ಬೆಂಗಳೂರು(ಮಾ. 14)  ಮಾಧ್ಯಮ ಲೋಕದ ಭವಿಷ್ಯದ ತಾರೆಗಳನ್ನು ಅರಸಲು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ "ಕಿರಿಯ ಸಂಪಾದಕ" ಪ್ರಶಸ್ತಿಗೆ ಪ್ರತಿಭೆಗಳ ಆಯ್ಕೆ ನಡೆದಿದೆ. ಕಿರಿಯ ಸಂಪಾದಕ ಗ್ರ್ಯಾಂಡ್ ಫಿನಾಲೆ ಮಾರ್ಚ್  15, ಸೋಮವಾರ ಬೆಳಗ್ಗೆ  10 ಗಂಟೆಗೆ ನಡೆಯಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ನಟಿ ಹರ್ಷಿಕಾ ಪೂಣಚ್ಚ, ರೇವಾ ವಿವಿ ಚಾನ್ಸಲರ್, ಶಾಮರಾಜು ಉಪಸ್ಥಿತರಿರಲಿದ್ದಾರೆ. ಯಲಹಂಕದ ರೇವಾ ಯುನಿವರ್ಸಿಟಿಯಲ್ಲಿ ಫಿನಾಲೆ ಆಯೋಜನೆ ಮಾಡಲಾಗಿದೆ.

ನಾಡಿನಾದ್ಯಂತ ವಿದ್ಯಾರ್ಥಿಗಳೇ ರಚಿಸಿರುವ ಸುದ್ದಿ ಪತ್ರಿಕೆಗಳಲ್ಲಿ ಉತ್ತಮವಾದುದನ್ನು ಆರಿಸುವ ಸ್ಪರ್ಧೆ ಇದಾಗಿದ್ದು, ಈ ಬಾರಿಯದು ‘ಕಿರಿಯ ಸಂಪಾದಕ’ ಪ್ರಶಸ್ತಿಯ 3ನೇ ಆವೃತ್ತಿ.

 ಕನ್ನಡಪ್ರಭ ಕಚೇರಿಯಲ್ಲಿ ಆಯ್ಕೆ ಸುತ್ತುಗಳು ನಡೆದಿದ್ದವು. ತೀರ್ಪುಗಾರರಾಗಿ ಪತ್ರಕರ್ತೆ, ನಿರೂಪಕಿ ವಾಸಂತಿ ಹರಿಪ್ರಕಾಶ್, , ಹಿರಿಯ ಪತ್ರಕರ್ತ, ಖ್ಯಾತ ನಟ ಪ್ರಕಾಶ್ ಬೆಳವಾಡಿ, , ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ಮಾರುಕಟ್ಟೆ ವಿಭಾಗದ ನಿರ್ದೇಶಕ ಎಂ.ಟಿ.ಕುಲಕರ್ಣಿ, ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ|ಪಿ.ಶ್ಯಾಮರಾಜು, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಮತ್ತಿತರರಿದ್ದರು.

ಕರ್ನಾಟಕದ ರೈತ ರತ್ನರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಗೌರವ

ಸುದೀರ್ಘ ಪ್ರಕ್ರಿಯೆ:  ಕಳೆದ ವರ್ಷವೇ ‘ಕಿರಿಯ ಸಂಪಾದಕ’ ಪ್ರಶಸ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳ ನಾನಾ ಶಾಲಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪತ್ರಿಕೆ ರಚಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅಷ್ಟರಲ್ಲಿ ಕೊರೋನಾ ಸಾಂಕ್ರಾಮಿಕ ನಮ್ಮ ದೇಶಕ್ಕೂ ದಾಳಿಯಿಟ್ಟಕಾರಣ ಶಾಲೆಗಳು ಬಂದ್‌ ಆಗಿ ವಿದ್ಯಾರ್ಥಿಗಳ ಉತ್ಸಾಹಕ್ಕೆ ತುಸು ಹಿನ್ನಡೆ ತಂದಿತ್ತು. ಆದಾಗ್ಯೂ, ಸಾವಿರಾರು ಅರ್ಜಿಗಳು ಬಂದಿದ್ದು, ಇದೀಗ ಅವುಗಳಲ್ಲಿ ಪ್ರಶಸ್ತಿಗೆ ಅರ್ಹವಾದವುಗಳ ಆಯ್ಕೆ ನಡೆದಿದೆ. ಮೊದಲ ಸುತ್ತಿನಲ್ಲಿ ಕನ್ನಡಪ್ರಭದ ಪುರವಣಿ, ಸುದ್ದಿ, ವರದಿಗಾರಿಕೆ, ವಿನ್ಯಾಸ ವಿಭಾಗದ ಪ್ರಮುಖರು ಪ್ರತಿಯೊಂದು ಅರ್ಜಿಗಳನ್ನು ಪರಿಶೀಲಿಸಿ ಉತ್ತಮ ಎನಿಸಿದ 48 ಅರ್ಜಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. 

ತೀರ್ಪುಗಾರರು ಎಲ್ಲ 48 ಅರ್ಜಿಗಳನ್ನು ಪರಿಶೀಲಿಸಿ ಅಂತಿಮವಾಗಿ 16 ಪ್ರತಿಭಾನ್ವಿತ ಪತ್ರಿಕೆಗಳನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆರಿಸಿದರು. ಈ ಪೈಕಿ ಅತ್ಯುತ್ತಮ ಎನಿಸಿದ 3 ಪತ್ರಿಕೆಗಳನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.