ಇನ್ನಾದ್ರೂ ಕಲಬುರಗಿಯತ್ತ ಬರ್ತಾರಾ ಜಿಲ್ಲಾ ಉಸ್ತುವಾರಿ ಸಚಿವರು?

ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲದಂತಾಗಿದೆ| ಸಂಕಷ್ಟದಲ್ಲಿ ಜಿಲ್ಲೆಯ ಜನತೆಗೆ ಉಸ್ತುವಾರಿ ಸಚಿವರ ದರುಶನ ಆಗುವುದೆ?| ಡಿಸಿಎಂ ಗೋವಿಂದ ಕಾರಜೋಳ ಇಲ್ಲಿನ ಉಸ್ತುವಾರಿ ಹೊಣೆ ಹೊತ್ತ ನಂತರ ಕಲಬುರಗಿಗೆ ಕಾಲಿಟ್ಟಿದ್ದೇ ಅಪರೂಪ| 

Kalaburagi District Minister Govind Karjol Did Not Respond Peoples Problems grg

ಕಲಬುರಗಿ(ಏ.23): ​ಶರ ವೇಗದಲ್ಲಿರುವ ಕೊರೋನಾ 2ನೇ ಅಲೆ ಕಟ್ಟಿಹಾಕಲು ಉಸ್ತುವಾರಿ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡುವಂತೆ ಸಿಎಂ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸೂಚಿಸಿದ್ದಾರೆ. ಆದರೆ ಇಂತಹ ತುರ್ತು ಸಂದರ್ಭದಲ್ಲಿ ಕಲಬುರಗಿ ಪಾಲಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲದಂತಾಗಿರೋದು ಮಾತ್ರ ದುರಂತ.

ಸಾಮಾನ್ಯ ದಿನಗಳಲ್ಲೇ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ಗೋವಿಂದ್‌ ಕಾರಜೋಳ ಅವರು ಜಿಲ್ಲೆಗೆ ಬಂದಿರೋದು ಅಪರೂಪ. ಇದೀಗ ಅವರಿಗೆ ಸೋಂಕು ತಗುಲಿರೋದರಿಂದ ಇಲ್ಲಿಗೆ ಬರೋದು ಸಾಧ್ಯವೇ ಇಲ್ಲ ಎನ್ನುತ್ತಿರುವ ಜನರು, ಸಂಕಷ್ಟಕ್ಕೆ ಸ್ಪಂದಿಸುವ ಉಸ್ತುವಾರಿ ಸಚಿವರು ಇಂತಹ ಸಂದರ್ಭದಲ್ಲಿ ಇರದೆ ಹೋದರೆ ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜೊತೆಗೇ ಕಲಬುರಗಿ ಉಸ್ತುವಾರಿ ಹೊನೆಗಾರಿಕೆ ಕಾರಜೋಳ ಅವರ ಹೆಗಲೇರಿದೆ. ಸಚಿವರು ನಿಯಮಿತವಾಗಿ ಬಾಗಲಕೋಟೆ ಜಿಲ್ಲೆಗೆ ಬಂದು ಹೋಗುತ್ತಿರುತ್ತಾರೆ. ಆದರೆ ಕಲಬುರಗಿಗೆ ಮಾತ್ರ ಬರಲೋಲ್ಲರು. ವಿಜಯಪುರ ಜಿಲ್ಲೆಗೆ ಬಂದು ಹೋಗುತ್ತಿದ್ದು, ಅಲ್ಲಿಂದ ಕಲಬುರಗಿ ಕೇವಲ 150 ಕಿಮೀ, ಇಲ್ಲಿಗೆ ಬಾರದೆ ಅಲ್ಲೇ ವಿಡಿಯೋ ಕಾನ್ಫರೆನ್ಸ್‌ ಮಾಡಿ ಸಾಗಹಾಕುತ್ತಿದ್ದಾರೆ. ಇದೀಗ ಕೊರೋನಾ ಸಂಕಷ್ಟ ಶುರುವಾದಾಗಿನಿಂದ ಟಿಪ್ಪಣಿ, ಹೇಳಿಕೆಗಳನ್ನು ನೀಡುತ್ತ ಸಚಿವರು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸಿಗೆ ಕೊರತೆ, ಬೆಡ್‌, ಇತ್ಯಾದಿ ವಿಚಾರದಲ್ಲಿ ಸಭೆ ನಡೆಸುವ, ಜನರ ಅಹವಾಲು ಆಲಿಸಿ ಅವುಗಳಿಗೆ ತಕ್ಕ ಪರಿಹಾರ ಸೂಚಿಸುವಂತಹ ಜವಾಬ್ದಾರಿ ಕೆಲಸಕ್ಕೆ ಉಸ್ತುವಾರಿ ಸಚಿವರೇ ಇಲ್ಲದಾತಂಗಿದೆ.

