ಉದಯ ಕುಮಾರ್ ಹೆಬ್ಬಾರ್ ಅವರು ಕರ್ಣಾಟಕ ಬ್ಯಾಂಕ್ನ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ನೇಮಕಕ್ಕೆ ಮೂರು ವರ್ಷಗಳ ಅವಧಿಗೆ ಅನುಮೋದನೆ ನೀಡಿದೆ.
ಮಂಗಳೂರು (ನ.18): ದಕ್ಷಿಣ ಕನ್ನಡ ಮೂಲದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆದ 'ಕರ್ಣಾಟಕ ಬ್ಯಾಂಕ್' (Karnataka Bank) ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (MD & CEO) ಹಿರಿಯ ಬ್ಯಾಂಕಿಂಗ್ ತಜ್ಞ ಉದಯ ಕುಮಾರ್ ಹೆಬ್ಬಾರ್ ನೇಮಕಗೊಂಡಿದ್ದಾರೆ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆಯ ಬೆನ್ನಲ್ಲೇ, ಮೂರು ವರ್ಷಗಳ ಅವಧಿಗೆ ಇವರನ್ನು ನೇಮಕ ಮಾಡಿರುವುದಾಗಿ ಬ್ಯಾಂಕ್ ಷೇರುಪೇಟೆಗೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.
ನವೆಂಬರ್ 16ರಂದು ಆರ್ಬಿಐ ಉದಯ ಕುಮಾರ್ ಹೆಬ್ಬಾರ್ ಅವರ ನೇಮಕಾತಿಗೆ ತನ್ನ ಅನುಮೋದನೆಯನ್ನು ರವಾನಿಸಿದೆ. ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ವರ್ಷಗಳ ಅಧಿಕಾರಾವಧಿ ಆರಂಭವಾಗಲಿದ್ದು, ಅವರು ಸೇರ್ಪಡೆಯಾಗುವ ದಿನಾಂಕವನ್ನು ಷೇರುಪೇಟೆಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ. ಈ ನೇಮಕಾತಿಯು ಬ್ಯಾಂಕ್ನ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ.
ಕೆಲವೇ ದಿನಗಳ ಹಿಂದಷ್ಟೇ ಮಧ್ಯಂತರ ಎಂಡಿ ನೇಮಕವಾಗಿತ್ತು
ವಿಶೇಷವೆಂದರೆ, ಕೆಲವೇ ದಿನಗಳ ಹಿಂದಷ್ಟೇ ಕರ್ನಾಟಕ ಬ್ಯಾಂಕ್ ಬಿಜಿ ಶ್ರೀಕೃಷ್ಣವಿಲಾಸ್ ಶಂಕರನಾರಾಯಣನ್ (Biji Sreekrishnavilas Sankaranarayanan) ಅವರನ್ನು ಎರಡು ತಿಂಗಳ ಅವಧಿಗೆ ಮಧ್ಯಂತರ ಎಂಡಿ ಮತ್ತು ಸಿಇಒ (Interim MD & CEO) ಆಗಿ ನೇಮಿಸಿತ್ತು. ಇದೀಗ ಪೂರ್ಣಾವಧಿ ಎಂಡಿ ಮತ್ತು ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ಅವರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
40 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಉದಯ ಕುಮಾರ್ ಹೆಬ್ಬಾರ್ ಯಾರು?
