ಬೆಂಗಳೂರು(ಡಿ.14): ಗ್ರಾಮೀಣ ಸೊಗಡಿನ ಪ್ರತೀಕವಾಗಿರುವ ಬಸವನಗುಡಿಯ ಐತಿಹಾಸಿಕ ‘ಪರಿಷೆ’ (ಡಿ.14) ಇದೇ ಮೊದಲ ಬಾರಿಗೆ ಕಡಲೆಕಾಯಿಯ ಘಮಲು ಇಲ್ಲದೆ ನಡೆಯಲಿದೆ. ಕೋವಿಡ್‌ ಹಿನ್ನೆಲೆ ಈ ಬಾರಿ ಒಂದು ದಿನ ಮಾತ್ರ ಸಾಂಕೇತಿಕವಾಗಿ ಸರಳವಾಗಿ ಜರುಗಲಿದೆ.

ಪ್ರತಿ ವರ್ಷ ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿ ಕಾರುಬಾರು ಜೋರಾಗುತ್ತಿತ್ತು. ಪರಿಷೆಗೆ ಒಂದು ವಾರದ ಮೊದಲೇ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದ ಸುತ್ತಮುತ್ತ ಗ್ರಾಮೀಣ ಜಾತ್ರೆಯ ವೈಭವವೂ ಕಳೆಕಟ್ಟುತ್ತಿತ್ತು. ವಿವಿಧ ಪ್ರದೇಶಗಳಿಂದ ಆಗಮಿಸುತ್ತಿದ್ದ ವ್ಯಾಪಾರಿಗಳು ಮಳಿಗೆಗಳನ್ನು ತೆರೆಯುತ್ತಿದ್ದರು. ಪರಿಷೆ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದಲೂ ಜನರು ಆಗಮಿಸುತ್ತಿದ್ದರು. ಆದರೆ, ಈ ವರ್ಷ ಕೋವಿಡ್‌ ಹಿನ್ನೆಲೆ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಕಡಿವಾಣ ಹಾಕಲಾಗಿದೆ. ಕೇವಲ ಧಾರ್ಮಿಕ ಆಚರಣೆಯೊಂದಿಗೆ ಅತ್ಯಂತ ಸರಳವಾಗಿ ಪರಿಷೆ ನಡೆಯಲಿದೆ. ಹೀಗಾಗಿ ಗ್ರಾಮೀಣ ಸೊಗಡಿನ ಕಡಲೆಕಾಯಿ ಪರಿಷೆಗೆ ಈ ಹಿಂದಿನ ಸಂಭ್ರಮವಿಲ್ಲ.

ಪರಿಷೆ ನೆಪದಲ್ಲಿ ಈ ಬಾರಿ ಯಾರೂ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದ ಮುಂಭಾಗದಲ್ಲಿ ಅಂಗಡಿಗಳನ್ನು ತೆರೆಯುವಂತಿಲ್ಲ. ಪರಿಷೆಯಲ್ಲಿ ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಧಾರ್ಮಿಕ ದತ್ತಿ ಇಲಾಖೆ ದೊಡ್ಡ ಬಸವಣ್ಣ ದೇವಸ್ಥಾನದ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು ಹಾಗೂ ರಸ್ತೆ ಬದಿ ಕಡಲೆಕಾಯಿ ಮಾರಾಟಕ್ಕೂ ನಿರ್ಬಂಧ ವಿಧಿಸಿದೆ.

ಈ ವರ್ಷ ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿಯನ್ನೇ ಮಾರುವಂತಿಲ್ಲ!

ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿ ಸಾಂಕೇತಿಕ, ಸಾಂಪ್ರದಾಯಿಕ ಹಾಗೂ ಸರಳವಾಗಿ ಕಡಲೆಕಾಯಿ ಪರಿಷೆ ಜರುಗಲಿದೆ. ಕೋವಿಡ್‌ ಹಿನ್ನೆಲೆ ಸರಳ ಆಚರಣೆಗೆ ಒತ್ತು ನೀಡಲಾಗಿದೆ. ಭಕ್ತಾದಿಗಳು ಎಂದಿನಂತೆ ದೇವರ ದರ್ಶನ ಪಡೆಯಬಹುದು.

ಪರಿಷೆಗೆ ಪ್ರತಿ ದಿನ 20-25 ಸಾವಿರ ಜನರು ಬರುತ್ತಾರೆ. ಇಂಥ ಸಂದರ್ಭದಲ್ಲಿ ಜನರ ನಿಯಂತ್ರಣ ಕಷ್ಟವಾಗುತ್ತದೆ. ಹೀಗಾಗಿ ಈ ವರ್ಷ ದೊಡ್ಡ ಗಣಪತಿ ಮತ್ತು ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಪೂಜೆ ಜರುಗಲಿದೆ. ಸೋಮವಾರ ಬೆಳಗ್ಗೆ ಪೂಜೆ, ಅಭಿಷೇಕ, ಅಲಂಕಾರ ನಡೆಯಲಿದೆ. ಅಂದು ಸಂಜೆ 7.30ಕ್ಕೆ ಬಸವನಗುಡಿ ಬಡಾವಣೆಯಲ್ಲಿ ಧನ ಕರುಗಳನ್ನು ಸಾಕಿರುವವರು ಬಂದು ಪೂಜೆ ಸಲ್ಲಿಸಲಿದ್ದಾರೆ. ಇದೇ ಮೊದಲ ಬಾರಿಗೆ ಯಾವುದೇ ಪರಿಷೆ ಇಲ್ಲದೆ ಪೂಜೆ ಜರುಗಲಿದೆ ಎಂದು ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ತಿಳಿಸಿದರು.