ಚಿಕ್ಕೋಡಿ [ಸೆ.04]:  ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮತ್ತೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ತಾಲೂಕಿನ ಕಲ್ಲೋಳ-ಯಡೂರ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಸಂಚಾರ ಕಡಿತಗೊಂಡಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ಆದರೆ ಮಳೆ ಮಾತ್ರ ಆಗಿಲ್ಲ. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆಯು ಸುರಿಯುತ್ತಿರುವುದರಿಂದ ಅಲ್ಲಿನ ಕೊಯ್ನಾ ಜಲಾಶಯದಲ್ಲಿ ಒಳಹರಿವು ಹೆಚ್ಚಿದ್ದರಿಂದ 20 ಸಾವಿರ ಕ್ಯುಸೆಕ್‌ನಷ್ಟುನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಇದರಿಂದ ಕೃಷ್ಣಾ ನದಿಯು ಮತ್ತೆ ಏರಿಕೆಯತ್ತ ಸಾಗಿದ್ದು, ಜನರಲ್ಲಿ ಮತ್ತೇ ಭೀತಿ ಹುಟ್ಟಿಸಿದೆ. ಕಳೆದ ತಿಂಗಳಷ್ಟುಪ್ರವಾಹ ಎದುರಿಸಿ ಮನೆ ಮಠ ಕಳೆದುಕೊಂಡು ಜನರ ಬದುಕು ಬೀದಿಗೆ ಬಂದಿತ್ತು. ನದಿ ನೀರು ಕಡಿಮೆಯಾಗಿರುವುದರಿಂದ ಜನರು ನಿಟ್ಟಿಸಿರು ಬಿಟ್ಟಿದ್ದರು. ಈಗ ತಾನೇ ಊರುಗಳತ್ತ ತೆರಳಿ ಬದುಕುಕಟ್ಟಿಕೊಳ್ಳುತ್ತಿರುವ ನದಿತೀರದ ಜನರು ಸೋಮವಾರ ತಾನೇ ತಂದು ಪೂಜಿಸಿರುವ ವಿಘ್ನೇಶ್ವರನಲ್ಲಿ ಕೃಷ್ಣಾ ನದಿ ಉಕ್ಕಿ ಹರಿದು ಮತ್ತೆ ನಮ್ಮ ಬದುಕು ನುಚ್ಚುನೂರು ಆಗದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೇತುವೆ ಮೇಲೆ 7 ಅಡಿಗಿಂತ ಹೆಚ್ಚು ನೀರು ಹರಿಯುತ್ತಿರುವುದರಿಂದ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದ ಸಾತರ ಜಿಲ್ಲೆಯ ಪಾಟನ ತಾಲೂಕಿನ ಕೊಯ್ನಾ ಜಲಾಶಯ ಸುತ್ತಮುತ್ತ 29 ಮೀಮೀಗಿಂತ ಹೆಚ್ಚು ಮಳೆಯಾಗುತ್ತಿದೆ. 105 ಟಿಎಂಸಿ ಸಾಮಾರ್ಥ್ಯದ ಕೊಯ್ನಾ ಜಲಾಶಯದಲ್ಲಿ 104.17 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ಈಗ 20 ಸಾವಿರ ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇನ್ನೂ ಹೆಚ್ಚಿನ ನೀರನ್ನು ಯಾವ ಕ್ಷಣದಲ್ಲಾದರೂ ಬಿಡುಗಡೆ ಮಾಡುವ ಸಾಧ್ಯೆಯಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಕೊಯ್ನಾ ಭಾಗದಲ್ಲಿ ಮಳೆ ಆಗುತ್ತಿರುವ ಕಾರಣ ಕೊಯ್ನಾ ಜಲಾಶಯದಿಂದ ಮಾತ್ರ ಕೇವಲ 20 ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಉಪನದಿಗಳಿಗೆ ಇರುವ ಉಳಿದ ಜಲಾಶಯಗಳಿಂದ ನೀರನ್ನು ಬಿಡುತ್ತಿಲ್ಲ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಇಲ್ಲ. ನದಿ ತೀರದ ಜನರು ಭಯಪಡಬೇಕಿಲ್ಲ ಎಂದು ತಹಸೀಲ್ದಾರ್‌ ಡಾ. ಸಂತೋಷಕುಮಾರ ಬಿರಾದಾರ ಹೇಳಿದರು.