Asianet Suvarna News Asianet Suvarna News

ಜಸ್ಟ್ ಕರೆ ಮಾಡಿ: ತೆಂಗು ಕೊಯ್ಯಲು 'ಪಿಂಗಾರ' ತಂಡ ರೆಡಿ!

ಬಂಟ್ವಾಳ ತಾಲೂಕು ವಿಟ್ಲದಲ್ಲಿ ಸಕ್ರಿಯವಾಗಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಅಡಕೆ ಕೊಯ್ಲು ಸಾಹಸದ ಬಳಿಕ ತೆಂಗು ಕೊಯ್ಲಿಗೆ ರೈತರ ನೆರವಿಗೆ ಧಾವಿಸಿದೆ. ಜ.2ರಂದು ಬಂಟ್ವಾಳ ತಾಲೂಕು ಬೋಳಂತೂರಿನ ಪಿಂಗಾರ ಸಂಸ್ಥೆಯ ನಿರ್ದೇಶಕ ಜಯರಾಮ ರೈ ತೋಟದಲ್ಲಿ ತೆಂಗು ಕೊಯ್ಲು ತಂಡದ ಉದ್ಘಾಟನೆ ನೆರವೇರಲಿದೆ.

Just call 'Pingara' team ready to harvest coconuts at mangaluru rav
Author
First Published Dec 30, 2022, 8:51 AM IST

ಕೃಷ್ಣಮೋಹನ ತಲೆಂಗಳ

 ಮಂಗಳೂರು (ಡಿ.30) : ಬಂಟ್ವಾಳ ತಾಲೂಕು ವಿಟ್ಲದಲ್ಲಿ ಸಕ್ರಿಯವಾಗಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಅಡಕೆ ಕೊಯ್ಲು ಸಾಹಸದ ಬಳಿಕ ತೆಂಗು ಕೊಯ್ಲಿಗೆ ರೈತರ ನೆರವಿಗೆ ಧಾವಿಸಿದೆ. ಜ.2ರಂದು ಬಂಟ್ವಾಳ ತಾಲೂಕು ಬೋಳಂತೂರಿನ ಪಿಂಗಾರ ಸಂಸ್ಥೆಯ ನಿರ್ದೇಶಕ ಜಯರಾಮ ರೈ ತೋಟದಲ್ಲಿ ತೆಂಗು ಕೊಯ್ಲು ತಂಡದ ಉದ್ಘಾಟನೆ ನೆರವೇರಲಿದೆ. ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಸಿ) ತೆಂಗು ಕೊಯ್ಲಿಗೆ ತಂಡ ರಚಿಸಿದ ಈ ಪ್ರಯತ್ನ ರಾಜ್ಯದಲ್ಲೇ ಪ್ರಥಮ ಎನಿಸಿದೆ.

ಕಳೆದ ಫೆಬ್ರವರಿಯಲ್ಲಿ ಪಿಂಗಾರ ಕಂಪನಿ(Pingara company) ಜಾಬ್‌ ವರ್ಕ್(job work) ಮಾದರಿಯಲ್ಲಿ ಫೈಬರ್‌ ದೋಟಿ ಬಳಸಿ ಅಡಕೆ ಕೊಯ್ಲು ಹಾಗೂ ಮರಗಳಿಗೆ ಔಷಧಿ ಸಿಂಪಡಣೆಗೆ ತಂಡ ಸಿದ್ಧಪಡಿಸಿತ್ತು. ಈ ತಂಡದ ಕೆಲಸ ಸಾಕಷ್ಟುಜನಪ್ರಿಯತೆ ಗಳಿಸಿದೆ.

ಯುವಕನ ಖತರ್ನಾಕ್ ಐಡಿಯಾಕ್ಕೆ ಫಿದಾ ಆದ ಆನಂದ್ ಮಹೀಂದ್ರಾ: ವಿಡಿಯೋ ವೈರಲ್‌

ಈ ಯೋಜನೆಯ ಯಶಸ್ಸಿನ ಬಳಿಕ, ತೆಂಗು ಕೊಯ್ಲಿಗೆ ಕಾರ್ಮಿಕರ ಕೊರತೆ ವಿಪರೀತವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ರೈತರ ಬೇಡಿಕೆ ಮೇರೆಗೆ ತೆಂಗು ಕೊಯ್ಲು ತಂಡ ತೋಟಕ್ಕಿಳಿಯಲು ಸಜ್ಜಾಗಿದೆ. ಪಿಂಗಾರ ಸಂಸ್ಥೆಯ ಅಡಕೆ ಕೊಯ್ಲು ತಂಡದಲ್ಲಿ ಛತ್ತೀಸ್‌ಗಢದ ಐವರು ನುರಿತ ಕಾರ್ಮಿಕರು ಇದ್ದಾರೆ, ಅವರ ಮೂಲಕ ಇನ್ನೂ ನಾಲ್ವರನ್ನು ಕರೆಸಿ, ಅವರಿಗೆ ತರಬೇತಿ ನೀಡಲಾಗಿದೆ. ತಂಡದ ಕೆಲಸ ಏನು: ಪಿಂಗಾರ ಸಂಸ್ಥೆಗೆ ಕರೆ ಮಾಡಿ ರೈತರು ಕೊಯ್ಲಿಗೆ ದಿನ ನಿಗದಿ ಮಾಡಬೇಕು. ನಿಗದಿತ ದಿನದಂದು ನಾಲ್ವರು ಕಾರ್ಮಿಕರ ಜೊತೆ ಓರ್ವ ಮ್ಯಾನೇಜರ್‌ ಓಮ್ನಿ ವಾಹನದಲ್ಲಿ ತೋಟಕ್ಕೇ ಬಂದು ತೆಂಗಿನ ಕೊನೆಗಳನ್ನು ಕತ್ತಿಯಿಂದ ಕಡಿದು ಕೊಡುತ್ತಾರೆ. ಅದರ ಸಾಗಾಟ ಪಿಂಗಾರದ ಹೊಣೆಯಲ್ಲ. ಕೇಬಲ್‌ ಜೊಸೆಫ್‌ ಅಭಿವೃದ್ಧಿ ಪಡಿಸಿದ ಸ್ಟೀಲ್‌ ಹಾಗೂ ಕೇಬಲ್‌ ಆಧರಿತ ಸಲಕರಣೆ ಬಳಸಿ ಈ ಕಾರ್ಮಿಕರು ಮರ ಏರುತ್ತಾರೆ.

ಒಂದು ಮರದ ಕೊಯ್ಲಿಗೆ 50 ರು. ನಿಗದಿಪಡಿಸಲಾಗಿದೆ. ಕನಿಷ್ಠ, ಗರಿಷ್ಠ ಮರಗಳ ಸಂಖ್ಯೆಯ ಮಿತಿ ಇಲ್ಲ, ಕರೆ ಬಂದಲ್ಲಿಗೆ ತೆರಳಿ ವರ್ಷಪೂರ್ತಿ ತಂಡ ಕಾರ್ಯಾಚರಿಸಲಿದೆ ಎನ್ನುತ್ತಾರೆ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಕಜೆ.

ಪಿಂಗಾರ ತಂಡ ಕಳೆದ ಫೆಬ್ರವರಿಯಲ್ಲಿ ಹಗುರ ಫೈಬರ್‌ ದೋಟಿ ಬಳಸಿ ಅಕಡೆ ಕೊಯ್ಲು ಜಾಬ್‌ ವರ್ಕ್ ತಂಡ ಆರಂಭಿಸಿತು. 3 ದೋಟಿಯಿಂದ ಆರಂಭಿಸಿದ ಕೆಲಸ ಒಂದು ಹಂತದಲ್ಲಿ 15 ದೋಟಿ ತನಕ ಕೆಲಸ ಮಾಡಿತ್ತು. ಕಳೆದ 10 ತಿಂಗಳಲ್ಲಿ ಪಿಂಗಾರ ತಂಡ ಅಡಕೆ ಕೊಯ್ಲಿನಲ್ಲಿ 30 ಲಕ್ಷ ರು. ವ್ಯವಹಾರ ನಡೆಸಿದೆ. ಪ್ರಸ್ತುತ 10 ದೋಟಿ ಬಳಸಿ 20 ಕಾರ್ಮಿಕರು ಅಡಕೆ ಕೊಯ್ಲು ಕೆಲಸ ನಿರ್ವಹಿಸುತ್ತಿದ್ದಾರೆ.

‘ಹಲೋ ನಾರಿಯಲ್‌’ ಪ್ರೇರಣೆ‘:

ಮೋಹನ್‌ದಾಸ್‌ ಎಂಬವರು ಕೇರಳದ ತಿರುವನಂತಪುರಂನಲ್ಲಿ ಸ್ಥಾಪಿಸಿದ ಹಲೋ ನಾರಿಯಲ್‌ ಸಂಸ್ಥೆ ದೇಶದಲ್ಲೇ ಇಂತಹ ಪ್ರಥಮ ಪ್ರಯತ್ನ. ಛತ್ತೀಸ್‌ಗಢ ಮೂಲದ ಕಾರ್ಮಿಕರು ಸೈಕಲಿನಲ್ಲೇ ತಿರುವನಂತಪುರಂ ಸುತ್ತಮುತ್ತ ತೆರಳಿ ತೆಂಗು ಕೊಯ್ದು ಕೊಡುತ್ತಾರೆ. 13 ಶಾಖೆಗಳಲ್ಲಿ 150 ಕಾರ್ಮಿಕರಿದ್ದು, ಸುಮಾರು 50 ಸಾವಿರಕ್ಕೂ ರೈತರಿಗೆ ಸೇವೆ ಒದಗಿಸುತ್ತಿದ್ದಾರೆ. ಇಡೀ ವರ್ಕ್ ಆರ್ಡರ್‌ ಆ್ಯಪ್‌ ಮೂಲಕ ನಡೆಯುವುದರಿಂದ ಈ ವ್ಯವಸ್ಥೆ ಸುಸ್ಥಿರವಾಗಿದೆ ಎನ್ನುತ್ತಾರೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು. ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯ ನಿರ್ಚಾಲಿನಲ್ಲಿ ಹಲೋ ನಾರಿಯಲ್‌ ಘಟಕ ಆರಂಭಿಸಿದೆ.

ತೆಂಗು ಅಭಿವೃದ್ಧಿ ಮಂಡಳಿಯವರು ಸುಮಾರು 65 ಸಾವಿರ ಮಂದಿಗೆ ತೆಂಗು ಮರ ಏರುವ ತರಬೇತಿ ನೀಡಿ ಸಲಕರಣೆ ಒದಗಿಸಿದರೂ ಅದು ನಿರೀಕ್ಷಿತ ಯಶಸ್ಸು ಕಂಡಿಲ್ಲ, ಕಠಿಣ ದುಡಿಮೆಯಿಂದ ಹಲೋ ನಾರಿಯಲ್‌ ಯಶಸ್ಸು ಪಡೆಯಿತು ಎನ್ನುತ್ತಾರೆ ಪಡ್ರೆ.

