ಅಂಜನಾದ್ರಿ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಹನುಮ ಪ್ರತಿಮೆ.. ಜೈ ಆಂಜನೇಯ
ಕರ್ನಾಟಕದ ಜನರಿಗೆ ಶುಭ ಸುದ್ದಿ/ ಬಳ್ಳಾರಿ ಹಂಪಿ ಬಳಿ ಬೃಹತ್ ಆಂಜನೇಯ ಪ್ರತಿಮೆ/ 215 ಮೀಟರ್ ಎತ್ತರದ ಹನುಮಂತನ ಮೂರ್ತಿ/ ಹನುಮನ ಜನ್ಮ ಸ್ಥಾನ ಎಂಬ ನಂಬಿಕೆ
ಬಳ್ಳಾರಿ (ನ. 17) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆರಂಭವಾದ ನಂತರದಲ್ಲಿ ಪುತ್ಥಳಿ ಸ್ಥಾಪನೆ ವಿಚಾರಗಳು ಸದ್ದು ಮಾಡುತ್ತಿವೆ.
ಸರ್ದಾರ್ ಪಟೇಲರ ಪ್ರತಿಮೆ ಸ್ಥಾಪನೆ ನಂತರ ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮನ ಪ್ರತಿಮೆ, ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಹೀಗೆ ಪಟ್ಟಿ ಬೆಳೆಯುತ್ತಲೆ ಇದೆ.
ಕರ್ನಾಟಕಕ್ಕೂ ಒಂದು ಶುಭ ಸುದ್ದಿ ಇದ್ದು ಬಳ್ಳಾರಿ ಬಳಿಯ ಹಂಪಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ(ಪಂಪಾಪುರ ಕಿಷ್ಕಿಂದ) ವಿಶ್ವದ ಅತಿ ಎತ್ತರದ ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಹಂಪಿ ಮೂಲದ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, 215 ಮೀಟರ್ ಎತ್ತರದ ಹನುಮಂತನ ಮೂರ್ತಿಯನ್ನು ನಿರ್ಮಿಸಲು ಮುಂದಾಗಿದೆ. ಹನುಮಂತನ ಜನ್ಮಸ್ಥಳವಾದ ಕಿಷ್ಕಿಂಧಾದಲ್ಲಿ ಒಟ್ಟು 1,200 ಕೋಟಿ ರೂ. ವೆಚ್ಚದಲ್ಲಿ ರಾಮಭಕ್ತ ಹನುಮಂತನ ವಿಗ್ರಹ ನಿರ್ಮಿಸಲು ಯೋಜನೆ ಸಿದ್ಧವಾಗಿದ್ದು ಆರು ವರ್ಷದ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಮೂರ್ತಿ 221 ಮೀಟರ್ ಎತ್ತರವಿರಲಿದ್ದು, ಹಂಪಿಯಲ್ಲಿ ನಿರ್ಮಾಣವಾಗಲಿರುವ ಹನುಮಂತನ ಮೂರ್ತಿ 215 ಮೀಟರ್ ಎತ್ತರವಿರಲಿದೆ ಎಂದು ತಿಳಿದುಬಂದಿದೆ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ಹಂಪಿಯ ಸುತ್ತಲಿನಲ್ಲಿ ಮತ್ತೊಂದು ಅದ್ಭುತ ನಿರ್ಮಾಣವಾಗಲಿದೆ. ಬೆಟ್ಟಕ್ಕೆ ಎಲಿವೇಟರ್ ಸಹ ನಿರ್ಮಾಣ ಮಾಡಲಾಗುವುದು.