ಬಯಲಾಯ್ತು ಎಪಿಎಂಸಿ ಬಂಡವಾಳ..! 2 ಲಕ್ಷ ಅಡಕೆ ಮೂಟೆ ಗೋಲ್‌ಮಾಲ್ ನಿಜ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 4:08 PM IST
Kannada Prabha Impact Inspection At Shivamogga APMC Confirms Mega Scam in Arecanut Trading
Highlights

ಜು.18 ರಂದು ‘ಕನ್ನಡಪ್ರಭ’ ಈ ಕುರಿತು ವಿವರವಾದ ವರದಿಯೊಂದನ್ನು ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಅಡಕೆ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು. ಅಡಕೆ ಮಂಡಿಗಳಲ್ಲಿ ತಳಮಳ ಕಾಣಿಸಿತ್ತು. ಇದರ ಬೆನ್ನಲ್ಲೇ ಎಪಿಎಂಸಿ ಈ ಬಗ್ಗೆ ನಿಖರ ಮಾಹಿತಿ ಪಡೆಯಲು ಸಿಬ್ಬಂದಿ ನಿಯೋಜಿಸಿತು. ಜು.20ರಂದು ಆರಂಭಗೊಂಡ ಖುದ್ದು ಎಣಿಕೆ ಕಾರ್ಯ ಆ.8ರಂದು ಸಂಜೆ ಮುಗಿದಿದ್ದು, ಮಾರುಕಟ್ಟೆಯಲ್ಲಿ ಇರುವ ಒಟ್ಟು ದಾಸ್ತಾನು 2.30 ಲಕ್ಷ ಮಾತ್ರ ಎಂದು ಲೆಕ್ಕ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗ[ಆ.09]: ಇಲ್ಲಿನ ಅಡಕೆ ಮಾರುಕಟ್ಟೆಯಲ್ಲಿನ ದಾಸ್ತಾನಿನಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎಂಬ ಸುದ್ದಿ ಇದೀಗ ನಿಜವಾಗಿದೆ. ಎಪಿಎಂಸಿ ಅಧಿಕಾರಿಗಳು ಖುದ್ದಾಗಿ ನಡೆಸಿದ ಎಣಿಕೆಯಲ್ಲಿ ಈ ಸತ್ಯ ಹೊರಬಿದ್ದಿದ್ದು, ಲೆಕ್ಕದಲ್ಲಿ ತೋರಿಸುತ್ತಿದ್ದ ಸುಮಾರು 2 ಲಕ್ಷ ಅಡಕೆ ಮೂಟೆಗಳು ವಾಸ್ತವವಾಗಿ ಅಲ್ಲಿ ಇಲ್ಲವೇ ಇಲ್ಲ!

ಜು.18 ರಂದು ‘ಕನ್ನಡಪ್ರಭ’ ಈ ಕುರಿತು ವಿವರವಾದ ವರದಿಯೊಂದನ್ನು ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಅಡಕೆ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು. ಅಡಕೆ ಮಂಡಿಗಳಲ್ಲಿ ತಳಮಳ ಕಾಣಿಸಿತ್ತು. ಇದರ ಬೆನ್ನಲ್ಲೇ ಎಪಿಎಂಸಿ ಈ ಬಗ್ಗೆ ನಿಖರ ಮಾಹಿತಿ ಪಡೆಯಲು ಸಿಬ್ಬಂದಿ ನಿಯೋಜಿಸಿತು. ಜು.20ರಂದು ಆರಂಭಗೊಂಡ ಖುದ್ದು ಎಣಿಕೆ ಕಾರ್ಯ ಆ.8ರಂದು ಸಂಜೆ ಮುಗಿದಿದ್ದು, ಮಾರುಕಟ್ಟೆಯಲ್ಲಿ ಇರುವ ಒಟ್ಟು ದಾಸ್ತಾನು 2.30 ಲಕ್ಷ ಮಾತ್ರ ಎಂದು ಲೆಕ್ಕ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಒಟ್ಟು 4.20 ಲಕ್ಷ ಮೂಟೆಗಳಿವೆ ಎಂದು ಎಪಿಎಂಸಿ ದಾಖಲಾತಿಯೇ ಹೇಳುತ್ತಿತ್ತು. ಅಡಕೆ ವರ್ತಕರು ನೀಡಿದ ದಾಸ್ತಾನು ಪಟ್ಟಿಯನ್ನು ಯಥಾವತ್ತಾಗಿ ದಾಖಲು ಮಾಡಿಕೊಂಡು ಪ್ರತಿ ಬಾರಿಯೂ ಇದೇ ಲೆಕ್ಕ ನೀಡುತ್ತಿತ್ತು. ಇದುವರೆಗೆ ಈ ರೀತಿ ಖುದ್ದು ಎಣಿಕೆ ಕಾರ್ಯವನ್ನು ಎಪಿಎಂಸಿ ಕೈಗೊಂಡಿರಲಿಲ್ಲ. ವರ್ತಕರ ನೀಡುವ ದಾಖಲೆಯನ್ನೇ ತನ್ನ ದಾಸ್ತಾನು ಪಟ್ಟಿಗೆ ಸೇರಿಸಿಕೊಳ್ಳುತ್ತಿತ್ತು. ಎಪಿಎಂಸಿಯಲ್ಲಿ ಸುಮಾರು 150 ಅಡಕೆ ವರ್ತಕರಿದ್ದು, ಬಹುತೇಕ ವರ್ತಕರು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ವರ್ತಕರು ಮಾತ್ರ ಈ ರೀತಿಯ ಗೋಲ್‌ಮಾಲ್ ವ್ಯವಹಾರದಲ್ಲಿ ತೊಡಗಿದ್ದು, ಯಾರ್ಯಾರು ಇದರಲ್ಲಿ ಇದ್ದಾರೆ ಎಂಬುದು ಕೂಡ ಇದೀಗ ಪತ್ತೆಯಾದಂತಾಗಿದೆ.

ಇಲ್ಲಿ ತೋರಿಸುತ್ತಿರುವ ದಾಸ್ತಾನನ್ನು ಮುಂದಿಟ್ಟುಕೊಂಡು ಅಡಕೆ ಖರೀದಿಸುವ ವರ್ತಕರು ಧಾರಣೆಯನ್ನು ಇಳಿಸುತ್ತಿತ್ತು. ಈ ದಾಸ್ತಾನು ಲೆಕ್ಕವನ್ನು ನೋಡಿಕೊಂಡು ಉತ್ತರ ಭಾರತದ ವರ್ತಕರು ಕೂಡ ಧಾರಣೆ ಏರಿಸುತ್ತಿರಲಿಲ್ಲ ಮತ್ತು ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿರಲಿಲ್ಲ. ಬೇಕಾದಷ್ಟು ದಾಸ್ತಾನು ಇರುವಾಗ ಹೆಚ್ಚು ಧಾರಣೆ ಕೊಡಬೇಕಾದ ಅಗತ್ಯವೇನು ಎಂಬುದು ಉತ್ತರ ಭಾರತದ ವರ್ತಕರ ಲೆಕ್ಕಾಚಾರ. ಒಟ್ಟಾರೆ ಧಾರಣೆಯ ಮೇಲೆ ಇದು ಪರಿಣಾಮ ಬೀರುತ್ತಿತ್ತು. ಇದನ್ನು ಬೆನ್ನು ಹತ್ತಿದ ‘ಕನ್ನಡಪ್ರಭ’ ವಿವರವಾದ ವರದಿ ಪ್ರಕಟಿಸಿದ ಬಳಿಕ ಮಾರುಕಟ್ಟೆಯನ್ನು 4 ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಆನಂತರ ನಿಧಾನವಾಗಿ ಧಾರಣೆ ಏರತೊಡಗಿತು.

ಎದ್ದಿರುವ ಪ್ರಶ್ನೆ:

ಎಪಿಎಂಸಿ ಗೇಟ್ ಮೂಲಕ ಬರುವ ಅಡಕೆ ಮೂಟೆಗಳನ್ನು ಅಲ್ಲಿ ಒಮ್ಮೆ ದಾಖಲು ಮಾಡಿಕೊಂಡು ಒಳಗೆ ಬಿಡಲಾಗುತ್ತದೆ. ಬಳಿಕ ಆಯಾ ಅಡಕೆ ಮಂಡಿಗಳಿಗೆ ಹೋದ ಬಳಿಕ ‘ಎ’ ಬಿಲ್ ಹರಿಯುವ ವರ್ತಕರು ಅದರ ಒಂದು ಪ್ರತಿಯನ್ನು ಎಪಿಎಂಸಿಗೆ ಕಳಿಸುತ್ತಾರೆ. ಅನಂತರ ಈ ಅಡಕೆಯನ್ನು ರೈತರು ಮಾರಾಟ ಮಾಡಲು ಬಯಸಿದಾಗ ಮಾರಾಟಕ್ಕೆ ಇಡಲಾಗುತ್ತದೆ. ಮಾರಾಟ ಮಾಡಿದ ಬಳಿಕ ರೈತರಿಗೆ ಮತ್ತು ಎಪಿಎಂಸಿಗೆ ‘ಬಿ’ ಬಿಲ್ ಕಳಿಸಲಾಗುತ್ತದೆ. ಈ ಅಡಕೆ ಖರೀದಿಸಿದ ವರ್ತಕರು ‘ಸಿ’ ಬಿಲ್ ಹರಿಯುತ್ತಾರೆ. ಇದರ ಪ್ರತಿ ಕೂಡ ಎಪಿಎಂಸಿಗೆ ಹೋಗುತ್ತದೆ.

