ಮಂಗಳೂರು(ಜ.29): ಸೃಷ್ಟಿಕಲಾ ವಿದ್ಯಾಲಯ ನೀಡುವ ಸೃಷ್ಟಿಕಲಾಭೂಷಣ ಪ್ರಶಸ್ತಿಗೆ ಭಾಗವತ ಪಟ್ಲ ಸತೀಶ ಶೆಟ್ಟಿಅವರನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೃಷ್ಟಿಕಲಾ ವಿದ್ಯಾಲಯ ಸಂಸ್ಥಾಪಕ ಛಾಯಾಪತಿ ಕಂಚಿಬೈಲ್‌, ಭಾಗವತಿಕೆ ಮೂಲಕ ಯಕ್ಷ ರಂಗದಲ್ಲಿ ಸಾಧನೆ ಮಾಡಿದ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಮೂಲಕ ಅಶಕ್ತ ಕಲಾವಿದರ ಶ್ರೇಯೋಭಿವೃದ್ಧಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಟ್ಲ ಸತೀಶ ಶೆಟ್ಟಿ ಅವರ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆಸಲಾಗಿದೆ ಎಂದಿದ್ದಾರೆ.

ಫೆ. 2ರಂದು ಬೆಂಗಳೂರು ಜೆ.ಪಿ. ನಗರದ ಆರ್‌.ವಿ. ದಂತ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆಯುವ ಸೃಷ್ಟಿಕಲಾವಿದ್ಯಾಲಯ ದಶಮಾನದ ಹಬ್ಬದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೆ, ಸೃಷ್ಟಿಕಲಾಬಂಧು ಪ್ರಶಸ್ತಿಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್‌ ರಾವ್‌ ಜೆ. ಅವರಿಗೆ ನೀಡಲಾಗುವುದು. ಜಾದೂಗಾರ್‌ ಪ್ರಹ್ಲಾದ್‌ ಆಚಾರ್ಯ ಅವರಿಗೆ ಸೃಷ್ಟಿಕಲೋಪಾಸಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದಿದ್ದಾರೆ.

ಕಟೀಲು ಮೇಳದಿಂದ ಪಟ್ಲ ಹೊರಹಾಕಿದ ಟ್ರಸ್ಟಿಗಳಿಗೆ ಹೈಕೋರ್ಟ್ ತರಾಟೆ

ದಶಮಾನ ಹಬ್ಬದಲ್ಲಿ ಯಕ್ಷಗಾನ, ಕಥಕ್‌ ನೃತ್ಯ, ಕಲರಿಯಪಟ್ಟು, ಶಾಡೋ ಪ್ಲೇ, ಡೊಳ್ಳು ಕುಣಿತ, ಕರ್ನಾಟಕ ಸಂಗೀತ ನಡೆಯಲಿದೆ. ಸಂಗೀತ ಹಬ್ಬ, ವಾದನ ಹಬ್ಬ, ಭರತ ನಾಟ್ಯ ಹಬ್ಬ, ಚಿತ್ರಕಲಾ ಹಬ್ಬ, ನಗೆ ಹಬ್ಬ, ಯಕ್ಷಗಾನ ಹಬ್ಬ, ಸಿನಿಮೀ ನೃತ್ಯ ಹಬ್ಬ, ಸಮ್ಮಾನ ಹಬ್ಬ, ಜಾನಪದ ಹಬ್ಬ, ಕಲಾ ಸಂಗಮ ಹಬ್ಬ ನಡೆಯಲಿದೆ. ಸ್ನೇಹಜ್ಯೋತಿ ಅನಾಥಾಶ್ರಮ, ಶ್ರೀ ಶಂಕರಾಚಾರ್ಯ ವಿದ್ಯಾ ಪೀಠ ಆಶ್ರಮದ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ಮತ್ತು ವೇದಿಕೆ ಕಲ್ಪಿಸುವ ಮೂಲಕ ಅವರಿಗೆ ನೈತಿಕ ಮತ್ತು ಆರ್ಥಿಕ ಬೆಂಬಲ ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಸಂಸ್ಥೆಯ ಗೌರವ ಸಲಹೆಗಾರ ಜಿತೇಂದ್ರ ಕುಂದೇಶ್ವರ, ಶ್ರೀಲೋಕಾಭಿರಾಮ ವ್ಯವಸ್ಥಾಪಕ ಸಂಪಾದಕ ಶಂಕರ ಮೂರ್ತಿ ಕಾಯರಬೆಟ್ಟು ಇದ್ದರು.

ಕಟೀಲು ಯಕ್ಷಗಾನ ಮೇಳದಿಂದ ಪಟ್ಲ ಸತೀಶ್ ಹೊರಕ್ಕೆ