ಸಾಗರ [ಸೆ.20]:  ಕಲ್ಲೊಡ್ಡುಹಳ್ಳ ​- ಹೊಸಕೆರೆ ನಿರ್ಮಾಣದಿಂದ ಆಗುವ ಅನಾಹುತದ ಬಗ್ಗೆ ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು. ನಿಮ್ಮ ತಾಲೂಕಿಗೆ ನೀರು ಒದಗಿಸಲು ಸಿದ್ಧವಾಗಿರುವ ಈ ಯೋಜನೆಯಿಂದ ನಮ್ಮ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ 10ಕ್ಕೂ ಹೆಚ್ಚು ಹಳ್ಳಿಗಳು ಮುಳುಗಿ ಹೋಗುತ್ತವೆ. ಮನೆ, ಜಮೀನು ಕಳೆದುಕೊಂಡ ಜನರು ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯಾವುದೆ ಕಾರಣಕ್ಕೂ ಈ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ತಾಲೂಕಿನ ಬರೂರಿನಲ್ಲಿ ಬುಧವಾರ ಕಲ್ಲೊಡ್ಡುಹಳ್ಳ ಹೊಸಕೆರೆ ಯೋಜನೆ ನಿರ್ಮಾಣದ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕೊರ್ಲಿಕೊಪ್ಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆ ಕೈ ಬಿಡುವವರೆಗೂ ನಿರಂತರ ಹೋರಾಟ ಅನಿವಾರ್ಯ. ಗ್ರಾಮಸ್ಥರು ಮತ್ತು ಹೋರಾಟ ಸಮಿತಿ ಹಮ್ಮಿಕೊಳ್ಳುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಈಗಾಗಲೇ ತಾಲೂಕಿನ ಜನರು ಮಡೆನೂರು ಮತ್ತು ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಎರಡು ಬಾರಿ ಮುಳುಗಡೆಯಾಗಿದ್ದಾರೆ. ಹಿಂದೆ ಮುಳುಗಡೆಯಾದವರಿಗೆ ಕಷ್ಟಪಟ್ಟು ಭೂಮಿಯನ್ನು ನೀಡಲಾಗಿತ್ತು. ಆದರೆ ಈಗ ಜನರನ್ನು ಮತ್ತೆ ಮುಳುಗಿಸಿದರೆ ಅವರಿಗೆ ಭೂಮಿ ಕೊಡಲು ಭೂಮಿ ಎಲ್ಲಿದೆ ಎಂದು ಪ್ರಶ್ನಿಸಿದ ಕಾಗೋಡು, ಅನಾಹುತವಾಗುವುದಕ್ಕಿಂತ ಮೊದಲು ಮುಖ್ಯಮಂತ್ರಿಗಳು ಯೋಜನೆ ಬಗ್ಗೆ ಪುನರ್‌ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬರೂರು ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಮೂಲ ಇಲ್ಲ. ಅದರ ಬದಲಾಗಿ ಆಣೆಕಟ್ಟನ್ನು ಮಲ್ಲಾಪುರ ಮತ್ತು ಮುಡುಬಾ ಸಿದ್ದಾಪುರ ನಡುವಿನ ಬನ್ನೂರು ಕೆರೆ ಭಾಗದಲ್ಲಿ ನಿರ್ಮಾಣ ಮಾಡುವುದು ಹೆಚ್ಚು ಸೂಕ್ತ. ಆಗ ಹೆಚ್ಚಿನ ಮುಳುಗಡೆಯಾಗುವುದಿಲ್ಲ. ಹಾಲಿ ಕಲ್ಲೋಡ್ಡು ಹಳ್ಳ ನಿರ್ಮಿಸುವ ಜಾಗದಲ್ಲಿ ಅರಣ್ಯ ಮತ್ತು ಜನವಸತಿ ಪ್ರದೇಶವಿದೆ. ಜನರಿಗೆ ತೊಂದರೆ ಕೊಡುವ ಯೋಜನೆಯನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು.

ಯಡಿಯೂರಪ್ಪ ಅವರು ಹಿಡಿದ ಕೆಲಸ ಬಿಡುವ ಜಾಯಮಾನದವರಲ್ಲ. ಹೋರಾಟದ ಮೂಲಕವೇ ಅವರನ್ನು ಯೋಜನೆಯಿಂದ ಹಿಂದೆ ಸರಿಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಮುಂದಿನ ಹದಿನೈದು ದಿನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಯೋಜನೆ ಕೈ ಬಿಡುವಂತೆ ಒತ್ತಾಯಿಸುವ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಲು ಗ್ರಾಮಸ್ಥರು ಸಜ್ಜಾಗಬೇಕು ಎಂದು ಹೇಳಿದರು.

ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಎಪಿಎಂಸಿ ಸದಸ್ಯ ಕೆ.ಹೊಳೆಯಪ್ಪ, ಹೋರಾಟ ಸಮಿತಿಯ ಟಾಕಪ್ಪ, ಶಿವಪ್ಪ, ವೀರೇಶ್‌ ಬರೂರು, ಎಂ.ಸಿ.ಪರಶುರಾಮಪ್ಪ, ಚಂದ್ರಶೇಖರ್‌, ಕೃಷ್ಣಮೂರ್ತಿ, ಸುರೇಶ್‌ ಕೊರ್ಲಿಕೊಪ್ಪ ಹಾಜರಿದ್ದರು.