2 ಲಕ್ಷ ಮೂಟೆ ಅಡಕೆ ಹೋಗಿದ್ದಾರೂ ಎಲ್ಲಿಗೆ?
ಮಂಡಿಗಳಿಗೆ ಬಂದ ಅಡಕೆ ಮಾರಾಟವಾದಂತೆ ಅಲ್ಲಿನ ದಾಸ್ತಾನು ಕಡಿಮೆಯಾಗುತ್ತದೆ. ಇದನ್ನು ಪ್ರತಿ ವರ್ಷದ ಅಂತ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೂ ಸಲ್ಲಿಸಬೇಕು. ಮಾರಾಟವಾದ ಅಡಕೆಗೆ ತೆರಿಗೆಯನ್ನು ಕೂಡ ಕಟ್ಟಬೇಕು. ಆದರೆ ಇಲ್ಲಿನ ಕೆಲವು ಮಂಡಿಗಳಿಗೆ ಬಂದ ಅಡಕೆ ಮಾರಾಟವಾಗಿಯೇ ಇಲ್ಲ ಎಂಬ ಲೆಕ್ಕವನ್ನು ತೋರಿಸಲಾಗಿದೆ. ಹೀಗಾಗಿ ದಾಸ್ತಾನು ಹೆಚ್ಚುತ್ತಲೇ ಹೋಗಿದೆ. ಹಾಗಾದರೆ ಮಾರುಕಟ್ಟೆ

ಪ್ರಾಂಗಣಕ್ಕೆ ಬಂದ ಅಡಕೆ ಹೋಗಿದ್ದಾರೂ ಎಲ್ಲಿಗೆ?
ಈ ಪ್ರಶ್ನೆ ಇದೀಗ ಎದುರಾಗಿದೆ. ತೆರಿಗೆ ತಪ್ಪಿಸಿ ಅಡಕೆಯನ್ನು ಮಾರುಕಟ್ಟೆಯಿಂದ ಹೊರಗೆ ಕಳಿಸಲಾಗಿದೆ. ಸರ್ಕಾರಕ್ಕೆ ಜಿಎಸ್‌ಟಿ ತೆರಿಗೆ ತಪ್ಪಿಸಲಾಗಿದ್ದರೆ, ಎಪಿಎಂಸಿಗೆ ಸೆಸ್ ತೆರಿಗೆ ತಪ್ಪಿಸಲಾಗಿದೆ.
ಇದು ಒಂದೆಡೆಯಾದರೆ, ರೈತರಿಗೆ ಸೇರಿದ ಇಷ್ಟೊಂದು ಪ್ರಮಾಣದ ಅಡಕೆ ಇಲ್ಲ ಎಂದಾದರೆ ಅದು ರೈತರಿಗೆ ಮಾಡಿದ ಅನ್ಯಾಯವಲ್ಲವೇ ಎಂಬುದು ಇನ್ನೊಂದು ಪ್ರಶ್ನೆ. 2 ಲಕ್ಷ ಮೂಟೆ ಎಂದರೆ ಈಗಿನ ಮಾರುಕಟ್ಟೆಯ ಪ್ರಕಾರ ಇದರ ಮೌಲ್ಯ ಸುಮಾರು ₹ 420 ಕೋಟಿ. ಇಷ್ಟೊಂದು ಹಣ ಎಲ್ಲಿದೆ? ಇದಕ್ಕೆ ಸರಿಯಾದ ತನಿಖೆಯ ಬಳಿಕವೇ ಉತ್ತರ ಸಿಗಬೇಕು.

ಈ ಭಾರಿ ಗೋಲ್‌ಮಾಲ್ ಬಳಿಕ ಎಪಿಎಂಸಿ ಯಾವ ರೀತಿಯಲ್ಲಿ ಮುಂದಡಿ ಇಡುತ್ತದೆ ಎಂಬುದನ್ನು ಕಾದುನೋಡಬೇಕು. ಆಡಳಿತ ಮಂಡಳಿ ಸಭೆಯನ್ನು ಕರೆದು ತೀರ್ಮಾನ ಕೈಗೊಳ್ಳಬೇಕು. ಜೊತೆಗೆ ಈ ಎಲ್ಲ ಲೆಕ್ಕಾಚಾರವನ್ನು ವಾಣಿಜ್ಯ ತೆರಿಗೆ ಇಲಾಖೆಗೂ ಕಳುಹಿಸಬೇಕು.

ವರದಿ: ಗೋಪಾಲ್ ಯಡಗೆರೆ, ಕನ್ನಡಪ್ರಭ

loader