Asianet Suvarna News Asianet Suvarna News

ಭೀಮಾತೀರದಲ್ಲಿ ಜನಮೆಚ್ಚುಗೆ ಪಡೆದ ಡಿಸಿ ನಡೆ ಹಳ್ಳಿ ಕಡೆ, ಗರ್ಭಿಣಿಯರಿಗೆ ಸೀಮಂತ, ಮಗುವಿಗೆ ನಾಮಕರಣ!

ಆಲಮೇಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಬಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರನ್ನು ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿವಾಗಿ ಬರಮಾಡಿಕೊಂಡರು.

jilladhikarigala nade halli kade success in bhima teera at Vijayapura gow
Author
First Published Dec 17, 2022, 10:35 PM IST

ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
           
ವಿಜಯಪುರ (ಡಿ.17): ಆಲಮೇಲ ತಾಲೂಕಿನಲ್ಲಿ ನೀರಾವರಿ ಬಂದ ಮೇಲೆ  ಈ ಭಾಗದ ಸಾಕಷ್ಟು ರಸ್ತೆಗಳು ಸುಧಾರಣೆಯಾಗಿವೆ. ರೈತರು ಉತ್ತಮ ಬೆಳೆ ಬೆಳೆಯುವಂತಾದರೂ  ತಾವು ಬೆಳೆದ ಬೆಳೆಗಳನ್ನು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲು ಬೆಳೆಯನ್ನು ಹೊಲದಿಂದ ಮಾರುಕಟ್ಟೆಗೆ ಕೊಂಡೊಯ್ಯಲು ಕೆಲವೊಂದು ಕಡೆಗಳಲ್ಲಿ ರಸ್ತೆ ಇಲ್ಲದೇ ಸಮಸ್ಯೆಯಾಗುತ್ತಿರುವದು ಗಮನಕ್ಕೆ ಬಂದಿದ್ದು ಈಗಾಗಲೇ ಈ ಕುರಿತು ರೈತರ ಹೊಲಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂದಗಿ ಶಾಸಕರಾದ ರಮೇಶ ಭೂಸನೂರ ಅವರು ಹೇಳಿದರು. 

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ:
ಇಂದು ಆಲಮೇಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಅರಿತು ಸಮಸ್ಯೆಗೆ ಪರಿಹಾರ ದೊರಕಿಸುವ ಸದುದ್ದೇಶ ಹೊಂದಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮನ್ನು ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರ, ರೈತರ ಮನೆಗಳಿಗೆ ಹೋಗಿ, ಭೇಟಿ ಮಾಡಿ ಸ್ಥಳದಲ್ಲಿಯೇ ಅವರ ಕುಂದು-ಕೊರತೆಗಳನ್ನು ಆಲಿಸಿ, ಪರಿಹಾರಿ ಕಲ್ಪಿಸುವ ಈ ಕಾರ್ಯಕ್ರಮ ಯಶಸ್ವಿಗೆ ಇಲ್ಲಿನ ಮೂಲಭೂತ ಸೌಲಭ್ಯ, ಜನರ ಕುಂದು ಕೊರತೆಗೆ ಪರಿಹಾರ, ಸೇರಿದಂತೆ ತಾಲೂಕಿನ ಸಕಲ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಭೇಟಿ ನೀಡಿದ ಸಂದರ್ಭಗಳಲ್ಲಿ ಅನೇಕ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು, ರೈತರು ಭೇಟಿಯಾಗಿ ವಿಧವಾ ವೇತನ, ಪಿಂಚಣಿ, ವೃದ್ದಾಪ್ಯ ವೇತನ, ಗ್ರಾಮದ ಮೂಲಭೂತ ಸೌಲಭ್ಯಗಳ ಕುರಿತು ಹಾಗೂ ರೈತರ ಹೊಲಗಳಿಗೆ ರಸ್ತೆ ಕಲ್ಪಿಸಲು  ಹಲವಾರು ಜನರು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳುತ್ತಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಇಂದು ತಾಲೂಕಿನ ಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದು, ಸಾರ್ವಜನಿಕರು ಸಹ ತಾಳ್ಮೆಯಿಂದ ಸಮಸ್ಯೆಗಳನ್ನು ಸಲ್ಲಿಸಬೇಕು. ಅಧಿಕಾರಿಗಳು ಸಹ ಈ ಭಾಗದ ಜನರ ಸಮಸ್ಯೆಗಳನ್ನು ಅರಿತು ಪರಿಹಾರ ದೊರಕಿಸಿ ತಾಲೂಕಿನ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ಹಲವು ಮುಖ್ಯ ರಸ್ತೆಗಳು ಅಭಿವೃದ್ಧಿಯಾಗಿವೆ. ಬೊಮ್ಮನಹಳ್ಳಿಯಿಂದ ಆಲಮೇಲಕ್ಕೆ ಹೋಗುವ 6.5 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ. ತಾಲೂಕಿನ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನಮ್ಮಲ್ಲಿನ ಅಂಧಕಾರವನ್ನು ದೂರಮಾಡಲು ಶಿಕ್ಷಣವೊಂದೆ ಪರಿಹಾರ ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು.  ಬಮ್ಮನಹಳ್ಳಿಗೆ ಮಂಜೂರಾಗಿರುವ ಸರ್ಕಾರಿ ಪ್ರೌಢಶಾಲೆಗೆ ಸರ್ಕಾರಿ ಜಾಗ ಒದಗಿಸಬೇಕು. ಗ್ರಾಮಸ್ಥರಿಗೆ ನಾನು ಕೂಡ 2.5 ಎಕರೆ ಜಾಗ ನೀಡಲು ಈಗಾಗಲೇ ಮನವಿ ಮಾಡಿಕೊಂಡಿದ್ದು,  ಜಮೀನು ನೀಡಲು ಮುಂದೆ ಬಂದಲ್ಲಿ, ನಾನು ಸಹ 2ಲಕ್ಷ ರೂ. ದೇಣಿಗೆ ನೀಡುವುದಾಗಿ ಶಾಸಕರು ಹೇಳಿದರು.

ಸಾಂಪ್ರದಾಯಿಕ ಸ್ವಾಗತ ಮಾಡಿದ ಗ್ರಾಮಸ್ಥರು: 
ಇದಕ್ಕೂ ಮೊದಲು ಬಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರನ್ನು ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿವಾಗಿ ಬರಮಾಡಿಕೊಂಡರು. ಡೊಳ್ಳು, ಹಲಗೆ ವಾದನ, ಸಂಗೀತ ವಾದ್ಯದೊಂದಿಗೆ ಕಾರ್ಯಕ್ರಮದ ವೇದಿಕೆಗೆ ಸಡಗರ ಸಂಭ್ರಮದಿಂದ ಕರೆತರಲಾಯಿತು. ನಂತರ ಜಿಲ್ಲಾಧಿಕಾರಿಗಳು ಬಮ್ಮನಹಳ್ಳಿ ಗ್ರಾಮ ವೀರಯೋಧ ದಿ: ಗೊಲ್ಲಾಳಪ್ಪ ಭೀ. ವಾಸೆನಾ ಇವರ ಸಮಾಧಿಗೆ ತೆರಳಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.

ಗರ್ಭಿಣಿ ಯ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ: 
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಬಾಯಿ ಬಿರಾದಾರ ಸೇರಿದಂತೆ ಊರಿನ ಮಹಿಳೆಯರು 5 ಜನ ಗರ್ಭಿಣಿ ಮಹಿಳೆಯರಿಗೆ ಆರತಿ ಬೆಳಗಿ ಹೂ, ಬಳೆ, ಹಣ್ಣು ನೀಡಿ ಉಡಿ ತುಂಬುವ ಮೂಲಕ ಸೀಮಂತ ಕಾರ್ಯಕ್ರಮ ನಡೆಸಿದ್ದು, ಕಾರ್ಯಕ್ರಮದಲ್ಲಿ ವಿಶಿಷ್ಟ ಹಾಗೂ ವಿಶೇಷವಾಗಿತ್ತು.  

ಶಿಶು ಜನ್ಮಾಚರಣೆ:
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ಕುಮಾರಿ ವಿಜಯಲಕ್ಷ್ಮೀ ಮತ್ತು ಕುಮಾರಿ ಅಲೀನಾ ಅವರ ಹುಟ್ಟು ಹಬ್ಬವನ್ನು ವೇದಿಕೆಯಲ್ಲಿಯೇ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. 

ಬಸ್ ಸಂಚಾರ ಪ್ರಾರಂಭ:
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಈ ಭಾಗದ ವಿದ್ಯಾರ್ಥಿಗಳ ಬೇಡಿಕೆಯಾದ ಮಧ್ಯಾಹ್ನ 12-30 ಗಂಟೆಗೆ ಬೊಮ್ಮನಳ್ಳಿ-ದೇವರನಾವದಗಿ-ಸಿಂದಗಿ ಸಂಚರಿಸುವ ನೂತನವಾಗಿ ಆರಂಭಿಸಲಾದ ಬಸ್‍ಗೆ ಶಾಸಕರಾದ ರಮೇಶ ಭೂಸನೂರ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. 

ಆರೋಗ್ಯ ಶಿಬಿರದಲ್ಲಿ ತಪಾಸಣೆ: 
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಇಂದು ಬಮ್ಮನಹಳ್ಳಿಯಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಲಘಾಣ ಇವರ ಆಶ್ರಯದಲ್ಲಿ ಆಯೋಜಿಸಲಾದ ಆರೋಗ್ಯ ಶಿಬಿರದಲ್ಲಿ 119 ಎಬಿಎಚ್‍ಎ ಕಾರ್ಡಗಳನ್ನು ಮಾಡಲಾಯಿತು. 69 ಜನರ ಸಕ್ಕರೆ ಖಾಯಿಲೆ ತಪಾಸಣೆ, ಈ ಪೈಕಿ ಚಿಕಿತ್ಸೆ ಅವಶ್ಯಕತೆ ಇರುವ  9 ಜನರಿಗೆ ಚಿಕಿತ್ಸೆ ನೀಡಲಾಯಿತು. ಅದರಂತೆ 89 ಜನರ ರಕ್ತದೊತ್ತಡವನ್ನು ಪರಿಶೀಲಿಸಿ ಸೂಕ್ತ  ವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡಲಾಯಿತು. 

10ಲಕ್ಷ ರೂ. ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ: 
2022-23ನೇ ಸಾಲಿನ ನರೇಗಾ ಯೋಜನೆ ಬಮ್ಮನಹಳ್ಳಿ ಗ್ರಾಮದಿಂದ ಕುಮಸಗಿ ಗ್ರಾಮಕ್ಕೆ ಹೋಗುವ ಚಂದಪ್ಪ ದೇಸಾಯಿ ಇವರ ಜಮೀನಿನಿಂದ ಶಿವರಾಜ ಮಡಿವಾಳಪ್ಪ ದೇಸಾಯಿ ಇವರ ಹೊಲದವರೆಗೆ ಚರಂಡಿ ನಿರ್ಮಾಣದ ಅಂದಾಜು 10 ಲಕ್ಷ ರೂ. ಕಾಮಗಾರಿಗೆ ಶಾಸಕ ರಮೇಶ ಭೂಸನೂರ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೂಮಿ ಪೂಜೆ ನೆರವೇರಿಸಿದರು. 

ಸರ್ಕಾರದ ಯೋಜನೆಗಳ ಮಾಹಿತಿ ಮಳಿಗೆ: 
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಆಲಮೇಲ ತಾಲೂಕಿನ ಬಮ್ಮನಹಳ್ಳಿಯಲ್ಲಿ ಕೌಶಲ್ಯಾಭಿವೃದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಬಮ್ಮನಹಳ್ಳಿ ಸಂಜೀವಿನಿ, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಜೀವಿನಿ ಮಾರಾಟ ಮಳಿಗೆ, ಕೃಷಿ ಇಲಾಖೆಯ ಕೃಷಿ ವಸ್ತು ಪ್ರದರ್ಶನ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷನಾ ಅಭಿಯಾನದ ಪೌಷ್ಠಿಕ ಆಹಾರ ಪದಾರ್ಥ ಮಳಿಗೆ, ಪಶು ಸಂಗೋಪನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಯೋಜನೆಗಳ ಮಾಹಿತಿ ತಲುಪಿಸುವ ವಸ್ತು ಪ್ರದರ್ಶನ  ಮಳಿಗೆಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. 

