ದಾವಣಗೆರೆ(ಮೇ.06): ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ಇಬ್ಬರು ಸೋಂಕಿತರು ಸಾವನ್ನಪ್ಪಿ, 40 ಸಕ್ರಿಯ ಕೇಸ್‌ ಇರುವುದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದರೆ, ಗ್ರಾಮೀಣ ಭಾಗದಿಂದ ಹಣ್ಣು, ಸೊಪ್ಪು, ತರಕಾರಿ ಮಾರಾಟಕ್ಕೆ ತರಲು, ಕೃಷಿಗೆ ಅಗತ್ಯ ಬೀಜ, ಗೊಬ್ಬರ, ರಸಗೊಬ್ಬರ ಖರೀದಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಹೌದು. ಸದ್ಯಕ್ಕಂತೂ ಕೊರೋನಾ ಮಹಾಮಾರಿಗೆ ಮೂವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೇ ಈಗ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಗ್ರಾಮೀಣ ರೈತರು, ಜನರು, ನೆರೆಹೊರೆಯ ತಾಲೂಕಿನ ಜನರು ಬಂದು, ಹೋಗಲು ಹಿಂದೇಟು ಹಾಕುವಂತೆ ಮಾಡಿದೆ. ಅಷ್ಟೇ ಅಲ್ಲ, ಜಾಲಿನಗರ, ಬಾಷಾನಗರ, ಇಮಾಂನಗರ, ಬೇತೂರು ರಸ್ತೆ ಕಡೆ ಪಾಸಿಟಿವ್‌ ಕೇಸ್‌ ಪತ್ತೆಯಾಗುತ್ತಲೇ ಜಿಲ್ಲಾ ಕೇಂದ್ರದ ಜನತೆ ಭಯಭೀತರಾಗಿದ್ದಾರೆ.

ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಅನುಮತಿ ನೀಡಿವೆ. ಹೀಗಿದ್ದರೂ ಇಡೀ ತರಕಾರಿ ಮಾರುಕಟ್ಟೆ, ಹಳೆ ಊರು ದಿನವಿಡೀ ಬಿಕೋ ಎನ್ನುತ್ತಿದೆ. ಇನ್ನು ಜಿಲ್ಲಾ ಕೇಂದ್ರದ ಹೊಸ ಊರಿನ ಭಾಗದಲ್ಲಿ ಜನರಿಗೆ ವೈರಸ್‌ನ ಭೀತಿ ಅಷ್ಟೊಂದು ಕಾಡುತ್ತಿಲ್ಲ ಎಂಬಂತೆ ಸುತ್ತುತ್ತಿದ್ದಾರೆ.

ಆದರೂ, ಇಡೀ ಮಹಾನಗರದ ಜನತೆಗೆ ವೈರಸ್‌ ಭೀತಿ ಮಾತ್ರ ತಪ್ಪಿಲ್ಲ. ಜನರು ತಮ್ಮ ರಸ್ತೆ, ಕ್ರಾಸ್‌, ಕೇರಿ, ತಮ್ಮ ಪ್ರದೇಶಕ್ಕೆ ಅನ್ಯರ ಪ್ರವೇಶ ನಿರ್ಬಂಧಿಸಿ, ಬೇಲಿ ಹಾಕಿಕೊಂಡಿದ್ದಾರೆ. ಕಾರು ಇತರೆ ವಾಹನಗಳಿರಲಿ, ದ್ವಿಚಕ್ರ ವಾಹನ, ಪಾದಚಾರಿಗಳಿಗೂ ಸಂಚಾರಕ್ಕೆ ಅವಕಾಶ ನೀಡದಂತೆ ತಮ್ಮ ರಸ್ತೆಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್‌ ಮಾಡಿಕೊಂಡಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಪೊಲೀಸ್‌ ಬ್ಯಾರಿಕೇಡ್‌ಗಳ ಜೊತೆಗೆ ಜನರು ಹಾಕಿದ ಬೇಲಿಯಿಂದಾಗಿ ಸುತ್ತಾಡಿಕೊಂಡು ಹೋಗುವ ಸ್ಥಿತಿ ಇಲ್ಲಿದೆ.

