20 ಎಕರೆ ಜಮೀನು : 15 ಲಕ್ಷ ಲಾಭ ಪಡೆಯುತ್ತಿರುವ ರೈತ ಸಂಶೋಧಕ
ಪಿಯುಸಿ ಮುಗಿಸಿ 24 ವರ್ಷಗಳ ಹಿಂದೆ ಕೃಷಿ ರಂಗಕ್ಕೆ ಕಾಲಿಟ್ಟ ಶರಣಬಸಪ್ಪ ಇಲ್ಲಿವರೆಗೂ 16ಕ್ಕೂ ಹೆಚ್ಚು ಹೊಸ ಸಂಶೋಧನೆ, ಅವಿಷ್ಕಾರಗಳನ್ನು ಮಾಡಿ ಸಾಧನೆ ಮಾಡಿದ್ದಾರೆ.
ರೈತ ರತ್ನ ಶರಣಬಸಪ್ಪ ಪಾಟೀಲ
ವಿಭಾಗ: ರೈತ ಸಂಶೋಧಕ
ಊರು: ಹಾಲಸುಲ್ತಾನಪೂರ ಗ್ರಾಮ, ಹಸೂರು ತಾಲೂಕು, ಕಲಬುರಗಿ ಜಿಲ್ಲೆ
ಕಲಬುರಗಿ (ಫೆ.12): ಕೃಷಿ ಕ್ಷೇತ್ರದಲ್ಲಿ ಹಲವಾರು ಅವಿಷ್ಕಾರಗಳನ್ನು ಸಂಶೋಧಿಸಿ ಗೆದ್ದವರು ಕಲಬುರಗಿ ಜಿಲ್ಲೆಯ ಹರಸೂರು ತಾಲೂಕಿನ ಹಾಲ ಸುಲ್ತಾನಪೂರ ಗ್ರಾಮದ ರೈತ ಶರಣಬಸಪ್ಪ ಪಾಟೀಲ. ಸುಮಾರು 20 ಎಕರೆ ಹೊಲ ಹೊಂದಿರುವ ಶರಣಬಸಪ್ಪ ಪ್ರಮುಖ ಬೆಳೆಗಳು ನಿಂಬೆ, ತೊಗರಿ, ಗೋಧಿ. ಪಿಯುಸಿ ಮುಗಿಸಿ 24 ವರ್ಷಗಳ ಹಿಂದೆ ಕೃಷಿ ರಂಗಕ್ಕೆ ಕಾಲಿಟ್ಟ ಅವರು ಇಲ್ಲಿವರೆಗೂ 16ಕ್ಕೂ ಹೆಚ್ಚು ಹೊಸ ಸಂಶೋಧನೆ, ಅವಿಷ್ಕಾರಗಳನ್ನು ಮಾಡಿ ಸಾಧನೆ ಮಾಡಿದ್ದಾರೆ.
1996 ರಲ್ಲಿ 3 ಎಕರೆ ಜಮೀನಿನಲ್ಲಿ ನಿಂಬೆ ಬೆಳೆಗೆ ನೀರು ಹರಿಸಲು ಡ್ರಿಪ್ ವ್ಯವಸ್ಥೆ ಮಾಡಿದ್ದರು. ಆದರೆ, ಬೇಸಿಗೆ ಕಾಲ ಬಂದಾಗ ಕಾಡು ಪ್ರಾಣಿಗಳು ಹಾವಳಿ ಹಾಗೂ ವಿದ್ಯುತ್ ಅಭಾವದಿಂದ ಬೇಸರಗೊಂಡ ಶರಣಬಸಪ್ಪ ಶಿಫಾರಿತ ಹನಿ ನೀರಾವರಿ ಬದಲಾಗಿ ತಾವೇ ಸ್ವತಃ ನಳ(ನಲ್ಲಿ) ನೀರಾವರಿ ಪದ್ಧತಿಯನ್ನು ಸಂಶೋಧಿಸಿ ಅಳವಡಿಸಿಕೊಂಡರು.