ವಿಜಯಪುರ ಕುಡಿಯುವ 'ಗಲೀಜು' ನೀರಿನ ಸಮಸ್ಯೆ: ಸ್ಥಳಕ್ಕೆ ಅಧಿಕಾರಿಗಳು ದೌಡು

ಸವಲತ್ತು ವಿತರಣೆ ಮಾಡಿದ ಡಿಸಿ: 
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಲ್ಲಮ್ಮ ರಾಂಪೂರ, ಮೌನಪ್ಪ ಬಡಿಗೇರ ಹಾಗೂ ಅಯ್ಯಪ್ಪ ಕಾಳಗಿ ಇವರಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಊರುಗೋಲ ಹಾಗೂ ಅವಶ್ಯಕ ಸಲಕರೆಣೆ ವಿತರಿಸಿದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ 6 ಜನರಿಗೆ ಪಡಿತರ ಚೀಟಿ,  8 ಜನರಿಗೆ ಸಾಮಾಜಿಕ ಭದ್ರತಾ ಪಿಂಚಣಿ ಆದೇಶ ಪತ್ರ, 5ಜನ ರೈತರಿಗೆ  ಜಂತುನಾಶಕ ಮತ್ತು ಮಿನರಲ್ ಮಿಕ್ಸರ್ ಪೌಡರ್ ವಿತರಿಸಿದರು. 

ವಿಜಯಪುರ ಡಿಸಿ ನಡೆ ಹಳ್ಳಿ ಕಡೆ: ತಮ್ಮೂರಿನ ಸಮಸ್ಯೆಗಳನ್ನು ಒಂದೊಂದಾಗಿ ಬಿಚ್ಚಿಟ್ಟ ಜನರು

ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು: 
 ಕಾರ್ಯಕ್ರಮದಲ್ಲಿ ಒಟ್ಟು 107 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ  24 ಅರ್ಜಿಗಳಿಗೆ ಸ್ಥಳದಲ್ಲಿಯೇ ವಿಲೇ ಮಾಡಲಾಗಿದೆ ಉಳಿದ 83 ಅರ್ಜಿಗಳಿಗೆ ಶೀಘ್ರ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಅವರು ಸೂಚನೆ ನೀಡಿದರು. ಪಶುಸಂಗೋಪನ ಇಲಾಖೆಯ 02,ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 10,ಲೀಡ್ ಬ್ಯಾಂಕ ಮ್ಯಾನೇಜರ್ ಅವರಿಗೆ 02,,ಆಹಾರ ಇಲಾಖೆಗೆ 01,ಎಡಿಎಲ್ ಆರ್ 14, ಪಂಚಾಯತ್ ರಾಜ್ ಇಂಜಿನೀಯರಿಂಗ್ 10,ಶಿಶು ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 02,ಆರೋಗ್ಯ ಇಲಾಖೆ 02,ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ 01,ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಗೆ ಸಂಬಂಧಿಸಿದಂತೆ 01,ಅಬಕಾರಿ ಇಲಾಖೆಗೆ 02,ಕಂದಾಯ ಇಲಾಖೆಗೆ ಸಲ್ಲಿಕೆಯಾದ 30 ಅರ್ಜಿಗಳಲ್ಲಿ 24 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇ ಮಾಡಿದೆ.ಉಳಿದ 06 ಅರ್ಜಿಗಳಿಗೆ ಸೂಚನೆ ನೀಡಿದೆ.ಲೋಕೋಪಯೋಗಿ ಇಲಾಖೆಯ-01, ಹೆಸ್ಕಾಂ 08, ನೋಂದಣಾಧಿಕಾರಿ ಕಚೇರಿಗೆ ಸಂಬಂಧಿಸಿದ 01 ಹಾಗೂ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ 20 ಅರ್ಜಿ ಸಲ್ಲಿಕೆಯಾಗಿವೆ.

Follow Us:
Download App:
  • android
  • ios