ಕನ್ನಡ ಉಳಿದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ
ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿದು ಬೆಳೆಯುತ್ತ ಬಂದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಎಂದು ಸಮಾಜ ಸೇವಕ ಕೆ. ರಘುರಾಂ ತಿಳಿಸಿದರು.
ಮೈಸೂರು : ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿದು ಬೆಳೆಯುತ್ತ ಬಂದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಎಂದು ಸಮಾಜ ಸೇವಕ ಕೆ. ರಘುರಾಂ ತಿಳಿಸಿದರು.
ಜಯನಗರದ ನೇಗಿಲಯೋಗಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ದಾಸೋಹ ಸಂಸ್ಥೆಯ 8ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ನಗರ ಪ್ರದೇಶದ ಮಂದಿ ಕನ್ನಡವನ್ನು ನವೆಂಬರ್ ತಿಂಗಳಿಗೆ ಮಾತ್ರ ಮೀಸಲಿರಿಸಿದ್ದು, ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೊಳಗಾಗಿರುವ ನಗರ ಪ್ರದೇಶದವರ ನಡುವೆ ಕನ್ನಡ ನಿಜವಾಗಿ ಉಸಿರಾಡುತ್ತಿರುವುದು ನಮ್ಮ ಜನಪದರಲ್ಲಿ ಮಾತ್ರ ಎಂದು ಹೇಳಿದರು.
ಕೂಲಿ ಕಾರ್ಮಿಕರು, ರೈತರು ಮತ್ತು ಆಟೋ ಚಾಲಕರು ಸೇರಿದಂತೆ ಸಾಮಾನ್ಯ ಜನ ಕನ್ನಡದ ಬಗ್ಗೆ ಅಪರಿಮಿತ ಪ್ರೀತಿ ಹೊಂದಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡ ಎಷ್ಟು ಮಟ್ಟಿಗೆ ಉಳಿದಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಗರ ಪ್ರದೇಶಗಳಲ್ಲಿ ಕನ್ನಡ ಪರ ಸಂಘಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಂದಾಗಿ ಕನ್ನಡ ಉಳಿದಿದೆ ಎಂದು ಅವರು ತಿಳಿಸಿದರು.
ಕನ್ನಡವನ್ನು ಮಾತೃಭಾಷೆ ಎನ್ನುವ ಬದಲು ರಾಜ್ಯಭಾಷೆ ಎಂದು ಘೋಷಿಸಿದರೆ, ಕನ್ನಡವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರಿ ಯಾಗುತ್ತದೆ. ಇದರಿಂದಾಗಿ ಕರ್ನಾಟಕದಲ್ಲಿ ನೆಲೆಸಿರುವ ಅನ್ಯಭಾಷಿಗರೂ ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತೆ ಆಗುತ್ತದೆ ಎಂದು ಅವರು ಹೇಳಿದರು.
ಛಾಯಾಚಿತ್ರಗ್ರಾಹಕ ಎಸ್. ರಾಮಪ್ರಸಾದ್ ಮಾತನಾಡಿ, ನಮ್ಮ ಆಲೋಚನೆ ಮತ್ತು ಚಿಂತನೆಗಳು ಕನ್ನಡದಲ್ಲಿ ಮೂಡಿದಾಗ ಮಾತ್ರ ಕನ್ನಡ ಮತ್ತಷ್ಟು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಶುದ್ಧ ಕನ್ನಡದಲ್ಲಿಯೇ ಮಾತನಾಡುವ ಸ್ಪರ್ಧೆಯಲ್ಲಿ ಬಳಗದ 30 ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಪದ್ಮಿನಿ ಹೆಗಡೆ(ಪ್ರಥಮ), ಬಿ.ಆರ್. ನಾಗರತ್ನ(ದ್ವಿತೀಯ), ಕೆ. ಲಕ್ಷ್ಮಿ (ತೃತೀಯ), ಎನ್.ವಿ. ರಮೇಶ್, ಪರಿಮಳ (ಸಮಾಧಾನಕರ) ಬಹುಮಾನ ಪಡೆದರು.
ಗಮಕಿ ಬಿ.ಪಿ. ಅಶ್ವತ್ಥನಾರಾಯಣ ಪ್ರಾರ್ಥಿಸಿದರು. ಮೈಸೂರು ಸಾಹಿತ್ಯ ದಾಸೋಹ ಸಂಸ್ಥೆಯ ಸಂಸ್ಥಾಪಕ ಎಂ.ಆರ್. ಆನಂದ್ ಸ್ವಾಗತಿಸಿದರು. ಸಂಚಾಲಕಿ ಪದ್ಮಾ ಆನಂದ್, ರಂಗನಾಥ್ ಮೈಸೂರು ನಿರೂಪಿಸಿದರು.