ಉದಯ ಕುಮಾರ್ ಹೆಬ್ಬಾರ್ ಅವರು ವಾಣಿಜ್ಯ ಬ್ಯಾಂಕಿಂಗ್, ಬ್ಯಾಂಕಿಂಗ್ ಕಾರ್ಯಾಚರಣೆಗಳು, ಗ್ರಾಮೀಣ ಮತ್ತು ಕೃಷಿ ಹಣಕಾಸು, ಮೈಕ್ರೋ-ಬ್ಯಾಂಕಿಂಗ್, ಆಡಳಿತ ಮತ್ತು ಅಪಾಯ ನಿರ್ವಹಣೆ (Risk management) ಕ್ಷೇತ್ರಗಳಲ್ಲಿ 40 ವರ್ಷಗಳಿಗೂ ಹೆಚ್ಚಿನ ಅಪಾರ ಅನುಭವ ಹೊಂದಿದ್ದಾರೆ
ಮೂಲತಃ ಕುಂದಾಪುರದವರೇ ಆದ ಉದಯ್ ಕುಮಾರ್ ಹೆಬ್ಬಾರ್, ಅಲ್ಲಿನ ಪ್ರತಿಷ್ಠಿತ ಭಂಡಾರ್ಕರ್ಸ್ ಕಾಲೇಜಿನಿಂದ (Bhandarkars' College, Kundapura - ಕರ್ನಾಟಕ ವಿಶ್ವವಿದ್ಯಾಲಯ) ಬಿ.ಕಾಂ (B.Com) ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಕಾಂ (M.Com) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
2010ರ ಸೆಪ್ಟೆಂಬರ್ನಿಂದ 2015ರ ಜೂನ್ವರೆಗೆ ಸಿಇಒ ಆಗಿ ಮತ್ತು 2015ರ ಜೂನ್ನಿಂದ 2025ರ ಜೂನ್ವರೆಗೆ ಎಂಡಿ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಆಗಸ್ಟ್ 2015ರಿಂದ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದು, ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ (Non-Executive Director) ಕಾರ್ಯನಿರ್ವಹಿಸಿದ್ದಾರೆ. ಸುಮಾರು 14 ವರ್ಷಗಳ ಕಾಲ ಸಂಸ್ಥೆಯಲ್ಲಿದ್ದ ಇವರ ನಾಯಕತ್ವದಲ್ಲಿ, 'ಕ್ರೆಡಿಟ್ಆಕ್ಸೆಸ್ ಗ್ರಾಮೀಣ್' ದೇಶದ ಅತಿದೊಡ್ಡ ಮೈಕ್ರೋಫೈನಾನ್ಸ್ ಸಂಸ್ಥೆಯಾಗಿ (MFI) ಬೆಳೆದು ಉನ್ನತ ರೇಟಿಂಗ್ಗಳು ಮತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದೆ.
ಕ್ರೆಡಿಟ್ಆಕ್ಸೆಸ್ ಗ್ರಾಮೀಣ್ ಸೇರುವ ಮೊದಲು ಬಾರ್ಕ್ಲೇಸ್ ಬ್ಯಾಂಕ್ನಲ್ಲಿ (Barclays Bank PLC) ಮೂರು ವರ್ಷಗಳ ಕಾಲ ವಾಣಿಜ್ಯ ಬ್ಯಾಂಕಿಂಗ್ ಮತ್ತು ಪಾವತಿ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು. ಅದಕ್ಕೂ ಮುನ್ನ ಐಸಿಐಸಿಐ ಬ್ಯಾಂಕ್ನಲ್ಲಿ (ICICI Bank) 11 ವರ್ಷಗಳಿಗೂ ಹೆಚ್ಚು ಕಾಲ ನಾಯಕತ್ವದ ಹುದ್ದೆಗಳಲ್ಲಿ ಮತ್ತು ಕಾರ್ಪೊರೇಷನ್ ಬ್ಯಾಂಕ್ನಲ್ಲಿ (Corporation Bank) ಒಂದು ದಶಕಕ್ಕೂ ಹೆಚ್ಚು ಕಾಲ ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಮೈಕ್ರೋಫೈನಾನ್ಸ್ ಉದ್ಯಮದಲ್ಲಿ ಸಹಯೋಗದ ನಾಯಕತ್ವ ಮತ್ತು ನಾವೀನ್ಯತೆಗೆ ಹೆಸರಾಗಿರುವ ಹೆಬ್ಬಾರ್, ಈ ಹಿಂದೆ ಎರಡು ಬಾರಿ 'ಮೈಕ್ರೋಫೈನಾನ್ಸ್ ಇನ್ಸ್ಟಿಟ್ಯೂಷನ್ಸ್ ನೆಟ್ವರ್ಕ್' (MFIN) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
2024-25ನೇ ಆರ್ಥಿಕ ವರ್ಷದ (FY25) ವಾರ್ಷಿಕ ವರದಿಯ ಪ್ರಕಾರ, ಉದಯ ಕುಮಾರ್ ಹೆಬ್ಬಾರ್ ಅವರ ಒಟ್ಟು ವಾರ್ಷಿಕ ಸಂಭಾವನೆ ₹4.9 ಕೋಟಿ ಆಗಿತ್ತು. ಇದರಲ್ಲಿ ₹4.9 ಕೋಟಿ ನಗದು ಸಂಭಾವನೆ ಮತ್ತು ಉಳಿದದ್ದು ESOP ಸೌಲಭ್ಯ ಮೌಲ್ಯವಾಗಿದೆ; ಇದು ಸರಾಸರಿ ಉದ್ಯೋಗಿ ವೇತನದ 100 ಪಟ್ಟು ಆಗಿದೆ.












