ಕಲಬುರಗಿಯತ್ತ ಮುಖ ಮಾಡದ ಡಿಸಿಎಂ: ಗೋವಿಂದ ಕಾರಜೋಳರನ್ನ ಹುಡುಕಿಕೊಡಿ
ಗೋವಿಂದ ಕಾರಜೋಳ ನಾಪತ್ತೆ ಹುಡುಕಿಕೊಡಿ: ಕನ್ನಡಪರ ಸಂಘಟನೆಗಳಿಂದ ದೂರು| ಫೆ. 5 ರಿಂದ ಕಲಬುರಗಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ| ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಹೋದವರು ಇದುವರೆಗೂ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ|
ಕಲಬುರಗಿ(ಫೆ.01): 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾಣೆಯಾಗಿದ್ದಾರೆ. ಕೂಡಲೇ ಅವರನ್ನು ಹುಡುಕಿಕೊಡಬೇಕೆಂದು ಕಲಬುರಗಿಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘಟನೆಗಳ ಸದಸ್ಯರು, 32 ವರ್ಷಗಳ ಬಳಿಕ ಕಲಬುರಗಿಯಲ್ಲಿ ಫೆ.5ರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನ ಕುರಿತು ಕೇವಲ ಕಾಟಾಚಾರಕ್ಕಾಗಿ ಗೋವಿಂದ ಕಾರಜೋಳ ಒಂದು ಸಭೆ ನಡೆಸಿದ ನಂತರ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಹೋದವರು ಇದುವರೆಗೂ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಬಹುಶಃ ಅವರು ಸಾಹಿತ್ಯ ಸಮ್ಮೇಳನವನ್ನು ಮರೆತಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಮ್ಮೇಳನಕ್ಕೆ ಕೇವಲ ನಾಲ್ಕು ದಿನ ಬಾಕಿ ಉಳಿದಿವೆ. ಆದರೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಮಾತ್ರ ಇನ್ನೂ ಜಿಲ್ಲೆಯತ್ತ ಸುಳಿದಿಲ್ಲ. ಅವರು ಎಲ್ಲಿ ಕಾಣೆಯಾಗಿದ್ದಾರೋ ಗೊತ್ತಿಲ್ಲ. ದಯವಿಟ್ಟು ಹುಡುಕಿ ಕೊಡಬೇಕೆಂದು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.