ಭಾರತ್ ಬಂದ್ ಬೆಂಬಲಿಸಿ ಸೆ.27ಕ್ಕೆ ಕರ್ನಾಟಕ ಬಂದ್
- ದೇಶದ 500 ಹೆಚ್ಚು ರೈತ ಸಂಘಟನೆಗಳು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಸೆ.27 ರಂದು ಭಾರತ್ ಬಂದ್
- ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ಮುಖ್ಯಸ್ಥರ ಮಾಹಿತಿ
ಮೈಸೂರು (ಸೆ.13): ದೇಶದ 500 ಹೆಚ್ಚು ರೈತ ಸಂಘಟನೆಗಳು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಸೆ.27 ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದು, ಅದನ್ನು ಬೆಂಬಲಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ಮುಖ್ಯಸ್ಥರಾದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಕೇಂದ್ರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಖಾತ್ರಿ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನಿಲ್ಲಿಸಲು ಯತ್ನಿಸುತ್ತಿರುವ ವಿದ್ಯುತ್ ಖಾಸಗೀಕರಣ ಕೈಬಿಡಬೇಕು, ಜನಸಾಮಾನ್ಯರ ಅಡುಗೆ ಅನಿಲ, ಡೀಸೆಲ್ ಪೆಟ್ರೋಲ್ ರಸಗೊಬ್ಬರ ಬೆಲೆಗಳನ್ನು ಇಳಿಸಲು ಆಗ್ರಹಿಸಿ ಭಾರತ್ ಬಂದ್‌ಗೆ ಕರೆ ನೀಡಿದ್ದು, ಅದನ್ನು ಬೆಂಬಲಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ರಾಜ್ಯದ ಎಲ್ಲಾ ಜನಪರ ರೈತಪರ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸಿಎಂ ಭೇಟಿ ಮಾಡಿದ ಕುರುಬೂರು : ರೈತ ಸಮಸ್ಯೆಗಳ ಮನವರಿಕೆ
ಆಡಳಿತ ವಿರೋಧಿ ರಾಜಕೀಯ ಪಕ್ಷಗಳು ನೆಪಮಾತ್ರಕ್ಕೆ ಕೊನೆಗಳಿಗೆಯಲ್ಲಿ ಬಂದ್ ಬೆಂಬಲಿಸುವುದು ನಾಟಕೀಯವಾಗುತ್ತದೆ. ಕೂಡಲೇ ಈ ಬಗ್ಗೆ ಚಿಂತನೆ ನಡೆಸಿ ಸಕ್ರಿಯವಾಗಿ ಪ್ರಾಮಾಣಿಕವಾಗಿ ಬಂದ್ ಬೆಂಬಲಿಸಲು ಚಿಂತನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರೋಧಿಸಿ ಸೆ.8 ರಂದು ಆರ್‌ಎಸ್‌ಎಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘವು ದೇಶಾದ್ಯಂತ ಚಳವಳಿ ನಡೆಸಿದೆ. ಕೇಂದ್ರ ಕೃಷಿ ಸಚಿವ ಶೋಭಾ ಕರಂದ್ಲಾಜೆ ದೆಹಲಿ ರೈತ ಹೋರಾಟಗಾರರನ್ನು ದಲ್ಲಾಳಿಗಳು, ಮಧ್ಯವರ್ತಿಗಳು ಎಂದು ಹೇಳಿದ್ದ ಸಚಿವೆ ಬಿಕೆಎಸ್ ಬಗ್ಗೆ ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.
ಇವರಿಗೆ ಮರುಭೂಮಿಯಲ್ಲಿ ಮಾಣಿಕ್ಯ ಸಿಕ್ಕಂತಾಗಿದೆ, ಕೃಷಿ ಕಾಯ್ದೆಗಳ ಬಗ್ಗೆ ಅರಿವಿಲ್ಲದಿದ್ದರೆ ರೈತ ಮುಖಂಡರ ಜೊತೆ ಸಂವಾದ ನಡೆಸಲಿ. ಬ್ಯಾಂಕುಗಳು, ಸಹಕಾರ ಬ್ಯಾಂಕ್ ರೈತರಿಗೆ ಸಾಲ ನೀಡಲು ಕಿರುಕುಳ ನೀಡುತ್ತಿದ್ದಾರೆ. . 2 ಲಕ್ಷ ತನಕ ರೈತರ ಸಾಲ ಅಡಮಾನ ನೋಂದಣಿ ಬೇಕಿಲ್ಲ ಹಾಗೂ ಎನ್‌ಡಿಸಿ ಸರ್ಟಿಫಿಕೇಟ್ ಬೇಕಿಲ್ಲ ಎಂಬ ನಿಯಮವಿದ್ದರೂ ರೈತರನ್ನು ಇದಕ್ಕಾಗಿ ಅಲೆದಾಡುಸುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ರೈತರಿಗೆ ಬ್ಯಾಂಕುಗಳ ಬಗ್ಗೆ ಅಸಹ್ಯವಾಗುತ್ತಿದೆ. ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೆ.24 ರಂದು ಮಾರ್ಗದರ್ಶಿ ಬ್ಯಾಂಕ್ ಮುಖ್ಯಸ್ಥರು, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರು, ರೈತ ಪ್ರತಿನಿಧಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದ್ದು, ಕಾದು ನೋಡುತ್ತೇವೆ ಎಂದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ದೇವೇಂದ್ರಕುಮಾರ್ ಇದ್ದರು.
ವಿಧಾನ ಸೌಧ ಮುತ್ತಿಗೆ- ಎಚ್ಚರಿಕೆ
ಕೇಂದ್ರ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ದರವನ್ನು ಎರಡು ವರ್ಷದಿಂದ ನಿರ್ಲಕ್ಷ್ಯ ಮಾಡಿ ಈಗ ಕೇವಲ . 5 ಏರಿಕೆ ಮಾಡಿ ರೈತರಿಗೆ ದ್ರೋಹ ಬಗೆದಿದೆ. ಕೆಜಿ ಕೂದಲಿನ ಬೆಲೆ . 15 ಸಾವಿರಕ್ಕೆ ಮಾರಾಟವಾಗುತ್ತದೆ. ಆದರೆ ರೈತ ಒಂದು ವರ್ಷ ಕಷ್ಟಪಟ್ಟು ಬೆಳೆವ ಕಬ್ಬಿಗೆ ಕೇವಲ . 5 ಏರಿಕೆ ಹೇಗೆ ಮಾಡುತ್ತಾರೆ? ಇದರ ಬಗ್ಗೆ ಮಾತನಾಡಲು ಕೇಂದ್ರ ಕೃಷಿ ಸಚಿವ ಶೋಭಾ ಕರಂದ್ಲಾಜೆ ತಿಳಿದಿಲ್ಲವೇ? ಈ ತಿಂಗಳ ಅಂತ್ಯದ ಒಳಗಾಗಿ ಎಫ್‌ಆರ್‌ಪಿ ದರ ಪುನರ್ ಪರಿಶೀಲನೆ ಆಗದಿದ್ದರೆ ರಾಜ್ಯದ 20 ಲಕ್ಷ ಕಬ್ಬು ಬೆಳೆಗಾರರು ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.