ರೈತ ರತ್ನ ಪ್ರಶಸ್ತಿ ಬಗೆಗಿನ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿಂದಿನ ಡ್ರಿಪ್ ವ್ಯವಸ್ಥೆಯಲ್ಲಿ 60 ನಿಂಬೆ ಗಿಡಗಳಿಗೆ 30 ಲೀ. ನೀರು ಹರಿಸಲು ಒಂದು ಗಂಟೆ ಸಮಯವಾಗುತ್ತಿತ್ತು. ಆದರೆ ನಳ ನೀರಾವರಿ ಪದ್ಧತಿಯಿಂದ ಒಂದು ಗಂಟೆಯಲ್ಲಿ 60-120 ಗಿಡಗಳಿಗೆ ನೀರು ಒದಗಿಸಬಹುದು. ಇದರಿಂದ ವಿದ್ಯುತ್, ಸಮಯ ಉಳಿತಾಯ, ಯಂತ್ರ ಹಾಳಾಗುವುದಿಲ್ಲ. ಇನ್ನು ಬೆಣ್ಣೆತೊರಾ ನದಿ ಜಮೀನು ಪಕ್ಕದಲ್ಲೇ ಇರುವುದರಿಂದ ಪ್ರಾಣಿಗಳ ಕಾಟ ತಪ್ಪಿಸಲು ಪ್ರಾಣಿಗಳಿಗೆ ಜೀವಹಾನಿಯಾಗದಂತೆ ಜಮೀನು ಸುತ್ತ ವಿದ್ಯುತ್ ತಂತಿ ಬೇಲಿ ಹಾಕಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ತಂದು ಈ ವಿದ್ಯುತ್ ತಂತಿ ಬೇಲಿ ಅವಿಷ್ಕರಿಸಿದ್ದಾರೆ. ಇದನ್ನು ಪ್ರಾಣಿಗಳು ತಗುಲಿಸಿಕೊಂಡರೆ ಸಾಕು, ಸುಮಾರು ಒಂದು ಕಿ.ಮೀ. ವರೆಗೂ ಸೈರನ್ ಕೇಳಿಸುತ್ತದೆ. ಇದನ್ನು ಮೊದಲು ತಮ್ಮ ಹೊಲದಲ್ಲೇ ಪ್ರಾಯೋಗಿಕವಾಗಿ ಬಳಸಿಕೊಂಡರು. 2 ವರ್ಷಗಳ ಬಳಿಕ ಬೇಡಿಕೆ ತಕ್ಕಂತೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ, ಕರ್ನಾಟಕ, ವಿಶಾಖಪಟ್ಟಣ ಸೇರಿದಂತೆ ವಿವಿದೆಡೆಯಿಂದ ಬೇಡಿಕೆ ಹೆಚ್ಚಾಗಿದೆ.
ಜೊತೆಗೆ ತೊಗರಿ ಕುಡಿ(ತುದಿ) ಚಿವುಟುವ ಸೌರಶಕ್ತಿ ಚಾಲಿತ ಯಂತ್ರವನ್ನು ಕಂಡು ಹಿಡಿದ್ದಾರೆ ಶರಣಬಸಪ್ಪ ಪಾಟೀಲ. ರಿಪ್ಪರ್ ಗನ್ಗೆ ಮೂರು ಶೇವಿಂಗ್ ಬ್ಲೇಡ್ಗಳು, ಹೆಲ್ಮೆಟ್ ಮೇಲೆ ಮೂರು ಸೌರಶಕ್ತಿ ಫಲಕ ಅಳವಡಿಸಿ ಯಂತ್ರ ಅವಿಷ್ಕರಿಸಿದ್ದಾರೆ. ಹೆಲ್ಮೆಟ್ ಹಾಗೂ ಬ್ಯಾಟರಿಯನ್ನು ಹೆಗಲ ಮೇಲೆ ಹಾಕಿಕೊಂಡು ಒಂದು ಗಂಟೆಯಲ್ಲಿ ಒಂದು ಎಕರೆ ತೊಗರಿ ಚಿವುಟಬಹುದು. ಇದಕ್ಕೆ ಕೇವಲ ಮೂರು ಬ್ಲೇಡ್ಗಳಿಗೆ ₹6 ಖರ್ಚು ಮಾಡಿದರೆ ಸಾಕು. ಒಂದು ಎಕರೆ ತೊಗರಿ ಚಿವುಟಲು 6-7 ಮಂದಿ ಕೂಲಿ ಕಾರ್ಮಿಕರು ಬೇಕು. ಇದಕ್ಕೆ ₹1200 ಖರ್ಚಾಗುತ್ತಿತ್ತು. ಈ ಯಂತ್ರದ ಬೆಲೆ ₹2 ಸಾವಿರ. ಶರಣಬಸಪ್ಪ ಅವರು ಗ್ರಾಮದಲ್ಲೇ ಸ್ವಂತ ಅಂಗಡಿ ತೆರೆದು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲ ಕಡೆ ಬೇಡಿಕೆ ಹೆಚ್ಚಾಗಿದೆ. ಇಷ್ಟೇ ಅಲ್ಲದೇ, ಅತಿ ಕಡಿಮೆ ಖರ್ಚಿನಲ್ಲಿ ಮೋಟಾರ್ಗೆ ಟೈಮರ್ ಅಳವಡಿಕೆ, ಸೋಲಾರ್ ಚಾಲಿತ ಹೈಡೋಫೋರೆನಿಕ್ಸ್ ಸಂಶೋಧಿಸಿ ರೈತರಿಗೆ ಉಪಯುಕ್ತವಾಗುವಂತೆ ಮಾಡಿ ಸ್ಫೂರ್ತಿಯಾಗಿದ್ದಾರೆ.
