ತುಮಕೂರು(ಜ.28): ಬೀದಿ ಕಾಮಣ್ಣರಿಗೆ ಬುದ್ಧಿ ಕಲಿಸಲು ತುಮಕೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಲ್ಪತರು ಮಹಿಳಾ ಪೊಲೀಸ್‌ ಪಡೆ ಸದ್ದಿಲ್ಲದೆ ಕಾರ್ಯ ಆರಂಭಿಸಿದೆ. ಈ ಕಲ್ಪತರು ಮಹಿಳಾ ಪೊಲೀಸ್‌ ಪಡೆ ಪ್ರತಿ ದಿನ ಶಾಲಾ-ಕಾಲೇಜುಗಳಿಗೆ ಹೋಗಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡುತ್ತದೆ. ಹೆಣ್ಣು ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಈ ಪಡೆ ಅಸ್ತಿತ್ವಕ್ಕೆ ಬಂದಿದ್ದು ಕಾಮುಕರಿಂದ ತೊಂದರೆಗೊಳದ ಮಹಿಳೆಯರು ಕೂಡಲೇ ಈ ಕಲ್ಪತರು ಮಹಿಳಾ ಪೊಲೀಸ್‌ ಪಡೆಗೆ ಮಾಹಿತಿ ಕೊಡಬಹುದಾಗಿದೆ.

ತುಮಕೂರು ಜಿಲ್ಲೆಯ ಎಲ್ಲ 10 ತಾಲೂಕುಗಳಿಂದ 4 ವಿಭಾಗಗಳನ್ನಾಗಿ ಮಾಡಿಕೊಂಡಿರುವ ಈ ತಂಡಕ್ಕೆ 80 ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ತಂಡ ಪ್ರತಿ ದಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಬಾಲಕಿಯರಿಗೆ ತಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ಮನವರಿಕೆ ಮಾಡಿಕೊಡುತ್ತದೆ. ಇದಕ್ಕಾಗಿ ಈ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ಪೊಲೀಸ್‌ ಇಲಾಖೆಯಿಂದ ವಿಶೇಷ ತರಬೇತಿ ನೀಡಲಾಗಿದೆ. ಈ ತಂಡ ಜಿಲ್ಲೆಯ ಶಾಲಾ ಕಾಲೇಜು, ಬಸ್‌ ಸ್ಟ್ಯಾಂಡ್‌, ರೈಲ್ವೆ ನಿಲ್ದಾಣ, ಮಹಿಳಾ ಹಾಸ್ಟೆಲ್‌ಗಳು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಹೋಗಿ ತರಬೇತಿ ನೀಡಲಿದೆ.

ಸರ್ಕಾರ ಉಳಿಸೋಕೆ ಸಚಿವ ಸ್ಥಾನ ತ್ಯಾಗಕ್ಕೆ ಮುಂದಾದ್ರಾ ಮಾಧುಸ್ವಾಮಿ..?

ಅಪತ್ಕಾಲದಲ್ಲಿ ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ, ಎದುರಾಳಿಗಳ ದಾಳಿಗೆ ಪ್ರತಿದಾಳಿ ತೋರಿವ ಕಲೆಯನ್ನು ಹೇಳಿ ಕೊಡಲಾಗುತ್ತಿದೆ. ಇದರ ಜೊತೆಗೆ ಬಾಲಕಿಯರಿಗೆ ವೈಯಕ್ತಿಕ ಸುರಕ್ಷತೆ ಕಾಪಾಡುವುದು ಹೇಗೆ, ಕಾಮುಕರ ವರ್ತನೆಗಳು ಹೇಗಿರುತ್ತೇವೆ. ಸಾರ್ವಜನಿಕ ಸ್ಥಳದಲ್ಲಿ ಹೇಗೆಲ್ಲಾ ಎಚ್ಚರವಾಗಿರಬೇಕು ಅಂತ ಮನದಟ್ಟು ಮಾಡಿಕೊಡಲಿದೆ.

ತುಮಕೂರಿನ ತಿಲಕ್‌ ಪಾರ್ಕ್ ಸರ್ಕಲ್‌ ಇನ್ಸ್‌ಪೆಕ್ಟರ್‌ ಪಾರ್ವತಮ್ಮನವರಿಗೆ ತಂಡದ ಜವಾಬ್ದಾರಿ ನೀಡಲಾಗಿದೆ. ಸದ್ಯ ತಂಡ ಮಹಿಳಾ ಸುರಕ್ಷತೆಗಾಗಿಯೇ ಕರ್ತವ್ಯ ನಿರ್ವಹಿಸಲಿದೆ. ಅಸುರಕ್ಷಿತ ಸ್ಥಳಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಈಗಾಗಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಸೂಚಿಸಿದ್ದಾರೆ. ಇದಲ್ಲದೆ ಈ ತಂಡಕ್ಕೆ ಪ್ರತ್ಯೇಕವಾಗಿ ವಾಹನ ಹಾಗೂ ಯೂನಿಫಾರಂ ಸಹ ನೀಡಲಾಗಿದೆ. ಒಟ್ಟಾರೆಯಾಗಿ ಮಹಿಳೆಯರು, ಬಾಲಕಿಯರು, ವಿದ್ಯಾರ್ಥಿನಿಯರ ಸುರಕ್ಷತೆಗೆ ಜಿಲ್ಲಾ ಪೊಲೀಸ್‌ ಮುಂಜಾಗ್ರತೆ ವಹಿಸಿದೆ.