ಕಲಬುರಗಿ: ವೆಂಟಿಲೇಟರ್‌ ಸಿಗದೆ 6 ವರ್ಷದ ಬಾಲಕ ಸಾವು

ಉಸ್ತುವಾರಿ ಸಚಿವರ ನಿಮಿತ ಭೇಟಿ ಇಲ್ಲದೆ ಕೆಡಿಪಿ ಸಭೆಗಳೂ ಸರಿಯಾಗಿ ನಡೆದಿಲ್ಲ, ಜನರ ಅಹವಾಲು ಆಲಿಕೆಯೂ ಇಲ್ಲ. ಇಂತಹ ತುರ್ತು ಸಂದರ್ಭ ನಿಭಾಯಿಸುವ ವಿಚಾರದಲ್ಲೂ ಜಿಲ್ಲಾಡಳಿತ ಮುಗ್ಗರಿಸುತ್ತಿದ್ದರೂ ಕೇಳೋರಿಲ್ಲದಂತಾಗಿದೆ. ಕಾರಜೋಳ ಅನುಭವಿಗಳಾದ್ದರಿಂದ ಪರಿಶೀಲಿಸಿದರೆ ಆಡಳಿತದಲ್ಲಿ ಬಿಗಿ ತಾನಾಗಿಯೇ ಮೂಡುತ್ತದೆ. ಆದರೆ ಅವರು ಬರಲಿಕ್ಕಿ ಸಿದ್ಧರಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಜಿಲ್ಲಾಡಳಿತಕ್ಕೆ ಕಾರಜೋಳ ಸೂಚನೆ

ಕೊರೋನಾ ಸಂಕಷ್ಟನಿಭಾಯಿಸುವ ವಿಚಾರದಲ್ಲಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಲಿಖಿತ ಸೂಚನೆ ನೀಡಿದ್ದು, ಡಿಸಿ ಸೂಚನೆಯಂತೆ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಿ ಕೋವಿಡ್‌ ನಿಯಂತ್ರಿಸಬೇಕು. ಕೊವಿಡ್‌ ಚಿಕಿತ್ಸೆಗಾಗಿ ಸಿಬ್ಬಂದಿ ಲಭ್ಯತೆಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಲಾಗಿದ್ದು, ತಕ್ಷಣ ಕ್ರಮಕೈಗೊಂಡು ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಕೋವಿಡ್‌ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ತಹಸೀಲ್ದಾರ್‌ ಅಥವಾ ಪೊಲೀಸರು ತಕ್ಷಣ ಕ್ರಮಕೈಕೊಳ್ಳಬೇಕು. ಅಂರಾರಾಜ್ಯಗಳ ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಗ್ರಾಮೀಣ ಮಟ್ಟದಲ್ಲಿ ತಂಡ ರಚಿಸಿ ಕೋವಿಡ್‌ ನಿಯಂತ್ರಣ ನಿಯಾಮಾವಳಿಗಳನ್ನು ಪಾಲಿಸಲು ಕ್ರಮಕೈಕೊಳ್ಳಬೇಕು ಎಂದು ಕಾರಜೋಳ್‌ ಸೂಚಿಸಿದ್ದಾರೆ.

ಕಲಬುರಗಿ ಪಾಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಬರೀ ಹೇಳಿಕೆಯಲ್ಲಷ್ಟೇ ಗೋಚರ, ಜಿಲ್ಲೆಯಲ್ಲಿ ಮಾತ್ರ ಅಗೋಚರ ಎಂಬಂತಾಗಿದೆ, ಜಿಲ್ಲೆಗಳಿಗೆ ಹೋಗಿ ವೈರಸ್‌ ನಿಯಂತ್ರಿಸಿ ಎಂದು ಸಿಎಂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ, ಆದರೆ ಕಲಬುರಗಿ ಪಾಲಿಗೆ ಕಳೆದ 2 ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲದಂತಾಗಿದೆ. ಏಕೆಂದರೆ ಡಿಸಿಎಂ ಗೋವಿಂದ ಕಾರಜೋಳ ಇಲ್ಲಿನ ಉಸ್ತುವಾರಿ ಹೊಣೆ ಹೊತ್ತ ನಂತರ ಕಲಬುರಗಿಗೆ ಕಾಲಿಟ್ಟಿದ್ದೇ ಅಪರೂಪ. ಜ.1ರಂದು ಜಿಲ್ಲೆಗೆ ಬಂದು ಹೋದವರು ಇಂದಿಗೂ ಇತ್ತ ಇಣುಕಿಲ್ಲ. ಕೊರೋನಾ ತುರ್ತು ಹಾಗೂ ಸಂಕಷ್ಟದಲ್ಲಿ ಜಿಲ್ಲೆಯ ಜನತೆಗೆ ಉಸ್ತುವಾರಿ ಸಚಿವರ ದರುಶನ ಆಗುವುದೆ? ಕಾದು ನೋಡಬೇಕಷ್ಟೆ ಎಂದು ಫಿರೋಜಾಬಾದ್‌ನ ಪುನೀತ್‌ ಕುಲಕರ್ಣಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios