ಎಂಇಎಸ್‌-ಶಿವಸೇನೆ ನಿಷೇಧಕ್ಕೆ ಒತ್ತಾಯ

ಗಡಿ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿರುವ ಶಿವ ಸೇನೆ ಹಾಗೂ ಎಂಇಎಸ್ ನಿಷೇಧ ಮಾಡಬೇಕು ಎಂದು ಕರವೇ ಮುಖಂಡರು ಆಗ್ರಹಿಸಿದ್ದಾಋಎ. ಅಲ್ಲದೇ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ. 

KARAVE Wants To Ban MES And Shiv Sena over Karnataka Border Issue

ದಾವಣಗೆರೆ [ಜ.03]:  ಬೆಳಗಾವಿ ವಿಚಾರದಲ್ಲಿ ಪದೇಪದೆ ಕ್ಯಾತೆ ತೆಗೆಯುತ್ತಾ ಕನ್ನಡ ನಾಡಧ್ವಜವನ್ನು ಸುಟ್ಟು ಹಾಕಿ, ಕನ್ನಡ-ಮರಾಠಿಗರಲ್ಲಿ ಭಾಷಾದ್ವೇಷ ಬಿತ್ತುತ್ತಿರುವ ಶಿವಸೇನೆ, ಎಂಇಎಸ್‌ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು. ಅಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು.

ನಗರದ ಶ್ರೀಜಯದೇವ ವೃತ್ತದಲ್ಲಿ ಕರವೇ ಜಿಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ, ಯುವ ಘಟಕದ ಜಿಲ್ಲಾಧ್ಯಕ್ಷ ಎಸ್‌. ಶ್ರೇಯಸ್‌ ಇತರರ ನೇತೃತ್ವದಲ್ಲಿ ಪ್ರತಿಭಟನಾ ಬೈಕ್‌ ರಾರ‍ಯಲಿ ಹೊರಟು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ್‌, ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರವು ಪದೇಪದೆ ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ಅಲ್ಲದೇ, ಕರ್ನಾಟಕದ ನಾಡಧ್ವಜ, ಸಿಎಂ ಯಡಿಯೂರಪ್ಪ ಭಾವಚಿತ್ರವನ್ನು ಸುಟ್ಟು ಹಾಕುವ ಮೂಲಕ ಕನ್ನಡಿಗರು, ಮರಾಠಿ ಭಾಷಿಗರಲ್ಲಿ ಭಾಷಾ ದ್ವೇಷವನ್ನು ಬೆಳೆಸುತ್ತಿರುವ ಎಂಇಎಸ್‌, ಶಿವಸೇನೆಯನ್ನು ತಕ್ಷಣವೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ನಾಡಿನ ಮುಕುಟಮಣಿಯಾದ ಬೆಳಗಾವಿಯಲ್ಲಿ ಕೋಮುಗಲಭೆ ಹುಟ್ಟುಹಾಕುವ ಮೂಲಕ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಿಸುವ ಕೆಲಸವನ್ನು ಶಿವಸೇನೆ, ಎಂಇಎಸ್‌ ಸಂಘಟನೆಗಳು ಮಾಡುತ್ತಿರುವುದು ಅಕ್ಷಮ್ಯ. ಶಾಂತಿಪ್ರಿಯರು, ಸಹಿಷ್ಣುಗಳಾದ ಕನ್ನಡಿಗರ ತಾಳ್ಮೆಯನ್ನು ಮರಾಠಿ ಪುಂಡರು ನಮ್ಮ ದೌರ್ಬಲ್ಯವೆಂದು ತಿಳಿದಂತಿದೆ. ಈ ಕಾರಣಕ್ಕೆ ಪದೇಪದೆ ಒಂದಿಲ್ಲೊಂದು ವಿಚಾರ ಕೆದಕಿ, ಕನ್ನಡಿಗರ ಮೇಲೆ ಆಕ್ರಮಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗಡಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಸಿದ್ರೆ ಮತ್ತೆ ಬೆಂಕಿ ಹತ್ತುತ್ತೆ...

ಯುವ ಘಟಕದ ಜಿಲ್ಲಾಧ್ಯಕ್ಷ ಎಸ್‌.ಶ್ರೇಯಸ್‌ ಮಾತನಾಡಿ, ಗಡಿಭಾಗದಲ್ಲಿ ಸದಾ ಉದ್ವಿಗ್ನ ಪರಿಸ್ಥಿತಿ ಹುಟ್ಟು ಹಾಕುತ್ತಿರುವ ಮರಾಠಿ ಪುಂಡರ ಸಂಘಟನೆಗಳಾದ ಎಂಇಎಸ್‌, ಶಿವಸೇನೆಯನ್ನು ತಕ್ಷಣವೇ ರಾಜ್ಯ ಸರ್ಕಾರವು ನಿಷೇಧಿಸಿ, ಆದೇಶ ಹೊರಡಿಸಬೇಕು. ಒಕ್ಕೂಟ ವ್ಯವಸ್ಥೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಿ, ಶಾಂತಿ, ಸುವ್ಯವಸ್ಥೆಗೆ ಭಂಗ ತರುತ್ತಿರುವ ಇಂತಹ ಸಂಘಟನೆಗಳನ್ನು ನಿಷೇಧಿಸಲಿ ಎಂದು ಒತ್ತಾಯಿಸಿದರು.

ಗಡಿನಾಡ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರವು ದಿಟ್ಟಕ್ರಮ ಕೈಗೊಳ್ಳಬೇಕು. ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರ ಹಿತ ಕಾಯುವ ಕೆಲಸವನ್ನು ಸರ್ಕಾರ ಪ್ರಥಮಾದ್ಯತೆ ಮೇಲೆ ಮಾಡಬೇಕಾಗಿದೆ. ಗಡಿ ಭಾಗದ ಕನ್ನಡಿಗರ ಮೇಲೆ ಮರಾಠಿ ಪುಂಡರು, ಪುಂಡ ಮರಾಠಿಗರ ಸಂಘಟನೆಗಳು ಎಸಗುತ್ತಿರುವ ದೌರ್ಜನ್ಯಗಳಿಗೆ ಅಂತ್ಯ ಹಾಡಬೇಕು ಎಂದು ಜಿಲ್ಲಾ ಆಡಳಿತದ ಸಿಎಂಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಲಾಯಿತು.

ಸಂಘಟನೆ ಮುಖಂಡರಾದ ನಾಗರಾಜ ಗೌಡ, ವಸುಂಧರ, ಸೈಯದ್‌ ಅಕ್ಬರ್‌, ಬಿ.ಜಿ.ದಯಾನಂದ್‌, ಕವಿತಾ ಚಂದ್ರಶೇಖರ, ಮಂಜುನಾಥ ಪಟೇಲ್‌, ಮಾಲಾ ಹನುಮಂತಪ್ಪ, ನಾಗರಾಜ ಆದಾಪುರ, ಗಿರಿಧರ್‌, ತೆಲಗಿ ರಾಮಣ್ಣ, ಮೊಹಿದ್ದೀನ್‌, ಅಮರ್‌, ಶಿವಣ್ಣ ಇತರರು ಪ್ರತಿಭಟನೆಯಲ್ಲಿದ್ದರು.

Latest Videos
Follow Us:
Download App:
  • android
  • ios