ಸರ್ಕಾರಿ ನೌಕರಿ ಅವಕಾಶ ಬಿಟ್ಟು ಕೃಷಿಯಲ್ಲೀಗ ಲಕ್ಷಾಧಿಪತಿ ...
ಸಾಧನೆಯ ವಿವರ: ಬಿಸಿಲನಾಡು ಕಲಬುರಗಿಯಲ್ಲೂ ನೀರಾವರಿ ಕ್ರಾಂತಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹಾಲಸುಲ್ತಾನಪೂರದ ಶರಣಬಸಪ್ಪ ಪಾಟೀಲ. ಸುಮಾರು 20 ಎಕರೆ ಪೈಕಿ 10 ಎಕರೆಯಲ್ಲಿ 320 ಟನ್ ಕಬ್ಬು ಫಸಲು ತೆಗೆದಿದ್ದಾರೆ. 10 ಎಕರೆಯಲ್ಲಿ ತೊಗರಿ, ನಿಂಬೆ, ಗೋಧಿ, ಉದ್ದು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದು ವಾರ್ಷಿಕವಾಗಿ ಸುಮಾರು ₹15 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ ಇವರು ಆವಿಷ್ಕಾರಿಸಿರುವ ಯಂತ್ರಗಳಿಂದಲೂ ಲಕ್ಷಾಂತರ ರುಪಾಯಿ ಲಾಭ ಪಡೆಯುತ್ತಿದ್ದಾರೆ. ಆದರೆ, ಕಡಿಮೆ ಬೆಲೆಗೆ ರೈತರಿಗೆ ಯಂತ್ರಗಳನ್ನು ಮಾರಾಟ ಮಾಡುತ್ತಾ ಸ್ವಯಂ ಕೃಷಿಯಲ್ಲೂ ತೊಡಗಿದ್ದಾರೆ.
ಗಮನಾರ್ಹ ಅಂಶಗಳು
ಶರಣಬಸಪ್ಪ ಸಂಶೋಧಿಸಿರುವ ಯಂತ್ರಗಳನ್ನು ಅಳವಡಿಸಿಕೊಂಡಿರುವ ಕರ್ನಾಟಕ, ವಿಶಾಖಪಟ್ಟಣ ಸೇರಿದಂತೆ ವಿವಿಯ ರೈತರು.
ಕಡಿಮೆ ಖರ್ಚಿನಲ್ಲಿ ಯಂತ್ರಗಳು ಲಭ್ಯ.
ಇವರು ಜಮೀನಿಗೆ ಕೃಷಿ ವಿಜ್ಞಾನಿಗಳು, ತಜ್ಞರು, ಕೃಷಿ ವಿವಿ ವಿದ್ಯಾರ್ಥಿಗಳು, ರೈತರು ಭೇಟಿ ನೀಡಿ ಇವರ ಆಧುನಿಕ ಪದ್ಧತಿ ಯಂತ್ರಗಳ ಮಾಹಿತಿ ಪಡೆದು ಜಮೀನಿಗೆ ಅಳವಡಿಸಿಕೊಳ್ಳುತ್ತಿದ್ದಾರೆ.