Asianet Suvarna News Asianet Suvarna News

BBMP Elections 2022: ಪಾಲಿಕೆ ಚುನಾವಣೆ ಮೇಲೆ ಬಿಜೆಪಿ ಕಣ್ಣು: ಜ. 25ರಿಂದ 3 ದಿನ ಸಭೆ!

*ಇಂದಿನಿಂದ 3 ದಿನ ಬಿಜೆಪಿ ಬಿಬಿಎಂಪಿ ಎಲೆಕ್ಶನ್‌ ಸಭೆ
*ಬೊಮ್ಮಾಯಿ, ಕಟೀಲ್‌ ಸೇರಿ ನಗರ ಸಚಿವರು, ಶಾಸಕರು, ಪದಾಧಿಕಾರಿಗಳು ಭಾಗಿ
*ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಆರಂಭ

Karnataka BJP to hold 3 days meeting from Tuesday ahead of Bengaluru BBMP Elections 2022 mnj
Author
Bengaluru, First Published Jan 25, 2022, 8:45 AM IST

ಬೆಂಗಳೂರು (ಜ. 25):  ಮುಂಬರುವ ಬಿಬಿಎಂಪಿ ಚುನಾವಣೆ (BBMP Election) ದೃಷ್ಟಿಯಿಂದ ಮಂಗಳವಾರದಿಂದ ಮೂರು ದಿನಗಳ ಕಾಲ ಬಿಜೆಪಿಯ ಪೂರ್ವಸಿದ್ಧತಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಗರದ ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಜಿಲ್ಲಾ ಪದಾಧಿಕಾರಿಗಳು, ಮಂಡಲಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ. ಒಂದೊಂದು ದಿನ ಒಂದೊಂದು ಸಂಘಟನಾತ್ಮಕ ಜಿಲ್ಲೆಯ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದೊಂದು ವರ್ಷದಿಂದ ಬಿಬಿಎಂಪಿ ಚುನಾವಣೆ ನೆನೆಗುದಿಗೆ ಬಿದ್ದಿರುವುದಕ್ಕೆ ಪಕ್ಷದಲ್ಲಿ ತೀವ್ರ ಅಸಮಾಧಾನ ಕಾಣಿಸಿಕೊಂಡಿದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ದೂರನ್ನೂ ನೀಡಿದ್ದರು. ಇದು ಹೀಗೆಯೇ ಮುಂದುವರೆದಲ್ಲಿ ಮುಂಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಹೊಂದಿದ್ದ ಹಿರಿಯ ನಾಯಕರು ಇನ್ನು ಚುನಾವಣೆ ವಿಳಂಬ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬಂದರು.

ಇದ್ನನೂ ಓದಿ: Covid-19 Crisis: ಕೊರೋನಾ 3ನೇ ಅಲೆ ಎದುರಿಸಲು ಬಿಬಿಎಂಪಿ ಸನ್ನದ್ಧ

ಪರಿಣಾಮ ಕಳೆದ ವಾರ ಪಕ್ಷದ ನಾಯಕರ ಸೂಚನೆ ಮೇರೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ದಿಢೀರನೆ ಪಕ್ಷದ ಕಚೇರಿಗೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್‌ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿದರು. ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥಪಡಿಸಿ ಬರುವ ಏಪ್ರಿಲ್‌ ವೇಳೆ ಚುನಾವಣೆ ನಡೆಸಲು ಪ್ರಯತ್ನಿಸಬೇಕು ಎಂಬ ನಿರ್ಧಾರಕ್ಕೆ ಬಂದರು. ಆ ಪ್ರಕಾರ ಈಗ ಪೂರ್ವ ಸಿದ್ಧತಾ ಸಭೆ ನಡೆಯಲಿವೆ.

ಏಪ್ರಿಲ್‌ನಲ್ಲಿ ಬಿಬಿಎಂಪಿ ಚುನಾವಣೆಗೆ ಚಿಂತನೆ: ನೆನೆಗುದಿಗೆ ಬಿದ್ದಿರುವ ಬಿಬಿಎಂಪಿ(BBMP) ಚುನಾವಣೆಯನ್ನು(Election) ಬರುವ ಏಪ್ರಿಲ್‌ ತಿಂಗಳಲ್ಲಿ ನಡೆಸುವ ಸಾಧ್ಯತೆ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌(Nalin Kumar Kateel) ಅವರು ಗಂಭೀರ ಮಾತುಕತೆ ನಡೆಸಿದ್ದಾರೆ. ಬುಧವಾರ ರಾತ್ರಿ ಬಿಜೆಪಿ ಕಚೇರಿಗೆ ತೆರಳಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ನಳಿನ್‌ ಕುಮಾರ್‌ ಕಟೀಲ್‌, ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌(Arun Kumar) ಸುದೀರ್ಘ ಮಾತುಕತೆ ನಡೆಸಿದರು.

ಇದನ್ನೂ ಓದಿ: Karnataka Politics: ತಡರಾತ್ರಿ ಮೂರೂವರೆ ಗಂಟೆ ಸಿಎಂ ಬೊಮ್ಮಾಯಿ ಸೀಕ್ರೆಟ್ ಮೀಟಿಂಗ್..!

ಈ ವೇಳೆ ಬಿಬಿಎಂಪಿ ಚುನಾವಣೆ ವಿಳಂಬವಾಗುತ್ತಿರುವುದರಿಂದ ಪಕ್ಷದ ನಗರದ ಕಾರ್ಯಕರ್ತರು(Activists) ಬೇಸರಗೊಂಡಿರುವ ವಿಷಯವನ್ನು ಪಕ್ಷದ ನಾಯಕರು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಿದ್ದಾರೆ. ಇನ್ನಷ್ಟು ವಿಳಂಬ ಮಾಡುವುದರಿಂದ ಮುಂದಿನ ವರ್ಷದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ(General Election) ಮೇಲೂ ಪರಿಣಾಮ ಬೀರಲಿದೆ. ಹೆಚ್ಚು ತಡ ಮಾಡದೆ ಚುನಾವಣೆ ನಡೆಸುವತ್ತ ಗಮನಹರಿಸಬೇಕಾಗಿದೆ ಎಂಬ ಮಾತನ್ನು ಕಟೀಲ್‌ ಅವರು ಪ್ರತಿಪಾದಿಸಿದರು ಎನ್ನಲಾಗಿದೆ.

ಬಿಬಿಎಂಪಿ ಚುನಾವಣೆ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ(Supreme Court) ಪ್ರಕರಣವಿದೆ. ಅದನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸಲು ಬೇಕಾದ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲಾಗುವುದು. ಮುಂದಿನ ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ಮೊದಲ ವಾರದಲ್ಲಿ 2022-23ನೇ ಸಾಲಿನ ರಾಜ್ಯದ ಬಜೆಟ್‌(Budget) ಮಂಡಿಸಿದ ಬಳಿಕ ಕೋವಿಡ್‌(Covid-19) ಪ್ರಕರಣಗಳ ತೀವ್ರತೆ ಆಧರಿಸಿ ಚುನಾವಣೆ ನಡೆಸುವುದಕ್ಕೆ ಬೇಕಾದ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios