ಶಿವಮೊಗ್ಗ [ಡಿ. 19]:  ದೇಶದಿಂದ ಮುಸ್ಲಿಮರನ್ನು ಹೊರಹಾಕಿದರೆ ಮುಂದಿನ 20 ವರ್ಷ ಪ್ರಧಾನಿ ಆಗಿರಬಹುದೆಂದು ಪೌರತ್ವ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು. 

ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಬೇಕಿದೆ. ಬಿಜೆಪಿಯನ್ನು ಓಡಿಸಬೇಕಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು. 

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ದೇಶದ್ರೋಹಿ ಎಂದ ಮಾಜಿ ಸಭಾಪತಿ ಡಿ.ಎಚ್.ಶಂಕರ್ ಮೂರ್ತಿಗೆ ತಿರುಗೇಟು ನೀಡಿದ ಕಾಗೋಡು, ಶಂಕರ ಮೂರ್ತಿಗೆ ದೇಶಕ್ಕಾಗಿ ಮಾಡಿದ ಹೋರಾಟ ಗೊತ್ತಿಲ್ಲ,  ಅನುಭವವೂ ಇಲ್ಲ ಎಂದರು. ಈಗ ಬಿಜೆಪಿಯವರು ಅಧಿಕಾರ ಅನುಭವಿಸಿ, ಅದನ್ನು ಉಳಿಸಿಕೊಳ್ಳುವ ಸಲುವಾಗಿ ಎಷ್ಟು ಬೇಕೋ ಅಷ್ಟನ್ನು ಮಾಡುತ್ತಿದ್ದಾರೆ ಎಂದರು. 

ಶಾಂತಿ ಕದಡಿದರೆ ಹುಷಾರ್: ಸಿಎಂ ಖಡಕ್ ವಾರ್ನಿಂಗ್!...

ಪೌರತ್ವ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ನಡೆಸಬೇಕೆಂದಿರುವ ಹೋರಾಟ ಹತ್ತಿಕ್ಕಲು ಸೆಕ್ಷನ್ ಹಾಕಲಾಗಿದೆ. ಪ್ರಧಾನಿ ಮೋದಿ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ. ಸಿಎಂ ಆಗಿರುವ ಯಡಿಯೂರಪ್ಪ ನರೇಂದ್ರ ಮೋದಿ ಹೇಳಿದಂಗೆ ಕೇಳಿಕೊಂಡು, ಅದನ್ನೇ ಮಾಡ್ತಾರೆ ಎಂದರು. 

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿದ್ದು, ನೂರಾರು ಪ್ರತಿಭಟನಾಕಾರರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

ಪೌರತ್ವ ಕಾಯ್ದೆ ಎಂದರೇನು? 
ಭಾರತದ ನೆರೆಯ ರಾಷ್ಟ್ರಗಳಿಂದ ಅಂದರೆ ಪಾಕಿಸ್ತಾನ, ಅಫ್ಘಾನಿಸ್ತಾನ, ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ 6 ಧರ್ಮಗಳ ಅಲ್ಪಸಂಖ್ಯಾತರಿಗೆ [ಹಿಂದು,ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ, ಬೌದ್ಧ] ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಮಸೂದೆ.  6 ವರ್ಷಕ್ಕಿಂತ ಹೆಚ್ಚು ಅವಧಿ ಇಲ್ಲಿ ನೆಲೆಸಿದ್ದಲ್ಲಿ ಸೂಕ್ತ ದಾಖಲೆಗಳು ಇಲ್ಲದಿದ್ದಲ್ಲಿಯೂ ಪೌರತ್ವ ಪಡೆಯಬಹುದಾಗಿದೆ.