ಕಲಬುರಗಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಮನೆಯ 5 ಕಿ. ಮೀ. ಬಫರ್ ಝೋನ್!

9 ಚೆಕ್ ಪೋಸ್ಟ್ ಸ್ಥಾಪಿಸಿ ಶಂಕಿತ ಕೊರೋನಾ ವ್ಯಕ್ತಿಗಳ ಬಗ್ಗೆ ನಿಗಾ| ಮೃತಪಟ್ಟ ವ್ಯಕ್ತಿಯನ್ನು ಭೇಟಿ ಮಾಡಿದ ಸಂಬಂಧಿಕರು ಹಾಗೂ ಮತ್ತಿತರ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಬೇಕು| 

Kalaburagi DC Sharath B Talks Over Coronavirus

ಕಲಬುರಗಿ(ಮಾ.14): ನಗರದ ವಾರ್ಡ್ ನಂ. 30ನ್ನು ಆಡಳಿತ, ಕಂಟೆನ್‌ಮೆಂಟ್ ಜೋನ್ ಎಂದು ಘೋಷಿಸಿದ್ದು, 5 ಕಿಲೋ ಮೀಟರ್ ವ್ಯಾಪ್ತಿಯ ಬಫರ್ ಜೋನ್‌ನಲ್ಲಿ ಅಗತ್ಯ ಚೆಕ್ ಪೋಸ್ಟ್ ತೆರೆದು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಶರತ್ ಬಿ. ಸೂಚಿಸಿದ್ದಾರೆ. 

ನಗರದ ವಾರ್ತಾ ಭವನದಲ್ಲಿ ನಡೆದ ಶುಕ್ರವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮೃತಪಟ್ಟ ವ್ಯಕ್ತಿಯನ್ನು ಭೇಟಿ ಮಾಡಿದ ಸಂಬಂಧಿಕರು ಹಾಗೂ ಮತ್ತಿತರ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಬೇಕು ಎಂದು ಸೂಚಿಸಿದರು. 

ಕೊರೋನಾಗೆ ವೃದ್ಧ ಬಲಿ: ತುರ್ತು ಸಂದರ್ಭ ನಿಭಾಯಿಸುವಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯ?

ಈ ಸಂದರ್ಭದಲ್ಲಿ ಮಾಹಿತಿ ನೀಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಿ. ರಾಜಾ, ಬಫರ್ ಜೋನ್‌ನಲ್ಲಿ 9 ಚೆಕ್ ಪೋಸ್ಟ್ ತೆರೆದಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು. 4ರಿಂದ 14 ದಿನಗಳವರೆಗೆ ಶಂಕಿತರ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು. 

ಕಂಟೇನ್‌ಮೆಂಟ್ ಜೋನ್‌ನಲ್ಲಿ ಜನರಿಗೆ ಅರಿವು ಮೂಡಿಸಬೇಕು ಹಾಗೂ ಹೊರಗಿನಿಂದ ಬರುವವರಿಗೂ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೊರೋನಾ ಭೀತಿಯಿಂದ ಶುಕ್ರವಾರ ನಡೆಯಬೇಕಾದ ಪ್ರಸಿದ್ಧ ಶರಣಬಸವೇಶ್ವರ ಜಾತ್ರೆ ರದ್ದು ಪಡಿಸಲಾಗಿದ್ದು, ಇದೇ ಮಾದರಿ ಎಲ್ಲ ಧಾರ್ಮಿಕ ಸಂಸ್ಥೆಗಳು ಜನಸಂದಣಿ ಸೇರುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಕೋರಿದರು. 

ಜೆಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಕುರಿತು ಪರೀಕ್ಷಿಸಲು ಲ್ಯಾಬ್ ತೆರೆಯಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಅಗತ್ಯವಿರುವ ಕಿಟ್ಸ್ ಕೂಡಲೇ ಸರಬರಾಜಿಗೆ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. 

ಕಲಬುರಗಿ ಕೊರೋನಾ ಬಾಧಿತ ವ್ಯಕ್ತಿಯಿದ್ದ ಸ್ಥಳದಲ್ಲಿ ಪರಿಶೀಲನೆ

ಖಾಸಗಿ ಆಸ್ಪತ್ರೆಯಲ್ಲಿ ಕೆಮ್ಮು, ನೆಗಡಿ, ಜ್ವರ ಉಸಿರಾಟ ತೊಂದರೆಯಿಂದ ಯಾರೇ ದಾಖಲಾದರೂ ಅದರ ಬಗ್ಗೆ ಪ್ರತಿ ದಿನ ಮೂರು ಬಾರಿ ಜಿಲ್ಲಾಡಳಿತಕ್ಕೆ ಮತ್ತು ಆರೋಗ್ಯ ಇಲಾಖೆಗೆ ಖಾಸಗಿ ಆಸ್ಪತ್ರೆಗಳು ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. 

ನಗರದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಮಾಲ್‌ಗಳ ಸಹ ಒಂದು ವಾರ ಮುಚ್ಚಲು ಸೂಚಿಸಿದೆ. ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ಹೇಳಿದರು. ವಿದೇಶದಿಂದ ಬರುವವರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ವಿದೇಶಕ್ಕೆ ಹೋಗಿ ಬಂದಿರುವವರಲ್ಲಿ ಯಾರಿಗಾದರೂ, ಕೆಮ್ಮು, ಜ್ವರ, ನೆಗಡಿ, ಉಸಿರಾಟ ತೊಂದರೆ ಕಂಡು ಬಂದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ನಿಷ್ಕ್ರೀಯಗೊಳಿಸಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios