ಕರಾವಳಿಗೆ ಶುಭ ಸುದ್ದಿ: ಅ.12 ರಿಂದ ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು ಸೇವೆ
ಅಕ್ಟೋಬರ್ 12 ರಿಂದ ಕರಾವಳಿಯಿಂದ ತಿರುಪತಿಗೆ ನೇರ ರೈಲು ಸೇವೆ ಆರಂಭವಾಗಲಿದ್ದು, ಕರಾವಳಿ ಜನರ ಬಹುದಿನದ ಬೇಡಿಕೆಗೆ ರೈಲ್ವೆ ಇಲಾಖೆ ಸಂಪರ್ಕ ಕಲ್ಪಿಸಿದೆ.
ಬೆಂಗಳೂರು (ಅ.9): ಕರಾವಳಿ ಜನರ ಬಹುದಿನದ ಬೇಡಿಕೆಗೆ ರೈಲ್ವೆ ಇಲಾಖೆ ಅಸ್ತು ಎಂದಿದೆ. ಅಕ್ಟೋಬರ್ 12 ರಿಂದ ಕರಾವಳಿಯಿಂದ ತಿರುಪತಿಗೆ ನೇರ ರೈಲು ಸೇವೆ ಇರಲಿದೆ. ಈ ಕುರಿತಾಗಿ ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆಯನ್ನೂ ನೀಡಿದೆ. ರೈಲು ಸಂಖ್ಯೆ 12789/790 ಕಾಚಿಗುಡ-ಮಂಗಳೂರು ಸೆಂಟ್ರಲ್-ಕಾಚಿಗುಡಿ ದ್ವಿವಾರ ಎಕ್ಸ್‌ಪ್ರೆಸ್ ಅನ್ನು ಉತ್ತರ ಕನ್ನಡದ ಮುರ್ಡೇಶ್ವರದವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಮಂಗಳವಾರ ಆದೇಶಿಸಿದೆ. ವಿಸ್ತೃತ ಸೇವೆಯು ಅಕ್ಟೋಬರ್ 12 ರಿಂದ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರೆದ ಪತ್ರದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದರ ಆಗಸ್ಟ್ 29 ರ ಪತ್ರವನ್ನು ಉಲ್ಲೇಖಿಸಿ ಈ ಮಾಹಿತಿ ನೀಡಿದ್ದಾರೆ. “ರೈಲು ಸಂಖ್ಯೆ 12789/12790 ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ಅನ್ನು ವಿಸ್ತರಣೆ ಮಾಡಿರುವ ವಿಚಾರ ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಮುರ್ಡೇಶ್ವರ ರೈಲು ನಿಲ್ದಾಣದವರೆಗೆ ವಿಸ್ತರಣೆ ಮಾಡಲು ಅನುಮೋದನೆ ನೀಡಲಾಗಿದೆ' ಎಂದು ತಿಳಿಸಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವಾಲಯದಿಂದ ಔಪಚಾರಿಕ ಅಧಿಸೂಚನೆಯನ್ನು ನಿರೀಕ್ಷೆ ಮಾಡಲಾಗಿದೆ.
ಈಗಿರುವ ವೇಳಾಪಟ್ಟಿಯೇ ಮುಂದುವರಿಕೆ: ರೈಲು ಸಂಖ್ಯೆ 12789 ಮಂಗಳವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6.05 ಕ್ಕೆ ಕಾಚಿಗುಡದಿಂದ (ಹೈದರಾಬಾದ್) ಮತ್ತು ರೇಣಿಗುಂಟಾದಿಂದ (ತಿರುಪತಿಯಿಂದ 9.5 ಕಿ.ಮೀ ದೂರ) 4.45ಕ್ಕೆ ಹೊರಡುತ್ತದೆ. ಮರುದಿನ ಬೆಳಿಗ್ಗೆ 9.30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ರೈಲು ಸಂಖ್ಯೆ 12790 ಬುಧವಾರ ಮತ್ತು ಶನಿವಾರದಂದು ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 8.5 ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ 11.55 ಕ್ಕೆ ರೇಣಿಗುಂಟಾ ಮತ್ತು ರಾತ್ರಿ 11.40 ಕ್ಕೆ ಕಾಚಿಗುಡ ತಲುಪುತ್ತದೆ.
ಮಂಗಳೂರು ಮತ್ತು ಕಾಚಿಗುಡ ನಡುವೆ ಈಗಿರುವ ವೇಳಾಪಟ್ಟಿಗೆ ತೊಂದರೆಯಾಗದಂತೆ ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ತಾತ್ಕಾಲಿಕವಾಗಿ, ರೈಲು ಸಂಖ್ಯೆ 12789 ಬುಧವಾರ ಮತ್ತು ಶನಿವಾರದಂದು ಕಾಚಿಗುಡದಿಂದ ಹೊರಟು ಮಂಗಳೂರಿಗೆ ಬೆಳಗ್ಗೆ 9.30ಕ್ಕೆ ಬಂದು ತಲುಪುತ್ತದೆ. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಮುರ್ಡೇಶ್ವರವನ್ನು ತಲುಪಲಿದೆ. ರೈಲು ಸಂಖ್ಯೆ 12790 ಮುರ್ಡೇಶ್ವರದಿಂದ ಮಧ್ಯಾಹ್ನ 3.20 ಕ್ಕೆ ಹೊರಡುತ್ತದೆ. ಮತ್ತು ಮಂಗಳೂರು ಸೆಂಟ್ರಲ್‌ಗೆ 8.05 ಕ್ಕೆ ಬರಲಿದೆ. ಬುಧವಾರ ಮತ್ತು ಶನಿವಾರದಂದು ಅದರ ನಿಗದಿತ ಸಮಯಗಳಲ್ಲಿ ಈ ವೇಳಾಪಟ್ಟಿ ಇರಲಿದೆ.
ದಶಕಗಳ ಹಿಂದಿನ ಬೇಡಿಕೆ: ಕುಂದಾಪುರ ರೈಲು ಪ್ರಯಾಣಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ಕರಾವಳಿ ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ನೇರ ರೈಲು ಸಂಪರ್ಕಕ್ಕಾಗಿ ಒಂದು ದಶಕದಿಂದ ಬೇಡಿಕೆಯಿದೆ. ಕೋಟ ಶ್ರೀನಿವಾಸ್ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಕೂಡಲೇ ರೈಲ್ವೇ ಸಚಿವಾಲಯದೊಂದಿಗೆ ಈ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ನಿಜವಾದ ಅಗತ್ಯಗಳ ಬಗ್ಗೆ ಸಚಿವಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು.
ಕರಾವಳಿ ಕರ್ನಾಟಕದಿಂದ ತಿರುಪತಿಗೆ ನೇರ ರೈಲು ಸೇವೆ, ಸುಳಿವು ಕೊಟ್ಟ ರೈಲ್ವೆ ಇಲಾಖೆ
ಪೂಜಾರಿ ಅವರು ಆಗಸ್ಟ್ 29 ರಂದು ವೈಷ್ಣವ್ ಅವರಿಗೆ ಬರೆದ ಪತ್ರದಲ್ಲಿ ಕರಾವಳಿ ಕರ್ನಾಟಕದ ಪ್ರತಿ ಮನೆಯ ಜನರು ಪ್ರತಿ ವರ್ಷ ಒಮ್ಮೆಯಾದರೂ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಕೆಲವರು ವೆಂಕಟೇಶ್ವರನ ದೇವಸ್ಥಾನಕ್ಕೆ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಭೇಟಿ ನೀಡುತ್ತಾರೆ. ಕರಾವಳಿ ಕರ್ನಾಟಕದ ಸಾವಿರಾರು ಜನರು ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತಮ್ಮ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗದಲ್ಲಿ ನೆಲೆಸಿದ್ದಾರೆ ಎಂದು ಅವರು ಹೇಳಿದರು. ಕುಟುಂಬ ಕಾರ್ಯಕ್ರಮಗಳು, ಹಬ್ಬ ಹರಿದಿನಗಳಿಗಾಗಿ ಅವರು ಆಗಾಗ್ಗೆ ತಮ್ಮ ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ನೇರ ರೈಲು ಸಂಪರ್ಕವಿಲ್ಲ ಎಂದು ಪೂಜಾರಿ ತಿಳಿಸಿದ್ದರು.
ಭಕ್ತರ ಕಾಣಿಕೆ, ದೇಣಿಗೆಯಿಂದ ಅತ್ಯಂತ ಶ್ರೀಮಂತವಾಗಿರುವ ಭಾರತದ ದೇವಸ್ಥಾನ ಯಾವುದು?