ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಕರ್ನಾಟಕ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ. ಪ್ರತಿ ಪಾಲಿಕೆಯು ಪ್ರತ್ಯೇಕ ಆಡಳಿತ ಘಟಕವಾಗಿ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರಿಂದ 30 ದಿನಗಳೊಳಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ನಗರ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಕರ್ನಾಟಕ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ (Greater Bengaluru Authority – GBA) ಐದು ಪಾಲಿಕೆಯಾಗಿ ವಿಂಗಡಿಸಿ ಹೊಸ ಅಧಿಸೂಚನೆಯನ್ನು ಜಾರಿ ಮಾಡಿದೆ. ನಗರಾಭಿವೃದ್ಧಿ ಇಲಾಖೆಯು ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರ ಜೊತೆಗೆ ಈ ಬಾರಿಯ ಮಳೆಗಾಲದ ಅಧಿವೇಶನದಲ್ಲಿ (monsoon session) ಗ್ರೇಟರ್ ಬೆಂಗಳೂರು ಬಿಲ್ ಪಾಸ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಂದಿನ ತಿಂಗಳು ಆಗಸ್ಟ್ 11ರಂದು ಮಳೆಗಾಲದ ಅಧಿವೇಶನ ನಡೆಯಲಿದೆ.

ಅಧಿಸೂಚನೆಯಂತೆ ಬೆಂಗಳೂರು ನಗರವನ್ನು ಈ ಕೆಳಗಿನ ಐದು ಹೊಸ ಪಾಲಿಕೆಗಳಾಗಿ ವಿಂಗಡಿಸಲಾಗಿದೆ:

  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ
  • ಬೆಂಗಳೂರು ದಕ್ಷಿಣ ನಗರ ಪಾಲಿಕೆ
  • ಬೆಂಗಳೂರು ಉತ್ತರ ನಗರ ಪಾಲಿಕೆ
  • ಬೆಂಗಳೂರು ಪೂರ್ವ ನಗರ ಪಾಲಿಕೆ
  • ಬೆಂಗಳೂರು ಕೇಂದ್ರ ನಗರ ಪಾಲಿಕೆ

ಈ ಹೊಸ ವಿಂಗಡನೆಯು ನಗರದ ಗಡಿಗಳ ಆಧಾರದಲ್ಲಿ ರೂಪುಗೊಂಡಿದೆ ಮತ್ತು ಪ್ರತಿ ಪಾಲಿಕೆ ಪ್ರತ್ಯೇಕ ಆಡಳಿತಿಕ ಘಟಕವಾಗಿ ಕಾರ್ಯನಿರ್ವಹಿಸಲಿದೆ. ಅಧಿಸೂಚನೆಯ ಪ್ರಕಾರ, ಈ ತೀರ್ಮಾನದ ಬಗ್ಗೆ ಸಾರ್ವಜನಿಕರಿಂದ 30 ದಿನಗಳೊಳಗೆ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ. ಸಾರ್ವಜನಿಕ ಅಭಿಪ್ರಾಯಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದೇ ವೇಳೆ, ನಾಗರಿಕರು ತಮ್ಮ ಸಲಹೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವದ ಬಳಿಕ ಬಿಬಿಎಂಪಿ ಅಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇರುವುದಿಲ್ಲ. ಬೆಂಗಳೂರಿನ ಸಮಗ್ರ ನೇತೃತ್ವವು ಜಿಬಿಎ ಹಿಡಿತದಲ್ಲೇ ಇರಲಿದೆ.