ಬೆಂಗಳೂರು [ಆ.19]:  ಲಂಕೇಶರು ತಮ್ಮ ಮೊನಚಾದ ಬರಹಗಳ ಮೂಲಕ ತಪ್ಪು ಮಾಡಿದ ಯಾವುದೇ ಜನಪ್ರತಿನಿಧಿ, ಅಧಿಕಾರಿಗಳು ಹಾಗೂ ಗಣ್ಯರನ್ನು ಪ್ರಶ್ನಿಸುವುದನ್ನು ಜನರಿಗೆ ಕಲಿಸಿದರು ಎಂದು ಕವಿ ಡಾ.ಸಿದ್ದಲಿಂಗಯ್ಯ ತಿಳಿಸಿದರು.

ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಪಲ್ಲವ ಪ್ರಕಾಶನ ಹಾಗೂ ಕನ್ನಡ ಜನಶಕ್ತಿ ಕೇಂದ್ರ ಭಾನುವಾರ ಹಮ್ಮಿಕೊಂಡಿದ್ದ ಲೇಖಕ ಶೂದ್ರ ಶ್ರೀನಿವಾಸ್‌ ಅವರ ‘ಲಂಕೇಶ್‌- ಮೋಹಕ ರೂಪಕಗಳ ನಡುವೆ’ ಜೀವನ ಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಂಕೇಶ್‌ ಪತ್ರಿಕೆಗೆ ಹೆದರಿ ಹಲವು ಮಂದಿ ತಮ್ಮ ಬದುಕನ್ನು ಸರಳೀಕರಣಗೊಳಿಸಿ ಕೊಳ್ಳುವುದರ ಜತೆಗೆ ಭ್ರಷ್ಟಾಚಾರವನ್ನು ಕಡಿಮೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ, ಎಸಿಬಿ, ಇಡಿ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಇತರೆ ಸಂಸ್ಥೆಗಳು ನೀಡದಷ್ಟುಕೊಡುಗೆಗಳನ್ನು ಲಂಕೇಶ್‌ ಪತ್ರಿಕೆ ನೀಡಿದೆ ಎಂದರು.

ಕನ್ನಡ ಭಾಷೆಯನ್ನು ಮಡಿವಂತಿಕೆಯಿಂದ ಹೊರತಂದು, ಜನಸಾಮಾನ್ಯರ ಮಾತುಗಳನ್ನೇ ಬರವಣಿಗೆಯಲ್ಲಿ ಬಳಸುವ ಮೂಲಕ ಭಾಷೆಗೆ ಹೊಸ ಶಕ್ತಿ ನೀಡಿದ ಕೀರ್ತಿ ಲಂಕೇಶ್‌ ಅವರಿಗೆ ಸಲ್ಲುತ್ತದೆ. ಲಂಕೇಶರು ತಮ್ಮ ಬರಹಗಳಲ್ಲಿ ಧರ್ಮದೇಟು, ಲಾತ ಸೇರಿದಂತೆ ಹಲವು ಜನಸಾಮಾನ್ಯರು ಬಳಸುವ, ಅದರಲ್ಲೂ ಬೆಂಗಳೂರಿನ ಪುಂಡ, ಪೋಕರಿಗಳು ಬಳಕೆ ಮಾಡುವ ಪದಗುಚ್ಛಗಳಿಗೂ ಸ್ಥಾನ ನೀಡಿದ್ದರು ಹೇಳಿದರು.

ಇಂದು ಹಲವು ಯುವ ಸಾಹಿತಿಗಳು ಲಂಕೇಶ್‌, ಅನಂತಮೂರ್ತಿ, ತರಾಸು, ಅನಕೃ ಇತರೆ ಸಾಹಿತಿಗಳನ್ನು ಅಂಧಾನುಕರಣೆ ಮಾಡಲು ಹೋಗುತ್ತಿದ್ದಾರೆ. ಅವರಲ್ಲಿನ ಉತ್ತಮ ಅಂಶಗಳನ್ನು ಬಿಟ್ಟು, ಅವರು ಮದ್ಯಪಾನ ಮಾಡುತ್ತಿದ್ದ ರೀತಿ, ಸಿಗರೇಟು ಸೇದುತ್ತಿದ್ದ ರೀತಿಗಳನ್ನು ಅನುಕರಿಸಲು ಹೋಗಿ ಮೋರಿಯಲ್ಲಿ ಬಿದ್ದು ಒದ್ದಾಡುವುದನ್ನು ಕಂಡಿದ್ದೇನೆ. ಆದ್ದರಿಂದ ಯುವ ಸಾಹಿತಿಗಳು ಅನುಕರಣೆ ಮಾಡುವ ಬದಲು, ಸ್ವಯಂ ಪ್ರೇರಿತವಾಗಿ ಸಾಹಿತ್ಯ ರಚಿಸಬೇಕು ಎಂದು ಸಲಹೆ ನೀಡಿದರು.

ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಪತ್ರಿಕೆಯೊಂದು ಸರ್ಕಾರವನ್ನು ಕಟ್ಟಬಹುದು ಹಾಗೂ ಉರುಳಿಸಬಹುದು ಎಂಬುದನ್ನು ಲಂಕೇಶ್‌ ತೋರಿಸಿಕೊಟ್ಟರು. ಅವರು ಯಾರಿಗೂ ತಲೆಬಾಗಲಿಲ್ಲ. ತಾವು ಹೇಳಿದ್ದು ಸತ್ಯ ಎಂದು ಪ್ರತಿಪಾದಿಸುತ್ತಿದ್ದರು ಎಂದರು.

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಮಾತನಾಡಿ, ಇಂದು ಲಂಕೇಶ್‌ ಅವರು ಬದುಕಿದ್ದರೆ ಪ್ರಸ್ತುತ ದೇಶದ ಸಾಮಾಜಿಕ ಮತ್ತು ರಾಜಕೀಯ ಘಟನೆಗಳಿಗೆ ಸಮರ್ಥವಾಗಿ ಉತ್ತರ ನೀಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಕೃತಿಯ ಕರ್ತೃ ಶೂದ್ರ ಶ್ರೀನಿವಾಸ್‌ ಮಾತನಾಡಿ, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಕಂಡರೆ ಅವರಿಗೆ ಹೆಚ್ಚು ಖುಷಿಯಾಗುತ್ತಿತ್ತು. ಹಲವು ಮಂದಿ ಸಾಹಿತಿಗಳು, ಹೋರಾಟಗಾರರು, ಬರಹಗಾರರು ಹಾಗೂ ರಾಜಕಾರಣಿಗಳನ್ನು ಅವರು ಬೆಳೆಸಿ, ಪ್ರೋತ್ಸಾಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ವಡ್ಡಗೆರೆ ಚಿನ್ನಸ್ವಾಮಿ, ಪಲ್ಲವ ಪ್ರಕಾಶನದ ಪಲ್ಲವ ವೆಂಕಟೇಶ್‌, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ ಉಪಸ್ಥಿತರಿದ್ದರು.