ಅಡಕೆ ಕೊಯ್ಲು, ಔಷಧಿ ಸಿಂಪಡಣೆಗೆ ‘ಪಿಂಗಾರ’ದ ತಂಡ, ರಾಜ್ಯದಲ್ಲೇ ಪ್ರಥಮ

ಐದು ವರ್ಷಗಳ ಹಿಂದೆ ವಿಟ್ಲದಲ್ಲಿ ಆರಂಭವಾದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ರೈತರು ಬೆಳೆದ ಹಲಸು ಮತ್ತಿತರ ಫಲಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಹೆಸರು ಮಾಡಿದೆ. ಸಂಸ್ಥೆ 2021ರಲ್ಲಿ 3.50 ಕೋಟಿ ರು. ವ್ಯವಹಾರ ನಡೆಸಿ 4ಲಕ್ಷ ರು. ಲಾಭ ಗಳಿಸಿತ್ತು. 2021ರಲ್ಲಿ ಕನ್ನಡಪ್ರಭ, ಏಷಿಯಾನೆಟ್‌ ಸುವರ್ಣನ್ಯೂಸ್‌’ ಬಳಗದ ರೈತ ರತ್ನ ಪ್ರಶಸ್ತಿಗೆ ಪಾತ್ರವಾಗಿತ್ತು.

ಕಾರ್ಮಿಕರ ಅಭಾವದಿಂದ ಬೆಳೆಗಾರರು ವರ್ಷಕ್ಕೆ ಒಂದೇ ಬಾರಿ ತೆಂಗು ಕೊಯ್ಲು ಮಾಡುವ ಹಂತಕ್ಕೆ ತಲುಪಿದ್ದಾರೆ. ಪಿಂಗಾರ ಸಂಸ್ಥೆಯ ಈ ಪ್ರಯೋಗ ಯಶಸ್ವಿಯಾಗಬೇಕಾದರೆ ಬೆಳೆಗಾರರು 2-3 ಬಾರಿಯಾದರೂ ಕೊಯ್ಲು ಮಾಡಿಸುವುದು ರೂಢಿ ಮಾಡಬೇಕು. ವರ್ಷದಲ್ಲಿ 3-4 ಬಾರಿ ತೆಂಗು ಕೊಯ್ದರೆ ಇಳುವರಿಯೂ ಜಾಸ್ತಿ ಆಗಲಿದೆ.

-ರಾಮ್‌ ಕಿಶೋರ್‌ ಮಂಚಿ ಕಜೆ, ಪಿಂಗಾರ ಸಂಸ್ಥೆ ಅಧ್ಯಕ್ಷ.

ಪಿಂಗಾರದÜ ಪ್ರಯತ್ನ ಸ್ವಾಗತಾರ್ಹ. ಪಿಂಗಾರದ ಬಳಿಕ ಯಾವ ಸಂಸ್ಥೆಯವರೂ ಇಂತಹ ಪ್ರಯೋಗಕ್ಕೆ ಮುಂದಾಗದಿರುವುದು ಬೇಸರದ ಸಂಗತಿ. ಇಂತಹ ರೈತ ತಂಡಗಳನ್ನು ಬಳಸಿ, ಉಳಿಸಬೇಕಾದ್ದು ರೈತರ ಜವಾಬ್ದಾರಿ. ತೆಂಗು ಕೊಯ್ಲು ಮಾಡುವಾಗ ಅಂಕುಡೊಂಕಿನ ಮರ ಏರಲು ಹಾಗೂ ಕಾಳುಮೆಣಸು ಬಳ್ಳಿ ಹರಡಿದ ಮರಗಳಿಂದಲೂ ಕೊಯ್ಲು ಮಾಡಲು ವ್ಯವಸ್ಥೆ ರೂಪಿಸಬೇಕು. ಹಲೋ ನಾರಿಯಲ್‌ ಮಾದರಿಯಲ್ಲೇ ಸಂಪೂರ್ಣ ಡಿಜಿಟಲ್‌ ವ್ಯವಸ್ಥೆಯಡಿ ಆರ್ಡರ್‌ ಸ್ವೀಕರಿಸಿ ಸೇವೆ ನೀಡುವ ವ್ಯವಸ್ಥೆ ಕಲ್ಪಿಸಿದರೆ ಈ ಪ್ರಯೋಗ ತುಂಬ ಯಶಸ್ಸು ಕಾಣಲು ಸಾಧ್ಯ.

-ಶ್ರೀಪಡ್ರೆ, ಅಡಕೆ ಪತ್ರಿಕೆ ಸಂಪಾದಕ.

Follow Us:
Download App:
  • android
  • ios