ಮಂಗಳೂರು (ಆ.20) : ಲೇಖಕ ನಿರಂತರ ಅಧ್ಯಯನ ಶೀಲನಾಗುವ ಜತೆಗೆ ತನ್ನ ಆವರಣವನ್ನು ಗಟ್ಟಿ ಮಾಡಿಕೊಂಡಾಗ ಆತನಿಂದ ಇನ್ನಷ್ಟು ಉತ್ತಮ ಬರಹಗಳು ಹೊರ ಹೊಮ್ಮಲು ಸಾಧ್ಯ ಎಂದು ಸಾಹಿತಿ ವಿವೇಕಾನಂದ ಕಾಮತ್ ಹೇಳಿದರು.

ಬಿಜೈ ಭಾರತಿನಗರದ ಆ್ಯಡ್ ಐಡಿಯಾದಲ್ಲಿ ಗುರುವಾರ ಯುವಲೇಖಕ, ಕನ್ನಡಪ್ರಭ ಮಂಗಳೂರು ಕಚೇರಿಯ ಉಪಸಂಪಾದಕ ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಚೊಚ್ಚಲ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು.

ರಾಜ್ಯದ 3 ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ...

ಸಾಹಿತ್ಯ ಕಲ್ಲುಬಂಡೆಯಲ್ಲಿ ಮೂಡಿಬರುವ ಮೂರ್ತಿಯಂತೆ. ನಮ್ಮನ್ನು ನಾವೇ ಕೆತ್ತಿಕೊಂಡು, ಅದು ಅಲಂಕಾರಕ್ಕೆ ಆಗಬೇಕೆ, ಇಲ್ಲವೇ ಓದುಗರ ಮನಸ್ಸಲ್ಲಿ ಸ್ಥಾಪನೆಯಾಗಬೇಕೆ ಎನ್ನುವುದು ಲೇಖಕನ ಅಧ್ಯಯನಶೀಲತೆಯಿಂದ ಹೊರಬರುತ್ತದೆ. ಮನುಷ್ಯ ತನ್ನ ಆಸೆ ಈಡೇರಿಸಲು ನೈತಿಕ ಅಥವಾ ಅನೈತಿಕ ಮಾರ್ಗಗಳನ್ನು ಅನುಸರಿಸುತ್ತಾನೆ. ಆದರೆ ಆರೋಗ್ಯಕರ ಸಮಾಜದಲ್ಲಿ ಬದುಕಬೇಕಾದರೆ ನೈತಿಕ ಮಾರ್ಗದಲ್ಲೇ ಬದುಕಬೇಕಾಗುತ್ತದೆ. ಬದುಕಿನೊಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ನಡೆಯುವುದು ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ಮೂಲದ್ರವ್ಯವಾಗಿದೆ ಎಂದರು.

ಪಟ್ಟು ಸಡಿಲಿಸದ ನೆರೆ ರಾಜ್ಯ : ಕೇರಳಕ್ಕೆ ಹೋಗೋದಾದ್ರೆ ಹುಷಾರ್!.

ಕಾದಂಬರಿ ನಾಲ್ಕು ಕವಲುಗಳಲ್ಲಿ ಸಾಗುತ್ತದೆ. ಒಂದು ರೀತಿಯಲ್ಲಿ ಈ ಪುಸ್ತಕವನ್ನು ಓದಿದಾಗ ಪದಬಂಧವನ್ನು ಪೂರ್ಣಗೊಳಿಸಿದ ಪರಿಪೂರ್ಣತೆ ಸಿಗುತ್ತದೆ. ಕಾದಂಬರಿ ಪರಿಚಯ ಮಾಡಿದ ಬರಹಗಾರ್ತಿ ರಶ್ಮಿ ಶರ್ಮ, ಈ ಕಾದಂಬರಿ ನೈಜತೆಗೆ ತುಂಬಾ ಹತ್ತಿರವಾಗಿದೆ. ನಮ್ಮ ಸುತ್ತಮುತ್ತ ನಡೆಯುವ ವಿಷಯಗಳೇ ಈ ಪುಸ್ತಕದ ಪ್ರಮುಖ ವಸ್ತುವಾಗಿದೆ. ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಚಯಿಸುವ ಕೆಲಸವೂ ಈ ಕಾದಂಬರಿ ಮೂಲಕ ಆಗಿದೆ ಎಂದು ವಿವರಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಪತಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ (ಮಾಮ್) ಗೌರವಾಧ್ಯಕ್ಷ ವೇಣು ಶರ್ಮ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದಿನಕರ ಇಂದಾಜೆ ಉಪಸ್ಥಿತರಿದ್ದರು.
ಪತ್ರಕರ್ತ ಕೃಷ್ಣಮೋಹನ ಕಾರ್ಯಕ್ರಮ ನಿರೂಪಿಸಿದರು. ವೇಣುವಿನೋದ್ ಕೆ.ಎಸ್. ಸ್ವಾಗತಿಸಿದರು. ಧೀರಜ್ ಪೊಯ್ಯೆಕಂಡ ವಂದಿಸಿದರು. ಅವನಿ ಶರ್ಮ ಸಹಕರಿಸಿದರು.

ಕಳೆದು, ಪಡೆಯುವುದರ ನಡುವಿನ ಕಥೆ “ಮಿತಿ”
'ಹಣ, ಉದ್ಯೋಗ, ಸಂಬಂಧ ಹೀಗೆ ಏನನ್ನಾದರೂ ಉಳಿಸಿಕೊಳ್ಳಬೇಕು ಅನ್ನುವ ಭಯದಲ್ಲಿ ನಾವು ಬದುಕು ಸಾಗಿಸುತ್ತಾ ಇರುತ್ತೇವೆ. ಆದರೆ, ಆ ಭಯದಿಂದಾಗಿ ನಾವು ಕಳೆದುಕೊಳ್ಳುತ್ತಿರುವುದೇನು ಅನ್ನುವುದನ್ನು ಮರೆತುಬಿಡುತ್ತೇವೆ.'

ಸಹೋದ್ಯೋಗಿ ಮಿತ್ರ (ಕನ್ನಡಪ್ರಭ ಮಂಗಳೂರು ಆವೃತ್ರಿಯ ಉಪಸಂಪಾದಕ) ಧೀರಜ್ ಪೊಯ್ಯೆಕಂಡ ಅವರ ಚೊಚ್ಚಲ ಮುದ್ರಿತ ಕಾದಂಬರಿ “ಮಿತಿ”ಯ ಒಟ್ಟೂ ಸಾರವನ್ನು ಕಾದಂಬರಿಯ ಈ ಸಾಲುಗಳು ಕಟ್ಟಿಕೊಡುತ್ತವೆ ಅನ್ನಿಸುತ್ತದೆ. ಸುಮಾರು ಆರು ದಂಪತಿಯನ್ನೂ ಸೇರಿ 15ರಷ್ಟು ಪ್ರಧಾನ ಪಾತ್ರಗಳು ಕಟ್ಟಿಕೊಡುವ 183 ಪುಟಗಳ ಕಾದಂಬರಿ ಸಂಬಂಧಗಳ ನಡುವಿನ ವೈರುಧ್ಯ ಮತ್ತು ಸಮಾಜ, ಮನೆಯವರು ಏನಂದುಕೊಳ್ಳಬಹುದೋ ಎಂಬ ಆತಂಕದಲ್ಲೇ ದಿನದೂಡುವ ಮನಸ್ಸುಗಳ ನಡುವಿನ ಕಥೆ...

 ಹೇಳದೇ ಪ್ರೀತಿ ಮಾಡಿ, ಕೇಳಿ ಅನುಮತಿ ಸಿಕ್ಕದೆ ಮದುವೆಯಾದ ಜೋಡಿಯೊಂದು ಕಡೆಯಾದರೆ, ಹೇಳಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಪ್ರೀತಿಯನ್ನು ಹೇಳಿಯೂ ಹೇಳದಂತೆ ದಿನದೂಡುವ ಜೋಡಿ ಮತ್ತೊಂದು ಕಡೆ. ಮರ್ಯಾದೆ, ಗೌರವ, ಪ್ರತಿಷ್ಠೆಯ ಆತಂಕದಲ್ಲಿ ಮಕ್ಕಳಿಂದ ಸಂಬಂಧ ಕಡಿದುಕೊಂಡು ಕಣ್ಣೀರಿನಲ್ಲಿ ದಿನದೂಡುವ ವೃದ್ಧ ದಂಪತಿಗಳು, ಅವರಿಂದ ದೂರವಾಗಿ ಸಮಾಧಾನವನ್ನೇ ಕಳೆದುಕೊಂಡು ಬದುಕುತ್ತಿರುವ ಯುವ ದಂಪತಿಗಳು...

ನಡುವೆ ನಶೆಯ ವಿರುದ್ಧದ ಲೇಖಕರ ಆಕ್ರೋಶ, ಸಂಬಂಧಗಳನ್ನು ಉಳಿಸಿಕೊಳ್ಳಲು ಪಡುವ ಪಾಡು, ಅಂತರಂಗದ ತುಮುಲಗಳು ಒತ್ತಡಗಳಾಗಿ ಕಾಡುವುದು ಎಲ್ಲವೂ ಸ್ಪಷ್ಟವಾಗಿ ಕಂಡುಬರುತ್ತವೆ.

ಎಲ್ಲದಕ್ಕಿಂತ ಹೆಚ್ಚಾಗಿ ಕಾಡುವುದು ಚಿನ್ಮಯಿ ಮತ್ತು ಆದಿತ್ಯ ಎಂಬ ವಿರುದ್ಧ ಧ್ರುವಗಳಂತೆ ಕಾಣುವ ಯುವ ಜೋಡಿ. ಸ್ತ್ರೀಸಹಜ ಕುತೂಹಲ, ಲವಲವಿಕೆ, ತುಸು ಮಾತ್ಸರ್ಯ, ಪೊಸೆಸಿವ್ ನೆಸ್ ನಿಂದಿರುವ ಚಿನ್ಮಯಿ ಅಪ್ಪನೊಡನೆ ಗಂಡುಬೀರಿಯಂತೆ ಸಲುಗೆಯಿಂದ ಮಾತನಾಡುತ್ತಾಳಾದರೂ ಪ್ರೀತಿಸಿದವನೊಡನೆ ಅದನ್ನು ಹೇಳಲು ಹೆಣಗುತ್ತಾಳೆ. ಒಂಥರಾ ಅಂತರ್ಮುಖಿಯಂತೆ ಕಾಣುವ ಆದಿತ್ಯನಿಗೆ ತನ್ನ ಆಕ್ರೋಶಗಳನ್ನು ಹೇಳಿಕೊಳ್ಳಲು ಬಹಳಷ್ಟು ಸಂದರ್ಭ ವೇದಿಕೆಗಳೇ ಸಿಗುವುದಿಲ್ಲ. ಅವನೊಳಗೆ ಹುಟ್ಟುವ ಸಿಟ್ಟು ಅವನೊಳಗೇ ಸಾಯುತ್ತವೆ...

ಆರಂಭದ ಭಾಗ ಪಾತ್ರಗಳ ಪರಿಚಯದೊಂದಿಗೆ ಗಂಭೀರವಾಗಿ ಸಾಗಿ, ಮಧ್ಯಂತರ ಕಥೆಯನ್ನು ಪ್ರವೇಶಿಸುವಂತೆ ಆವಾಹಿಸಿಕೊಂಡು, ಕೊನೆಯ ಹಂತ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಯುವ ಲೇಖಕರೊಬ್ಬರ ಸೂಕ್ಷ್ಮ ಗ್ರಹಣ ಶಕ್ತಿಯ ಪ್ರತೀಕದಂತೆ ಕಾಣಿಸುವ ಈ ಕಾದಂಬರಿ ಫೇಸ್ ಬುಕ್ಕಿನಲ್ಲೂ ಧಾರಾವಾಹಿಯಾಗಿ ಪ್ರಕಟವಾಗಿ ಅಪಾರ ಜನಮೆಚ್ಚುಗೆ ಗಳಿಸಿತ್ತು... 

#ಮಿತಿ ಕಾದಂಬರಿ ಇಂದು (ಆ.20ರಂದು ಮಂಗಳೂರು ಬಿಜೈ Addidea ಕಚೇರಿಯಲ್ಲಿ ಬಿಡುಗಡೆ ಆಯ್ತು. ಸಾಹಿತಿ ವಿವೇಕಾನಂದ ಕಾಮತ್ ಕೃತಿ ಲೋಕಾರ್ಪಣೆಗೊಳಿಸಿದರು. MAAM ಗೌರದಾಧ್ಯಕ್ಷ ವೇಣುಶರ್ಮ ಅಧ್ಯಕ್ಷತೆ ವಹಿಸಿದ್ದರು.

ಕಾದಂಬರಿ ಬೇಕಾದವರು 9632062405 ಸಂಖ್ಯೆಗೆ ಭೀಮ್, ಫೋನ್ ಪೆ ಅಥವಾ ಗೂಗಲ್ ಪೇ ಮೂಲಕ 180/- ರುಪಾಯಿಗಳನ್ನು ಕಳುಹಿಸಿ, ಪಾವತಿಯ ಸ್ಕ್ರೀನ್ ಶಾಟ್ ಜೊತೆಗೆ ಅದೇ ಸಂಖ್ಯೆಗೆ ವಿಳಾಸ ವಾಟ್ಸ್ಯಾಪ್ ಮಾಡಿ.

ಅಥವಾ

 ಕನ್ನಡಲೋಕ ವೆಬ್‌ಸೈಟ್‌ನಲ್ಲಿ https://www.kannadaloka.in/ ತಾಣದಲ್ಲಿ #ಮಿತಿ ಕಾದಂಬರಿಗೆ ಅಂಚೆ ವೆಚ್ಚ ಇರುವುದಿಲ್ಲ....ಪುಸ್ತಕದ ಬೆಲೆ ₹180 ಮಾತ್ರ ಪಾವತಿಸಿದರೆ ಸಾಕು....


ಮಾಹಿತಿಗೆ: +919632062405.

-ಕೃಷ್ಣಮೋಹನ.