ಕಲಬುರಗಿ (ಜೂ. 28):  ಖ್ಯಾತ ಕಾದಂಬರಿಗಾರ್ತಿ, ನಾಡೋಜ ಪ್ರಶಸ್ತಿ ಪುರಸ್ಕೃತ ಮೊದಲ ಮಹಿಳಾ ಸಾಹಿತಿ ಡಾ.ಗೀತಾ ನಾಗಭೂಷಣ (78) ತಮ್ಮ ಸ್ವಗೃಹ ‘ಕಾವ್ಯಶ್ರೀ’ಯಲ್ಲಿ ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮನೆಯಲ್ಲೇ ಏಕಾಏಕಿ ಎದೆನೋವು ಕಂಡಾಕ್ಷಣ ಅವರು ಕುಸಿದು ಬಿದ್ದಿದ್ದಾರೆ, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆನ್ನುವಷ್ಟರಲ್ಲಿ ಪ್ರಾಣ ಹೋಗಿತ್ತು. ಗೀತಕ್ಕ ಅವರ ಅಂತ್ಯ ಸಂಸ್ಕಾರ ಸೋಮವಾರ ಹುಟ್ಟೂರಲ್ಲೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡದ ನೆಲದಲ್ಲಿ ನಿಂತ ನಿಸಾರ್ ಅಹಮದ್

ಮಾ.25, 1942 ಕಲಬುರಗಿ ಜಿಲ್ಲೆಯ ಸಾವಳಗಿಯಲ್ಲಿ ಜನಿಸಿದ ಗೀತಾ ಅವರು ಕರ್ನಾಟಕದ ಮೊಘಲಾಯಿ ಪರಿಸರದ ಪ್ರಮುಖ ಲೇಖಕಿಗಳಲ್ಲೊಬ್ಬರು. ಕಿತ್ತು ತಿನ್ನುವ ಬಡತನ, ಅಸಹಾಕಾರದ ಪರಿಸರ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ಉನ್ನತ ಶಿಕ್ಷಣ ಪಡೆದವರು. ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದವರು.

ಮೊದಲ ಮಹಿಳೆ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿ ಎಂಬ ಗೌರವಕ್ಕೂ ಗೀತಾ ಪಾತ್ರರಾಗಿದ್ದಾರೆ. ಇವರ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ, ಭಾರತೀಯ ಭಾಷಾ ಪರಿಷತ್‌ ಪ್ರಶಸ್ತಿ ಮೊದಲ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಗೂ ಗೀತಾ ನಾಗಭೂಷಣ ಪಾತ್ರರಾಗಿದ್ದಾರೆ.

"

ಸಾಹಿತ್ಯ ಕೃತಿಗಳು: ಡಾ.ಗೀತಾ ನಾಗಭೂಷಣ ಅವರು ‘ತಾವರೆಯ ಹೂವು’ ಕಾದಂಬರಿಯಿಂದ ಹಿಡಿದು ಇಲ್ಲಿವರೆಗೆ 27 ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ‘ಹಸಿಮಾಂಸ ಮತ್ತು ಹದ್ದುಗಳು’ ಎನ್ನುವ ಕಾದಂಬರಿ ‘ಹೆಣ್ಣಿನ ಕೂಗು’ ಹೆಸರಿನಲ್ಲಿ ಚಲನಚಿತ್ರವಾಗಿದೆ. ಇದಲ್ಲದೆ 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಕನ್ನಡ ಸಾಹಿತ್ಯ- ಸಾರಸ್ವತ ಲೋಕಕ್ಕೆ ದೀತಕ್ಕರ ಕೊಡುಗೆ ಹಲವಾರು. ಗದಗದಲ್ಲಿ ನಡೆದಿದ್ದ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ಗೀತಾ ನಾಗಭೂಷಣ ವಹಿಸಿದ್ದರು.