ಬೆಂಗಳೂರು(ನ.19): ಸಿಲಿಕಾನ್‌ ಸಿಟಿಯ ಬಸವನಗುಡಿಯಲ್ಲಿ ಪ್ರತಿ ವರ್ಷ ನಡೆಯುವ ಇತಿಹಾಸ ಪ್ರಸಿದ್ಧ, ಗ್ರಾಮೀಣ ಸೊಗಡಿನ ಕಡಲೆಕಾಯಿ ಪರಿಷೆ ಕೋವಿಡ್‌ ಹಿನ್ನೆಲೆ ಈ ಬಾರಿ ಸರಳವಾಗಿ ನಡೆಯಲಿದೆ.

ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ 3 ದಿನ ಕಡಲೆಕಾಯಿ ಪರಿಷೆ ನಡೆಯುತ್ತದೆ. ಆದರೆ, ಈ ವರ್ಷ ರಾಜಧಾನಿ ಬೆಂಗಳೂರಿನ 482 ವರ್ಷಗಳ ಇತಿಹಾಸವುಳ್ಳ ಕಡಲೆಕಾಯಿ ಪರಿಷೆಯ ಸಂಭ್ರಮ, ಸಡಗರಕ್ಕೆ ಕೋವಿಡ್‌ ಅಡ್ಡಿಯಾಗಿದೆ.

ಇಂದು ಬಸವನಗುಡಿ ಕಡಲೆಕಾಯಿ ಪರಿಷೆ, ಬಸವ ಮೂರ್ತಿಗೆ ಕಡಲೆಕಾಯಿ ತುಲಾಭಾರ!

ಕೊರೋನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ದೊಡ್ಡ ಗಣೇಶ ಹಾಗೂ ಬಸವಣ್ಣನಿಗೆ ಪೂಜೆ ಮಾಡುವ ಮೂಲಕ ಸರಳವಾಗಿ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್‌ ಹಿನ್ನೆಲೆಯಲ್ಲಿ ರಸ್ತೆ ಬದಿ ಕಡಲೆಕಾಯಿ ಮಾರಾಟ ಮಾಡುವಂತಿಲ್ಲ ಎಂಬುದನ್ನು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜತೆಗೆ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿ ಸಾಂಕೇತಿಕ, ಸಾಂಪ್ರದಾಯಿಕ ಹಾಗೂ ಸರಳವಾಗಿ ಕಡಲೆಕಾಯಿ ಪರಿಷೆಯನ್ನು ಆಚರಣೆ ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿಗಳದ್ದೇ ಕಾರುಬಾರು. ಜತೆಗೆ ರಾಜ್ಯ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ಬೀಡುಬಿಡುತ್ತಾರೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಿಂದ ಲಕ್ಷಾಂತರ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಕೋವಿಡ್‌ ಕಾರಣದಿಂದಾಗಿ ಧಾರ್ಮಿಕ ದತ್ತಿ ಇಲಾಖೆ, ದೊಡ್ಡಬಸವಣ್ಣ ದೇವಸ್ಥಾನದ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು ಹಾಗೂ ರಸ್ತೆ ಬದಿ ಕಡಲೆಕಾಯಿ ಮಾರಾಟಕ್ಕೂ ನಿರ್ಬಂಧ ವಿಧಿಸಿದೆ.