ಕಾರ್ಗಿಲ್‌ ಯುದ್ಧ 23ನೇ ವರ್ಷದ ವಿಜಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಜಿಲ್ಲಾ ಸಂಘಟನೆ ಮತ್ತು ರೋಟರಿ ಹೆರಿಟೇಜ್‌ ಕ್ಲಬ್‌ ಸಹಯೋಗದಲ್ಲಿ ಬೃಹತ್‌ ಬೈಕ್‌ ಜಾಥಾವನ್ನು ಮಂಗಳವಾರ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕಾರ್ಗಿಲ್‌ ಯುದ್ಧ 23ನೇ ವರ್ಷದ ವಿಜಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಜಿಲ್ಲಾ ಸಂಘಟನೆ ಮತ್ತು ರೋಟರಿ ಹೆರಿಟೇಜ್‌ ಕ್ಲಬ್‌ ಸಹಯೋಗದಲ್ಲಿ ಬೃಹತ್‌ ಬೈಕ್‌ ಜಾಥಾವನ್ನು ಮಂಗಳವಾರ ಆಯೋಜಿಸಿತು. ಈ ಮೂಲಕ ದೇಶಕ್ಕಾಗಿ ಯುದ್ಧದಲ್ಲಿ ಬಲಿದಾನ ಮಾಡಿದ ಯೋಧರಿಗೆ ಗೌರವ ಸಲ್ಲಿಸಲಾಯಿತು. ಈ ಬೈಕ್‌ ಜಾಥಾಕ್ಕೆ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ (ಮೆಟ್ರೋಪೊಲ್‌) ವೃತ್ತದಲ್ಲಿ ಶಾಸಕರಾದ ಸಿ.ಎನ್‌. ಮಂಜೇಗೌಡ, ಎಲ್‌. ನಾಗೇಂದ್ರ ಅವರು ಜಂಟಿಯಾಗಿ ಚಾಲನೆ ನೀಡಿದರು.

ನಿವೃತ್ತ ಯೋಧರು, ಎನ್‌ಸಿಸಿ ಕೆಡಟ್ಸ್‌ ಮತ್ತು ರೋಟರಿ ಸದಸ್ಯರು ಸೇರಿ ಸುಮಾರು 350 ಹೆಚ್ಚಿನ ಜನರು ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದರು. ರಾರ‍ಯಲಿ ವೇಳೆ ದೇಶಪ್ರೇಮ ಮತ್ತು ಸೈನಿಕರ ತ್ಯಾಗ ಬಲಿದಾನವನ್ನು ಪರಿಚಯಿಸಲಾಯಿತು. ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದವರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಗಮನ ಸೆಳೆದರು. ಯೋಧರ ಪರ ಘೋಷಣೆ ಕೂಗಿದರು. ಜೈ ಜವಾನ್‌, ಜೈ ಕಿಸಾನ್‌ ಘೋಷಣೆಗಳು ಮೊಳಗಿದವು.

ರಾರ‍ಯಲಿಯು ಜೆಎಲ್‌ಬಿ ರಸ್ತೆ, ರೈಲ್ವೆ ನಿಲ್ದಾಣ ಬಳಿಯ ಡಾ. ಬಾಬು ಜಗಜೀವನರಾಮ್‌ ವೃತ್ತದ ಮಾರ್ಗವಾಗಿ ಸಯ್ಯಾಜಿರಾವ್‌ ರಸ್ತೆ, ಪ್ರಭಾ ಚಿತ್ರಮಂದಿರದ ರಸ್ತೆ, ಗಾಂಧಿ ಚೌಕ, ದೊಡ್ಡ ಗಡಿಯಾರ, ಚಾಮರಾಜ ವೃತ್ತ, ಅಲ್ಬರ್ಚ್‌ ವಿಕ್ಟರ ರಸ್ತೆ, ಗನ್‌ಹೌಸ್‌ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಸರಸ್ವತಿಪುರಂ ಅಗ್ನಿಶಾಮಕ ದಳದ ಮಾರ್ಗವಾಗಿ ಬಳಸಿಕೊಂಡು ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಮುಕ್ತಾಯಗೊಂಡಿತು.

ನಂತರ ರೋಟರಿ ಪಶ್ಚಿಮ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಣಾರ್ಪಣೆ ಮಾಡಿದ ಯೋಧರಿಗೆ ಒಂದು ನಿಮಿಷದ ಮೌನಾಚರಣೆ ಸಲ್ಲಿಸಲಾಯಿತು. ಈ ವೇಳೆ ಮಹಾತ್ಮ ಗಾಂಧಿ, ಜವಾಹರ್‌ ಲಾಲ್‌ ನೆಹರೂ, ಸುಭಾಷ್‌ ಚಂದ್ರ ಬೋಸ್‌, ಭಗತ್‌ ಸಿಂಗ್‌, ಓನಕೆ ಒಬವ್ವ, ಝಾನ್ಸಿರಾಣಿ ಲಕ್ಷ್ಮೇಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದವರ ವೇಷತೊಟ್ಟು ಗಮನಸೆಳೆದರು.

ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌, ರೋಟರಿ ಜಿಲ್ಲಾ ರಾಜ್ಯಪಾಲ ಎಚ್‌.ಆರ್‌. ಕೇಶವ್‌, ಸಹಾಯಕ ರಾಜ್ಯಪಾಲ ಕೆ. ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ನಂಜುಂಡಸ್ವಾಮಿ, ರೋಟರಿ ವಲಯ-8ರ ರಾಜಶೇಖರ ಕದಂಬ, ರೋಟರಿ ಹೆರಿಟೇಜ್‌ ಕ್ಲಬ್‌ ಅಧ್ಯಕ್ಷ ಸುರೇಶ್‌, ಜಗದೀಶ್‌, ಎಂ.ಪಿ. ಪ್ರಭಾಕರ್‌, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ. ದಿವಾಕರ್‌, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ನಂಜುಂಡಸ್ವಾಮಿ, ಪದಾಧಿಕಾರಿಗಳಾದ ಜೀವನ್‌, ಅಣ್ಣೇಗೌಡ, ಶಿವಕುಮಾರ್‌, ನೀಲಕಂಠಕುಮಾರ್‌ ಶೆಟ್ಟಿಮೊದಲಾದವರು ಇದ್ದರು.