Kamalakar Bhat Case: 7 Accused Sent to Judicial Custody Till Feb 11 ಸಿದ್ದಾಪುರದಲ್ಲಿ ನಡೆದ ಚಾಕು ಇರಿತ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಸಿದ್ದಾಪುರ (ಫೆ.4): ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಸಿದ್ದಾಪುರ ಚಾಕು ಇರಿತ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಇತರ ಆರು ಮಂದಿಗೆ ಸಿದ್ದಾಪುರ ಜೆಎಂಎಫ್‌ಸಿ (JMFC) ನ್ಯಾಯಾಲಯವು ಫೆಬ್ರವರಿ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರಾದ ಕಮಲಾಕರ್ ಭಟ್, ಸುಚಿತ್ರಾ, ಲೋಕನಾಥ್, ಆಕಾಶ್, ಫೈಸಲ್, ಇರ್ಫಾನ್ ಅಮಾನುಲ್ಲಾ ಮತ್ತು ಮೆಹಫೂಸ್‌ರನ್ನು ಸದ್ಯ ಪೊಲೀಸರು ಸೆರೆಮನೆಗೆ ಅಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಸಿದ್ದಾಪುರ ಮೂಲದ ಮಹೇಶ್ ಜಟ್ಯಾ ನಾಯ್ಕ್‌ ಎಂಬುವವರ ಪತ್ನಿ ಸುಚಿತ್ರಾ, ಕಳೆದ ಐದು ತಿಂಗಳಿಂದ ತನ್ನ ಪತಿಯನ್ನು ಬಿಟ್ಟು ಶಿವಮೊಗ್ಗದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ವಾಸವಾಗಿದ್ದಳು. ಇವರಿಬ್ಬರ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ.

ಮಹೇಶ್ ಅವರ ಮಗಳು ಕೂಡ ತಾಯಿಯ ಜೊತೆಯಲ್ಲೇ ಇದ್ದಳು. ಫೆಬ್ರವರಿ 1ರಂದು ಮಗಳು ತಂದೆಗೆ ಫೋನ್ ಮಾಡಿ, "ಅಮ್ಮ ಮತ್ತು ಗುರೂಜಿ (ಕಮಲಾಕರ್ ಭಟ್) ಒಂದೇ ರೂಮಿನಲ್ಲಿ ಇರುತ್ತಾರೆ, ನಮಗೆ ಹೊರಗೆ ಮಲಗಿಸುತ್ತಾರೆ. ನನಗೆ ಇಲ್ಲಿ ಇರಲು ಸಾಧ್ಯವಿಲ್ಲ, ಕರೆದುಕೊಂಡು ಹೋಗು ಇಲ್ಲದಿದ್ದರೆ ಸಾಯುತ್ತೇನೆ" ಎಂದು ಅಳಲು ತೋಡಿಕೊಂಡಿದ್ದಳು.

ಮಗಳ ಕರೆಯನ್ನು ಕೇಳಿ ಮಹೇಶ್ ಆಕೆಯನ್ನು ಶಿವಮೊಗ್ಗದಿಂದ ಮನೆಗೆ ಕರೆತಂದಿದ್ದರು. ಇದರಿಂದ ಆಕ್ರೋಶಗೊಂಡ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್, ಶಿವಮೊಗ್ಗದಿಂದ ರೌಡಿಗಳನ್ನು ಕರೆತಂದು ಸಿದ್ದಾಪುರದ ಅರಗುಪ್ಪದಲ್ಲಿರುವ ಮಹೇಶ್ ಅವರ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ.

ಈ ದಾಳಿಯ ವೇಳೆ ಅಡ್ಡ ಬಂದ ಮಹೇಶ್ ಅವರ ಅಣ್ಣ ವಸಂತ ನಾಯ್ಕ್ ಅವರಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಮಹೇಶ್ ಹಾಗೂ ಅವರ ಸ್ನೇಹಿತ ಕುಮಾರ್ ನಾರಾಯಣ ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.