ಹೊಸ ಸೇತುವೆಯ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ಸೇತುವೆ ನಿರ್ಮಾಣವಾದರೂ ಎರಡೂ ಬದಿಯ ಸಂಪರ್ಕ ರಸ್ತೆ ಹಾಗೂ ಸೈಡ್‌ವಾಲ್ ಕಾಮಗಾರಿ ಇನ್ನೂ ಅಪೂರ್ಣವಾಗಿದೆ. 

ಚಿಕ್ಕಮಗಳೂರು (ಜು.06): ಸರ್ಕಾರಿ ಹಣ ಖರ್ಚು ಮಾಡಿ ನಿರ್ಮಿಸಿರುವ ಹೊಸ ಸೇತುವೆ ಇದ್ದರೂ, ಅದನ್ನು ಬಳಸದ ಗ್ರಾಮಸ್ಥರು ಜೀವದ ಹಂಗು ತೊರೆದು ಪಕ್ಕದಲ್ಲೇ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಕಾಲುಸಂಕದ ಮೂಲಕವೇ ಸಂಚಾರ ನಡೆಸುತ್ತಿರುವ ವಿಚಿತ್ರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಎಸ್.ಕೆ. ಮೇಗಲ್-ಕೊನೆಗೂಡು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಸ್ವತಃ ಕಳಸ ಪೊಲೀಸ್ ಠಾಣೆಯ ಪಿಎಸ್‌ಐ ಕೈಗೊಂಡಿರುವುದು ಗಮನ ಸೆಳೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೇತುವೆ ಬಳಸುವುದು ಅಸಾಧ್ಯ

ಹೊಸ ಸೇತುವೆಯ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ಸೇತುವೆ ನಿರ್ಮಾಣವಾದರೂ ಎರಡೂ ಬದಿಯ ಸಂಪರ್ಕ ರಸ್ತೆ ಹಾಗೂ ಸೈಡ್‌ವಾಲ್ ಕಾಮಗಾರಿ ಇನ್ನೂ ಅಪೂರ್ಣವಾಗಿದ್ದು, ಭಾರೀ ಮಳೆಯಿಂದ ರಸ್ತೆ ಸಂಪೂರ್ಣ ಕೆಸರಿನ ಮಯವಾಗಿದೆ. ಮಂಡಿವರೆಗೂ ಕೆಸರು ನಿಂತಿರುವ ಕಾರಣ ಸೇತುವೆ ಬಳಸುವುದು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕುಸಿಯುವ ಅಪಾಯ

ಇದರಿಂದ ಬೇಸತ್ತ ಗ್ರಾಮಸ್ಥರು ಹೊಸ ಸೇತುವೆಯ ಪಕ್ಕದಲ್ಲೇ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡು ಅದರ ಮೂಲಕವೇ ಸಂಚಾರ ನಡೆಸುತ್ತಿದ್ದಾರೆ. ಆದರೆ ನಿರಂತರ ಮಳೆಯಿಂದ ಕಾಲುಸಂಕದ ಎರಡೂ ಬದಿಯ ಮಣ್ಣು ಕೊಚ್ಚಿಹೋಗುತ್ತಿದ್ದು, ಯಾವುದೇ ಕ್ಷಣದಲ್ಲಿ ಅದು ಕುಸಿಯುವ ಅಪಾಯ ಎದುರಾಗಿದೆ. ಆದರೂ ಬೇರೆ ದಾರಿ ಇಲ್ಲದ ಕಾರಣ ಜನರು ಅದೇ ಮಾರ್ಗವನ್ನು ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಬಳಸಲು ಸಾಧ್ಯವಿಲ್ಲ

ಈ ಅಪಾಯವನ್ನು ಮನಗಂಡ ಕಳಸ ಪಿಎಸ್‌ಐ ಮಳೆಯ ನಡುವೆಯೇ ಗ್ರಾಮದ ಮನೆ ಮನೆಗೆ ತೆರಳಿ, ಜೀವದ ಹಂಗು ತೊರೆದು ಕಾಲುಸಂಕ ಬಳಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಹೊಸ ಸೇತುವೆಯನ್ನೇ ಬಳಸುವಂತೆ ಮನವರಿಕೆ ಮಾಡಿಕೊಡುತ್ತಿದ್ದರೂ, ಸೇತುವೆಗೆ ಸಮರ್ಪಕ ರಸ್ತೆ ಹಾಗೂ ಉಳಿದ ಕಾಮಗಾರಿ ಪೂರ್ಣಗೊಳ್ಳುವವರೆಗೂ ಅದನ್ನು ಬಳಸಲು ಸಾಧ್ಯವಿಲ್ಲ ಎಂಬುದು ಗ್ರಾಮಸ್ಥರ ವಾದವಾಗಿದೆ.

ಅಪಾಯದ ಅಂಚಿನಲ್ಲಿ ಕಾಲುಸಂಕ

ಒಂದೆಡೆ ಇಂಜಿನಿಯರಿಂಗ್ ನಿರ್ಲಕ್ಷ್ಯದಿಂದ ಅರ್ಧಕ್ಕೆ ನಿಂತ ಕಾಮಗಾರಿ, ಮತ್ತೊಂದೆಡೆ ಅಪಾಯದ ಅಂಚಿನಲ್ಲಿರುವ ಕಾಲುಸಂಕ. ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಜನರ ಜೀವವೇ ಪಣಕ್ಕಿಟ್ಟಿರುವ ಈ ಪರಿಸ್ಥಿತಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಗ್ರಾಮಸ್ಥರ ಬೇಡಿಕೆ ಒಂದೇ - ಸೇತುವೆಯ ಉಳಿದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.