11 ಆಯೋಗಗಳು ರಚನೆಯಾದ್ರೂ ಕನ್ನಡ ಭಾಷೆಗೆ ನ್ಯಾಯ ಸಿಕ್ಕಿಲ್ಲ; ಪ್ರೊ. ಕೆ.ಎಸ್. ಕೌಜಲಗಿ ಬೇಸರ
ಭಾಷಾವಾರು ಪ್ರಾಂತಗಳ ರಚನೆಯ ನಂತರ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸರ್ಕಾರಗಳಿಂದ ಹನ್ನೊಂದು ಆಯೋಗಗಳು ರಚನೆಯಾದರೂ ಕನ್ನಡ ಭಾಷೆಗೆ ನ್ಯಾಯ ದೊರಕಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಬೇಸರ ವ್ಯಕ್ತಪಡಿಸಿದರು.
ಧಾರವಾಡ (ನ.11) : ಭಾಷಾವಾರು ಪ್ರಾಂತಗಳ ರಚನೆಯ ನಂತರ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸರ್ಕಾರಗಳಿಂದ ಹನ್ನೊಂದು ಆಯೋಗಗಳು ರಚನೆಯಾದರೂ ಕನ್ನಡ ಭಾಷೆಗೆ ನ್ಯಾಯ ದೊರಕಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಬೇಸರ ವ್ಯಕ್ತಪಡಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗಣಕರಂಗ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ, ಗಣಕರಂಗ ಕವನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಕರುನಾಡ ಕಲಿಗಳ ಕಥನ ಪುಸ್ತಕ ಲೋಕಾರ್ಪಣೆಯಲ್ಲಿ ಮಾತನಾಡಿದ ಅವರು, ಭಾಷೆಯೆಂಬುದು ಸಂವಹನ ಮಾಡಲು ಶಕ್ತಿಶಾಲಿ ಮಾಧ್ಯಮ. ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆಯ ಸಂದರ್ಭದಲ್ಲಿ ಹೆಚ್ಚು ಅಭಿಮಾನ ಮತ್ತು ಜಾಗೃತಿ ಹೊಂದಿರಬೇಕಾದುದು ಅವಶ್ಯಕ. ನಮ್ಮ ಕನ್ನಡ ಭಾಷೆಯ ಸಂದರ್ಭದಲ್ಲಿ ಹಲವಾರು ಸಮಿತಿ, ಆಯೋಗಗಳು ರಚನೆಯಾದರೂ ಇಂದಿಗೂ ಕನ್ನಡ ಭಾಷೆಗೆ ಸಿಗಬೇಕಾದ ನ್ಯಾಯ, ಗೌರವ ಸಿಕ್ಕಿಲ್ಲ. ಅದಕ್ಕಾಗಿ ಕನ್ನಡಿಗರು ಜಾಗೃತರಾಗಬೇಕಾದುದು ಅವಶ್ಯಕ ಎಂದರು.
Mysuru : ಕನ್ನಡ ಭಾಷೆ ಪರಂಪರೆ ಉಳಿಸದಿದ್ದರೆ ಅನಾಹುತ ಖಚಿತ
ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಸರ್ವಸ್ವವನ್ನು ಸಮಾಜಕ್ಕೆ ಸಮರ್ಪಣೆ ಮಾಡಿದ ಕನಕದಾಸರು ಶ್ರೇಷ್ಠರು. ಸತ್ಯವಂತರ ಸಂಗವಿರಲು ತೀರ್ಥವೇತಕೆ ಎಂದು ಹಾಡಿದ ದಾಸಶ್ರೇಷ್ಟರು ಆಗಿನ ಕಾಲದಲ್ಲಿಯೇ ಸಮಾಜದ ಅಂಕು-ಡೊಂಕುಗಳನ್ನು ಪ್ರಶ್ನಿಸಿದ್ದರು ಎಂದು ಹೇಳಿದರು.
ಇದೇ ವೇಳೆ ಗಣಪತಿ ಗೋ. ಚಲವಾದಿ ಸಂಪಾದಿತ ಕರುನಾಡ ಕಲಿಗಳ ಕಥನ ಕೃತಿಯನ್ನು ನಿವೃತ್ತ ಎಂಜನಿಯರ್ ಷಡಕ್ಷರಯ್ಯ ಗುದ್ದಿಮಠ ಲೋಕಾರ್ಪಣೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು. ಗಣಕರಂಗದ ಮುಖ್ಯಸ್ಥ ಹಿಪ್ಪರಗಿ ಸಿದ್ಧರಾಮ, ಗಣಪತಿ ಚಲವಾದಿ, ಸುಭಾಷ ಕ್ಯಾತನವರ, ರವಿ ಚಲವಾದಿ, ಗಿರೀಶಕುಮಾರ ಸಕಲೇಶಪುರ, ಎನ್.ಎಫ್. ಕಿತ್ತೂರು, ಎಲ್. ಗೋಪಿ ಬೆಂಗಳೂರು, ಗಂಗಾಧರ ಪಿ. ಬನ್ನಿಹಟ್ಟಿ, ಅಲಿಸಾಬ್ ಇದ್ದರು. ಕನ್ನಡಕ್ಕಾಗಿ ಕೈ ಎತ್ತಿದ್ದು ಉತ್ತರ ಕರ್ನಾಟಕ ಮಾತ್ರ: ಜಗದೀಶ ಶೆಟ್ಟರ್