ಚಾಮರಾಜನಗರದಲ್ಲಿ ಜೆಟ್ ವಿಮಾನ ಪತನ

- ತರಬೇತಿ ಹಾರಾಟ ವೇಳೆ ಪತನಗೊಂಡ ಕಿರಣ್‌ ಏರ್‌ಪಥ್‌ ಯು 692, - ಚಾಮರಾಜನಗರದ ಬೋಗಾಪುರ ಸಮೀಪ ಘಟನೆ, - ಪ್ಯಾರಾಚ್ಯೂಟ್‌ ಮೂಲಕ ಜಿಗಿದು ಇಬ್ಬರು ಪೈಲಟ್‌ ಬಚಾವ್‌, - ಪೈಲಟ್‌ಗಳಿಗೆ ಗಾಯ, ಬೆಂಗಳೂರಿನ ಸೇನಾಸ್ಪತ್ರೆಗೆ ದಾಖಲು

Jet Plane Crash in Chamarajanagara grg

ಚಾಮರಾಜನಗರ(ಜೂ.01): ಭಾರತೀಯ ವಾಯುಪಡೆಯ ಲಘು ಯುದ್ಧ ತರಬೇತಿ ವಿಮಾನ ‘ಕಿರಣ್‌ ಏರ್‌ಪಥ್‌ ಯು 692’, ತಾಂತ್ರಿಕ ದೋಷದಿಂದಾಗಿ ಗುರುವಾರ ಮಧ್ಯಾಹ್ನ ಚಾಮರಾಜನಗರ ತಾಲೂಕಿನ ಬೋಗಾಪುರ ಗ್ರಾಮದ ಸಮೀಪ ಪತನಗೊಂಡಿದೆ. ಇದರೊಳಗಿದ್ದ ವಿಂಗ್‌ ಕಮಾಂಡರ್‌ ತೇಜ್‌ಪಾಲ್‌ ಹಾಗೂ ತರಬೇತಿ ಪೈಲಟ್‌ ಭೂಮಿಕಾ ತುರ್ತು ನಿರ್ಗಮನದ ಮೂಲಕ ಪ್ಯಾರಾಚ್ಯೂಟ್‌ ಮೂಲಕ ಜಿಗಿದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೂ ಕುತ್ತಿಗೆ ಬಳಿ ಸಣ್ಣ, ಪುಟ್ಟಗಾಯವಾಗಿದ್ದು, ಸೇನಾಪಡೆಯ ಹೆಲಿಕಾಪ್ಟರ್‌ ಮೂಲಕ ಅವರನ್ನು ಬೆಂಗಳೂರಿನ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಈ ವಿಮಾನ ಹೊರಟಿದ್ದು, ಬೋಗಾಪುರ ಸಮೀಪ ತರಬೇತಿ ಹಾರಾಟದಲ್ಲಿ ತೊಡಗಿತ್ತು. ಇಬ್ಬರೂ ಪೈಲಟ್‌ಗಳು ತರಬೇತಿ ಹಾರಾಟದಲ್ಲಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆ, ತಾಂತ್ರಿಕ ದೋಷದಿಂದಾಗ ವಿಮಾನ ಪತನಗೊಂಡು, ಬೋಗಾಪುರ-ಕೆ.ಮೂಕಹಳ್ಳಿ ರಸ್ತೆಯಲ್ಲಿರುವ ಸಪ್ಪಯ್ಯನಪುರ ಎಲ್ಲೆಗೆ ಸೇರಿದ ಪಾಳು ಜಮೀನಿನಲ್ಲಿ ಪತನಗೊಂಡಿತು. ಈ ವೇಳೆ, ಪ್ಯಾರಾಚ್ಯೂಟ್‌ ಮೂಲಕ ಹೊರಗೆ ಜಿಗಿದ ಇಬ್ಬರೂ ಪೈಲಟ್‌ಗಳು ವಿಮಾನ ಪತನಗೊಂಡ 2 ಕಿ.ಮೀ.ದೂರದಲ್ಲಿ ಬಂದು ಬಿದ್ದರು.

ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ, ಅಷ್ಟರಲ್ಲಾಗಲೇ ವಿಮಾನ ಛಿದ್ರವಾಗಿ, ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. ಎಂಜಿನ್‌ ಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ವಿಮಾನ ತೀರಾ ಸಮೀಪಕ್ಕೆ ಬಂದಿತ್ತು. ನೋಡುವಷ್ಟರಲ್ಲಿ ಉಲ್ಟಾಆಗಿ ಬ್ಲಾಸ್ಟ್‌ ಆಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಆಗಸದಲ್ಲೇ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತ್ತು. ಈ ವೇಳೆ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಸಹಾಯದಿಂದ ಪಾರಾಗಿದ್ದಾರೆ. ತೇಜ್‌ಪಾಲ್ ಮತ್ತು ಭೂಮಿಕಾ ಪ್ರಾಣಾಪಾಯದಿಂದ ಪಾರಾದ ಪೈಲಟ್‌‌ಗಳಾಗಿದ್ದು, ಇವರಿಬ್ಬರು ವಿಮಾನ ಹಾರಾಟ ತರಬೇತಿಯಲ್ಲಿದ್ದರು. ಅವರನ್ನು ಈಗ ಹೆಚ್ಎಎಲ್ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ.

ಪ್ರತಿಕೂಲ ಹವಾಮಾನದಿಂದ ಅವಘಡ

ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿತ್ತು. ವಿಮಾನ ಪತನಗೊಂಡ 2 ಕಿಮಿ ದೂರದಲ್ಲಿ ಪೈಲಟ್‌ಗಳಾದ ತೇಜ್‌ಪಾಲ್ ಮತ್ತು ಭೂಮಿಕಾ ಇಬ್ಬರು ಬಿದ್ದಿದ್ದರು. ಸದ್ಯ, ಇಬ್ಬರನ್ನು  ವಾಯುಸೇನೆಯವರು ಪತ್ತೆಹಚ್ಚಿ ರಕ್ಷಣೆ ಮಾಡಿದ್ದಾರೆ. ನಂತರ ಅವರನ್ನು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದಾರೆ. ಇಬ್ಬರಿಗೂ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
 

Latest Videos
Follow Us:
Download App:
  • android
  • ios