ಕಾರವಾರ [ಮಾ.16]:  ದೇವರಿಗೆ ಹಾಲು, ತುಪ್ಪ, ನೀರು, ಎಳನೀರು, ಪಂಚಾಮೃತ ಅಭಿಷೇಕ ಮಾಡುವುದು ಸರ್ವೇಸಾಮಾನ್ಯ. ಆದರೆ, ಮದ್ಯದ ಅಭಿಷೇಕ ಮಾಡಿ, ಸಿಗರೇಟಿನ ಆರತಿ ಬೆಳಗುವುದು ಈ ದೇವರ ವಿಶೇಷವಾಗಿದೆ. ನಗರದ ಕೋಡಿಬಾಗದಲ್ಲಿ ಇರುವ ಖಾಫ್ರಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಾವಿರಾರು ಭಕ್ತರು ಮದ್ಯ, ಸಿಗರೇಟಿನ ಪೂಜೆ ಸಲ್ಲಿಸಿದರು. ಶ್ರೀದೇವರಿಗೆ ಕೋಳಿ ಬಲಿ ನೀಡುವ ಮೂಲಕ ಹರಕೆ ಸಮರ್ಪಿಸಿದರು.

ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ದೇವರು ಸುತ್ತಮುತ್ತಲಿನ ಜನರ ಇಷ್ಟಾರ್ಥಗಳನ್ನು ಈಡೇರಿಸುವುದರ ಜತೆಗೆ ಈ ಭಾಗದಲ್ಲಿ ಯಾವುದೇ ಅಪಘಾತಗಳಾಗದಂತೆ, ಮೀನುಗಾರರನ್ನು ರಕ್ಷಣೆ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ದೇವಸ್ಥಾನದ ಪಕ್ಕದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಂಚಾರ ಮಾಡುವವರು ದೇವರಿಗೆ ಮದ್ಯದ ಅಭಿಷೇಕ ಮಾಡುತ್ತಾರೆ.

ರಾತ್ರಿಯಿಡೀ ಎಣ್ಣೆ ಪಾರ್ಟಿ, ಮಜಾ ಮಾಡಿದವರಿಗೆ ನಾಲ್ಕೇ ದಿನದಲ್ಲಿ ಕೊರೋನಾ ಶಾಕ್!

ಹಿನ್ನೆಲೆ: ಸ್ಥಳೀಯರು ಹೇಳುವಂತೆ ಈ ದೇವರ ಮೂಲ ಆಫ್ರಿಕಾ ದೇಶ. ಅದಕ್ಕಾಗಿಯೇ ಈ ದೇವರಿಗೆ ಖಾಫ್ರಿ ಎನ್ನುವ ಹೆಸರು ಬಂದಿದೆ. 300 ವರ್ಷಗಳ ಹಿಂದೆ ಆಫ್ರಿಕಾದ ವ್ಯಕ್ತಿಯೊಬ್ಬ ಶ್ರೀದೇವರಿಗೆ ಪೂಜೆ ಸಲ್ಲಿಸುತ್ತಿದ್ದನಂತೆ. ಅವನು ನಾಪತ್ತೆಯಾದ ನಂತರ ಪುರ್ಸಪ್ಪನ ಮನೆಯವರು ಪೂಜೆ ಮುಂದುವರಿಸಿದರು ಎನ್ನಲಾಗುತ್ತದೆ.

ಖಾಫ್ರಿ ದೇವರು ಪುರ್ಸಪ್ಪ ಮನೆತನದ ದೇವರಾದರೂ ನಂಬಿ ಬಂದ ಎಲ್ಲ ಭಕ್ತರನ್ನು ಕಾಪಾಡುತ್ತಾನೆ. ಸಾರಾಯಿ (ಮದ್ಯ), ಸಿಗರೇಟನ್ನು ಹರಕೆಯಾಗಿ ನೀಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ದೇವರ ಸನ್ನಿದಾನಕ್ಕೆ ಹಿಂದುಗಳಷ್ಟೇ ಅಲ್ಲ ಮುಸ್ಲಿಂ, ಕ್ರಿಶ್ಚಿಯನ್ನರು ಬರುತ್ತಾರೆ. 

ಹೀಗಾಗಿ ಇದೊಂದು ಭಾವೈಕ್ಯತೆಯ ಜಾತ್ರೆಯೂ ಹೌದು. ಮದ್ಯ, ಸಿಗರೇಟ್ ಜತೆ ಕ್ಯಾಂಡಲ್  (ಮೇಣಬತ್ತಿ), ತುಲಾಭಾರ ಮೊದಲಾದ ಪೂಜೆಗಳು ಶ್ರೀದೇವರ ಸನ್ನಿಧಾನದಲ್ಲಿ ನಡೆಯುತ್ತವೆ. ಪ್ರತಿ ಭಾನುವಾರ ಹಾಗೂ ಬುಧವಾರ ದೇವಸ್ಥಾನದಲ್ಲಿ  ವಿಶೇಷ ಪೂಜೆ ನಡೆಯುತ್ತದೆ. ಮದ್ಯ ಮತ್ತು ಸಿಗರೇಟ್ ಸೇವೆ ತಲೆತಲಾಂತರಗಳಿಂದ ನಡೆದು ಬಂದಿದ್ದು, ಇಂದಿಗೂ ನಡೆಸಿಕೊಂಡು ಹೋಗಲಾಗುತ್ತಿದೆ.