Asianet Suvarna News Asianet Suvarna News

ಕನ್ನಡ ವಿಷಯದಲ್ಲಿ ರಾಜಕಾರಣಿಗಳು ಹೇಡಿಗಳು: ನಾರಾಯಣಗೌಡ ಆಕ್ರೋಶ

ಬೆಳಗಾವಿಯಲ್ಲಿ ಒಂದು ಭಾಷೆಯ ಜನರ ಕಾಟವಾದರೆ ಬೆಂಗಳೂರಿನಲ್ಲಿ ನೂರಾರು ಭಾಷೆಯ ಜನರ ಕಾಟ. ಹಾಗಾಗಿ ನಾವು ಅಲ್ಲಿ ಕಾರ್ಯಕ್ರಮ ಮಾಡುತ್ತೇವೆ: ನಾರಾಯಣಗೌಡ

KARAVE State President TA Narayanagowda Slams Politicians grg
Author
First Published Nov 6, 2022, 12:28 PM IST

ಬೆಳಗಾವಿ(ನ.06):  ಕನ್ನಡ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು, ಕನ್ನಡದ ಉಳಿವಿಗಾಗಿ ಕೇವಲ ಕನ್ನಡ ಸಂಘಟನೆಗಳು ಹೋರಾಟ ಮಾಡುತ್ತಿವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದ ಬಸ್‌ಗಳ ಮೇಲೆ ಮರಾಠಿ ಅಕ್ಷರಗಳಿವೆ. ಆದರೆ ಮಹಾರಾಷ್ಟ್ರದ ಬಸ್‌ಗಳ ಮೇಲೆ ಕನ್ನಡದ ಅಕ್ಷರಗಳಿಲ್ಲ. ಈ ಕುರಿತು ನಿಮ್ಮ ಸಂಘಟನೆ ಒತ್ತಾಯ ಮಾಡಬಹುದಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು. ಕನ್ನಡದ ವಿಷಯ, ಕನ್ನಡಿಗರ ಪರವಾಗಿ ಎಂದಿಗೂ ಧ್ವನಿ ಎತ್ತಿಲ್ಲ. ಬೆಳಗಾವಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮಾಡಿದಾಗ ಇಲ್ಲಿನ ರಾಜಕಾರಣಿಗಳ ಮನೆಗೆ ಹೋಗಿ ಬನ್ನಿ ಎಂದರೆ ಒಬ್ಬರೂ ಬರಲಿಲ್ಲ. ಅಂತಹ ರಣಹೇಡಿಗಳಿದ್ದಾರೆ. ಅವರ ವಿರುದ್ಧ ನಾವು ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ ಎಂದರು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರು ಸಭೆ ಮಾಡಿದ್ದಾರೆ. ಇಲ್ಲಿ ಹಾಗೂ ಅಲ್ಲಿ ಇರುವ ಪುಣ್ಯ ಕ್ಷೇತ್ರದಲ್ಲಿ ಅವರು ಅಲ್ಲಿ ಕನ್ನಡ ಹಾಗೂ ಇಲ್ಲಿ ಮರಾಠಿ ಬಳಸಬೇಕು ಎಂದು ಸಭೆಯಲ್ಲಿ ತಿರ್ಮಾನ ಮಾಡಿದ್ದಾರೆ. ಸರ್ಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ. ನಾವಷ್ಟೇ ಮರಾಠಿ ಬಳಸಿದರೆ ಸಾಲದು. ಅವರು ಅಲ್ಲಿ (ಮಹಾರಾಷ್ಟ್ರದಲ್ಲಿಯೂ) ಕನ್ನಡ ಬಳಕೆ ಮಾಡಬೇಕು ಎಂದರು.

ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಪ್ರಭಾಕರ ಕೋರೆ

ಕನ್ನಡ ಸಂಘಟನೆಗಳಿಗೆ ಅಭಿನಂದನೆ:

ಕಲ್ಯಾಣ ಕರ್ನಾಟಕದ ಮತ್ತೊಂದು ಭಾಗದಲ್ಲಿ ಬೆಳ್ಳಿ ಹಬ್ಬ ಆಚರಣೆ ಮಾಡಬೇಕೆಂದು ನಮ್ಮ ಕೇಂದ್ರ ಸಮಿತಿ ನಿರ್ಧಾರ ಮಾಡಿದೆ. ಉತ್ತರ ಕರ್ನಾಟಕ ಎಂದಾಗ ಬೆಳಗಾವಿಯಲ್ಲಿ ಆಯೋಜನೆ ಮಾಡಬೇಕು. ಕಲ್ಯಾಣ ಕರ್ನಾಟಕ ಕಲಬುರಗಿಯಲ್ಲಿ ಕಾರ್ಯಕ್ರಮ ಮಾಡಬೇಕೆಂಬ ತೀರ್ಮಾನ ಮಾಡಿದ್ದೇವೆ ಎಂದ ಅವರು, ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಒಮ್ಮತದಿಂದ, ಒಗ್ಗಟ್ಟಿನಿಂದ ಆಚರಣೆ ಮಾಡಿದ್ದೇವೆ. ಅದಕ್ಕಾಗಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಕನ್ನಡ ಪರ ಸಂಘಟನೆಗಳು ಬೆಂಗಳೂರಿಗೆ ಸೀಮಿತ ಆಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಒಂದು ಭಾಷೆಯ ಜನರ ಕಾಟವಾದರೆ ಬೆಂಗಳೂರಿನಲ್ಲಿ ನೂರಾರು ಭಾಷೆಯ ಜನರ ಕಾಟ. ಹಾಗಾಗಿ ನಾವು ಅಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಕನ್ನಡ ಪರ ಸಂಘಟನೆಗಳಿಗೆ ಬೆಳಗಾವಿಯಲ್ಲಿ ಸರ್ಕಾರ ಅನುದಾನ ನೀಡದ ವಿಚಾರಕ್ಕೆ ಮಹಾರಾಷ್ಟ್ರ ಸರ್ಕಾರ ಎಂಇಎಸ್‌ಗೆ ಕೋಟ್ಯಂತರ ರು. ಅನುದಾನ ನೀಡುವಾಗ ಇಲ್ಲಿ ನಮ್ಮವರಿಗೆ ಅನುದಾನ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಬೆಳಗಾವಿಯಲ್ಲಿ ರಾಜ್ಯೋತ್ಸವ ಸಮಯದಲ್ಲಿ ನಿರ್ಬಂಧ ಹೇರಿರುವ ವಿಚಾರಕ್ಕೆ ಮಾತನಾಡಿದ ಅವರು, ಅದಕ್ಕೆ ಸ್ಥಳೀಯ ನಾಯಕರು ಉತ್ತರ ನೀಡಬೇಕು. ಕನ್ನಡಿಗರ ಸಂಭ್ರಮಕ್ಕೆ ಯಾರೂ ಅಡ್ಡಿ ಆಗಬಾರದು, ಕನ್ನಡಿಗರ ಮೇಲೆ ಲಾಠಿ ಚಾಜ್‌ರ್‍ ಮಾಡಿರುವುದು ಖಂಡನೀಯ. ಈ ವಿಚಾರವಾಗಿ ಗೃಹ ಸಚಿವರ ಬಳಿ ಚರ್ಚೆ ಮಾಡುತ್ತೇವೆ. ನಮ್ಮ ರಾಜಕಾರಣಿಗಳು ರಣಹೇಡಿಗಳು. ಎಲ್ಲವನ್ನು ನಾವೇ ಒತ್ತಾಯ ಮಾಡಬೇಕು. ಕಾರ್ಯಕ್ರಮಕ್ಕೆ ಬರಲು ಮನೆಗೆ ಹೋಗಿ ಆಹ್ವಾನ ನೀಡಿದರೂ ಅವರು ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios