Asianet Suvarna News Asianet Suvarna News

ಜನರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ದಕ್ಷ ಟ್ರಾಫಿಕ್ ಇನ್ಸ್‌ಪೆಕ್ಟರ್ ವರ್ಗ!

ದಿನದಿಂದ ದಿನಕ್ಕೆ ತ್ವರಿತವಾಗಿ ಬೆಳೆಯುತ್ತಿರುವ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಸಾಲದ್ದಕ್ಕೆ ಮೆಟ್ರೋ ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಜನರು ಸಂಚಾರಿ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸಿದ ಟ್ರಾಫಿಕ್ ಅಧಿಕಾರಿಯನ್ನು ಇದೀಗ ವರ್ಗಾಯಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

Kanakapura road people urge MLA to withheld Traffic inspector transfer
Author
Bengaluru, First Published Jan 28, 2019, 6:01 PM IST

ಬೆಂಗಳೂರು: ಒಂದೆಡೆ ಮೆಟ್ರೋ ಕೆಲಸ, ಮತ್ತೊಂದೆಡೆ ಯಲಚೇನಹಳ್ಳಿ ಮೆಟ್ರೋ ಸ್ಟೇಷನ್‌ ಆರಂಭವಾದಾಗಿನಿಂದ ಗಿಜುಗುಡುವ ಕನಕಪುರ ರಸ್ತೆಗೆ ಒಳ್ಳೆ ಟ್ರಾಫಿಕ್ ಪೊಲೀಸರ ಅಗತ್ಯವಿತ್ತು. ಟ್ರಾಫಿಕ್ ಜಾಮ್‌ನಿಂದ ಹೈರಾಣಾಗುತ್ತಿದ್ದ ಮಂದಿಗೆ ಎಲ್ಲವೂ ಸುವ್ಯವಸ್ಥೆಗೆ ತರುವ ಅಧಿಕಾರಿ ಬೇಕಿತ್ತು. ಅದೃಷ್ಟಕ್ಕೆ ಎಲ್ಲವನ್ನೂ ಹದ್ದುಬಸ್ತಿಗೆ ತರುವ ಟ್ರಾಫಿಕ್ ಪೊಲೀಸ್ ಅಧಿಕಾರ ವಹಿಸಿಕೊಂಡೇ ಬಿಟ್ಟರು.

ಕುಮಾರಸ್ವಾಮಿ ಲೇ ಔಟ್ ಠಾಣಾ ವ್ಯಾಪ್ತಿಯ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿ ಬಿ.ಪಿ.ನಾಗರಾಜು ಅವರು ಅಧಿಕಾರ ಜನರ ಅಗತ್ಯ ಪೂರೈಸಲೆಂದೇ ಈ ವ್ಯಾಪ್ತಿಗೆ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿ ಬಂದರು. ಇವರು ಬಂದಿದ್ದೇ ಬಂದಿದ್ದು, ಏರಿಯಾದ ಟ್ರಾಫಿಕ್ ಒಂದು ತಹಬದಿಗೆ ಬಂತು. ವೀಲ್ಹಿಂಗ್ ಮಾಡುವವರಿಗೆ ತಕ್ಕ ಶಾಸ್ತಿ ಆಗಿತ್ತು. ಬೇಕಾ ಬಿಟ್ಟಿ, ಸಿಗ್ನಲ್‌ ಅನ್ನೂ ಗಮನಿಸದೇ ಬಸ್ ಓಡಿಸುವ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್ ಚಾಲಕರಿಗೂ ಪಾಠ ಕಲಿಸಿ, ದುಸ್ವಪ್ನರಾಗಿದ್ದರು. 

ಹೊತ್ತಲ್ಲದ ಹೊತ್ತಲ್ಲಾದರೂ ಸರಿ, ಸಂಚಾರಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಾಗರಾಜ್ ಹಾಗೂ ಅವರ ತಂಡ ಯಶಸ್ವಿಯಾಗಿತ್ತು. ಅಲ್ಲದೇ ಜನರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲವರಾಗಿದ್ದ ಈ ಅಧಿಕಾರಿ ಸಂಚಾರ ವ್ಯವಸ್ಥೆಯಲ್ಲೊಂದು ಶಿಸ್ತು ತಂದಿದ್ದರು. ಆ ಕಾರಣದಿಂದಾಗಿಯೇ ಸಂಚಾರ ದಟ್ಟಣೆಯಿಂದ ಗಿಜುಗುಡುತ್ತಿದ್ದ ಕನಕಪುರ ರಸ್ತೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಆಗಿತ್ತು.

ಮನವಿಗೆ ಬೆಲೆ ಕೊಡದ ಎಂಎಲ್‌ಎ ಸೋಮಶೇಖರ್:

ದುರಾದೃಷ್ವವೆಂದರೆ ನಾಗರಾಜು ಅಧಿಕಾರ ಸ್ವೀಕರಿಸಿ ಇನ್ನೂ ವರ್ಷವಾಗಿಲ್ಲ. ಎಲ್ಲವೂ ತಹಬದಿಗೆ ಬಂತು ಎಂದುಕೊಳ್ಳುತ್ತಿರುವಾಗಲೇ ಅವರನ್ನು ವರ್ಗಾಯಿಸಲಾಗಿದೆ. ಇವರನ್ನು ವರ್ಗಾವಣೆ ಮಾಡದಂತೆ ಈ ಪ್ರದೇಶದಲ್ಲಿರುವ ನಾಗರಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಈ ಎಲ್ಲ ಸಂಘಗಳ ಒಕ್ಕೂಟ ಯೂಫರ್‌ವಾಸ್, ಯಶವಂತಪುರ ಶಾಸಕ ಸೋಮಶೇಖರ್ ಅವರನ್ನೂ ಆಗ್ರಹಿಸಿತ್ತು. ಈ ಆಗ್ರಹದ ಮೇರೆಗೆ ವರ್ಗಾವಣೆಯನ್ನು ತಡೆ ಹಿಡಿಯಲಾಗಿತ್ತು. ಆದರೆ, ಯಾವಾಗ ಸಾರ್ವಜನಿಕರು ಸ್ವಲ್ಪ ತಣ್ಣಾಗಾದರೆಂದು ಭಾಸವಾಯಿತೋ ಇದೀಗ ಮತ್ತೆ ಅವರನ್ನು ವರ್ಗಾಯಿಸಿ, ಹೊಸ ಅಧಿಕಾರಿಯನ್ನು ಈ ಸ್ಥಾನಕ್ಕೆ ತಂದು ಕೂರಿಸಲಾಗಿದೆ.

ತಮ್ಮ ಏರಿಯಾದಲ್ಲಿ ಮತ್ತಷ್ಟು ಸುಧಾರಣೆಗಳನ್ನು ನಿರೀಕ್ಷಿಸುತ್ತಿದ್ದ ಕನಕಪುರ ರಸ್ತೆಯ ಇಕ್ಕೆಲಗಳ ನಿವಾಸಿಗಳಿಗೆ ಈ ವರ್ಗಾವಣೆ ಆತಂಕ ತಂದಿದೆ. ಈಗಾಗಲೇ ಜನರ ಮನೋಭಾವವನ್ನು ಅರ್ಥ ಮಾಡಕೊಂಡು ಸ್ಪಂದಿಸುತ್ತಿದ್ದ ಅಧಿಕಾರಿಯೇ ಮುಂದುವರಿಯಬೇಕೆಂದು ಆಗ್ರಹಿಸುತ್ತಿದ್ದಾರೆ.

ಸಂಬಂಧಿಸಿದ ಶಾಸಕರೇ ಹಾಗೂ ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು, ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
 

Follow Us:
Download App:
  • android
  • ios