2 ಗಂಟೆಗಳೊಳಗಾಗಿ ಹೊರ ಜಿಲ್ಲೆಗೆ ತೆರಳಲು ಒನ್‌ವೇ ಪಾಸ್‌: ಶಿವಮೊಗ್ಗ ಡಿಸಿ ಶಿವಕುಮಾರ್‌

ನಗರ ವಾಸಿಗಳು ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಿದ್ದರೆ, ಗ್ರಾಮೀಣರು ದಾವಣಗೆರೆಯತ್ತ ಮುಖ ಮಾಡಲು ಹೆದರುತ್ತಿದ್ದಾರೆ. 28 ಸಕ್ರಿಯ ಕೊರೋನಾ ಪಾಸಿಟಿವ್‌ ಕೇಸ್‌, 800ಕ್ಕೂ ಹೆಚ್ಚು ಜನರು ಆಸ್ಪತ್ರೆ, ಲಾಡ್ಜ್‌ನಲ್ಲಿ ಕ್ವಾರಂಟೈನ್‌ ಇರುವುದು ಜನರನ್ನು ಮತ್ತಷ್ಟುಭಯಭೀತರನ್ನಾಗಿಸಿದೆ. ವಿನಾಕಾರಣ ರಸ್ತೆಗಳಲ್ಲಿ, ಕಟ್ಟೆಗಳಲ್ಲಿ ಕೂಡುತ್ತಿದ್ದವರಲ್ಲಿ ಭಯ ಹುಟ್ಟುಹಾಕಿದೆ.

ಮತ್ತೊಂದು ಕಡೆ ಗ್ರಾಮೀಣ ಭಾಗದಿಂದ ಹಣ್ಣು, ಸೊಪ್ಪು, ತರಕಾರಿ ಬರಬೇಕಾಗಿತ್ತು. ರೈತರು ಅವುಗಳನ್ನು ತಾರದ ಹಿನ್ನೆಲೆ ವರ್ತಕರೂ ವ್ಯಾಪಾರ ಇಲ್ಲದೇ ಅಂಗಡಿ ಮುಂಗ್ಗಟ್ಟು ಬಂದ್‌ ಮಾಡುವತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ಜನರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಅಧಿಕಾರಿಗಳು ಮಾರುಕಟ್ಟೆತೆರೆಯುವಂತೆ ಸೂಚಿಸಿದ್ದಾರೆ. ಆದರೆ, ಕೃಷಿ ಉತ್ಪನ್ನ ಮಾರುಕಟ್ಟೆಗೇ ಬರದಿದ್ದರೆ ನಾವು ಮಾಡುವುದಾದರೂ ಏನಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

ಅಗತ್ಯ ವಸ್ತು ಖರೀದಿಗೆ, ಸಂಚಾರಕ್ಕೆ, ವ್ಯಾಪಾರಕ್ಕೆ ಬೆಳಗ್ಗೆ 7ರಿಂದ ಮಧ್ಯಾಹ್ನ 1 ರವರೆಗೆ ಅವಕಾಶ ಮಾಡಲಾಗಿದೆ. ಆದರೂ ವೈರಸ್‌ ಭೀತಿಯಿಂದಾಗಿ ಜನರು ಮನೆಯಿಂದ ಹೊರಬರಲು ಮನಸ್ಸು ಮಾಡಲಿಲ್ಲ. ಇಷ್ಟಾಗಿಯೂ ಅನವಶ್ಯಕಾಗಿ ಸುತ್ತಾಡುವವರು, ಕಟ್ಟೆಮೇಲೆ ಕುಳಿತವರು, ಗುಂಪು ಕಟ್ಟಿಕುಳಿತವರು, ಅನವಶ್ಯಕ ತಿರುಗುತ್ತಿದ್ದವರಿಗೆ ಧ್ವನಿವರ್ಧಕ ಮೂಲಕ ಎಚ್ಚರಿಸುತ್ತ, ಅಗತ್ಯ ಬಿದ್ದಲ್ಲಿ ದಂಡ ನೀತಿ ಪ್ರಯೋಗಿಸಿ, ಕಿಡಿಗೇಡಿಗಳನ್ನು ಮನೆಗೆ ಕಳಿಸುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ.