಾರಿ, ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 78 ಕೋಟಿ ರು. ಒದಗಿಸಲು ತೀರ್ಮಾನಿಸಿದೆ.