ಕನ್ನಡ ಬಳಕೆ ಅನಿವಾರ್ಯವಾಗಲಿ
ಬೆಂಗಳೂರು (ಅ.19): ಕನ್ನಡ ಆಡಳಿತ ಭಾಷೆ ಎಂದು ಘೋಷಿಸಿದ್ದರೂ ಈಗಲೂ ಅನೇಕ ಸಚಿವರು, ಅಧಿಕಾರಿಗಳು ಇಂಗ್ಲಿಷ್ ಭಾಷೆಯಲ್ಲಿ ಟಿಪ್ಪಣಿ ಬರೆಯುತ್ತಿರುವುದನ್ನು, ಕಡತ ಮಂಡಿಸುವುದನ್ನು ಕೈ ಬಿಟ್ಟು, ಕನ್ನಡವನ್ನು ಬಳಕೆ ಮಾಡಬೇಕು, ಜತೆಗೆ ರಾಜ್ಯದಲ್ಲಿ ಕನ್ನಡ ಬಳಸುವುದು ಅನಿವಾರ್ಯ ಎಂಬಂತಹ ಕನ್ನಡದ ವಾತಾವರಣವನ್ನು ಎಲ್ಲರೂ ಸೃಷ್ಟಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷವಾಗಿರುವ ಹಿನ್ನೆಲೆಯಲ್ಲಿ ಬರುವ ನವೆಂಬರ್ ಒಂದರಿಂದ ಒಂದು ವರ್ಷಗಳ ಕಾಲ ಆಚರಿಸಲಿರುವ ‘ಕರ್ನಾಟಕ ಸಂಭ್ರಮ-50’ ಲಾಂಛನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಭಾಷೆ ಕಲಿಯದಿದ್ದರೆ ಬದುಕು ನಡೆಸುವುದು ಸುಲಭವಲ್ಲ, ಆದರೆ ಕರ್ನಾಟಕದಲ್ಲಿ ಬೇರೆ ಭಾಷಿಕರು ಕನ್ನಡ ಕಲಿಯದಿದ್ದರೂ ಇಲ್ಲಿ ಜೀವನ ನಡೆಸುತ್ತಾರೆ. ಹಾಗಾಗಿ ಕರುನಾಡಿನಲ್ಲಿ ಕನ್ನಡ ಬಳಕೆ ಮಾತನಾಡುವುದು ಅನಿವಾರ್ಯ ಎಂಬಂತಹ ವಾತಾವರಣವನ್ನು ನಾವೆಲ್ಲ ಸೃಷ್ಟಿಸಬೇಕು ಎಂದರು. ಬೇರೆ ಭಾಷಿಕರು ತಮ್ಮ ಭಾಷೆಯಲ್ಲೇ ಮಾತನಾಡುತ್ತಾರೆ, ಕನ್ನಡವನ್ನು ಕಲಿಯಲು ಮುಂದಾಗುವುದೇ ಇಲ್ಲ. ಆದರೆ ನಾವು ಅವರಿಗೆ ಕನ್ನಡ ಕಲಿಸುವ ಬದಲು ಅವರ ಭಾಷೆಯಲ್ಲೇ ಮಾತನಾಡುತ್ತಿದ್ದೇವೆ. ಇದಕ್ಕೆ ನಮ್ಮಲ್ಲಿರುವ ಅತಿಯಾದ ಉದಾರತೆ ಸಹ ಕಾರಣವಾಗಿದೆ.
ಪಂಚರಾಜ್ಯ ಚುನಾವಣೆಗಾಗಿ ಹೈಕಮಾಂಡ್ ನಯಾಪೈಸೆ ಕೇಳಿಲ್ಲ: ಸಿದ್ದರಾಮಯ್ಯ
ಅತಿಯಾದ ಉದಾರತೆ ಕನ್ನಡದ ಭಾಷಾ ಬೆಳವಣಿಗೆಗೆ, ಸಂಸ್ಕೃತಿ, ಸಂಪ್ರದಾಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದ ಕೆಲವು ಭಾಗಗಳಿಗೆ ಹೋದರೆ ನಾವು ಎಲ್ಲಿದ್ದೇವೆ ಎಂಬ ಭಾವನೆ ಬರುತ್ತದೆ. ಕನ್ನಡ ಭಾಷೆಯನ್ನು ಬಳಸುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿ 50 ವರ್ಷವಾಗಿದೆ. ಕಳೆದ ವರ್ಷದಿಂದ ಈ ಸಂಭ್ರಮವನ್ನು ಆಚರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರ ಆಚರಿಸದ ಕಾರಣ ಈ ವರ್ಷದ ನವೆಂಬರ್ 1ರಿಂದ ಮುಂದಿನ 1 ವರ್ಷ ಕಾಲ ರಾಜ್ಯಾದ್ಯಂತ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, 50 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ಎಂಬ ಹೆಸರನ್ನು ಕೊಟ್ಟು ಹೋಗಿದ್ದಾರೆ. ಅವರನ್ನು ಸ್ಮರಿಸಿಕೊಂಡು ಈ ಕಾರ್ಯಕ್ರಮವನ್ನು ವರ್ಷವಿಡೀ ಆಚರಿಸಲು ಉದ್ದೇಶಿಸಲಾಗಿದೆ ಎಂದರು. ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದಲ್ಲಿ ಹಂಪಿಯ ವಿರುಪಾಕ್ಷ ದೇವಸ್ಥಾನದಿಂದ ಗದಗನ ವೀರ ನಾರಾಯಣಸ್ವಾಮಿ ದೇವಸ್ಥಾನದವರೆಗೆ ಕನ್ನಡ ಜ್ಯೋತಿ ಯಾತ್ರೆ ಆಯೋಜಿಸಲಾಗಿತ್ತು. ಈಗ ಅದೇ ರೀತಿ 50 ವರ್ಷಗಳ ಸಂಭ್ರಮದ ಅಂಗವಾಗಿ ನ.1ರಂದು ಯಾತ್ರೆ ನಡೆಸಲಾಗುವುದು ಎಂದು ಹೇಳಿದರು.