ಕೊರಟಗೆರೆ (ನ.06):  ಶಾಸಕ, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್‌ ಸ್ವಕ್ಷೇತ್ರವಾದ ಕೊರಟಗೆರೆ ಪ.ಪಂ ಆಡಳಿತ ಚುಕ್ಕಾಣಿ ಜೆಡಿಎಸ್‌ ಪಾಲಾಗಿದೆ. ಗುರುವಾರ ನಿಗದಿಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್‌ನ ಅಧ್ಯಕ್ಷರಾಗಿ ಮಂಜುಳ ಸತ್ಯನಾರಾಯಣ ಉಪಾಧ್ಯಕ್ಷರಾಗಿ ಭಾರತಿ ಸಿದ್ದಮಲ್ಲಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 15 ಸಂಖ್ಯಾಬಲದ ಪ. ಪಂ. ಸದಸ್ಯರ ಪೈಕಿ ನಾಲ್ಕನೇ ವಾರ್ಡ್‌ನ ಸದಸ್ಯರ ನಿಧನದಿಂದ 14 ಸಂಖ್ಯೆಯನ್ನು ಹೊಂದಿತ್ತು. ಈ ಪೈಕಿ ಜೆಡಿಎಸ್‌ ಪಕ್ಷದ 8 ಸದಸ್ಯ, ಕಾಂಗ್ರೆಸ್‌ ಪಕ್ಷ 4 ಸದಸ್ಯರನ್ನು ಹಾಗೂ 1 ಬಿಜೆಪಿ ಹಾಗೂ 1 ಪಕ್ಷೇತರ ಸದಸ್ಯರಿದ್ದರು. ಅಧ್ಯಕ್ಷರ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಿದ್ದು, ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷರ ಸ್ಥಾನದ ಸದಸ್ಯರು ಮೂರು ಜನರು ಜೆಡಿಎಸ್‌ ಪಕ್ಷದ ಸದಸ್ಯರಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಸದಸ್ಯರಿರಲಿಲ್ಲ.

ರಾರಾ, ಶಿರಾದಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ ಶುರು; ಗೆಲ್ಲೋ ಕುದುರೆ ಯಾರು? ..

 ಉಳಿದ ಪಕ್ಷೇತರ ಮತ್ತು ಬಿಜೆಪಿ ಸದಸ್ಯರು ಸಹ ಈ ಮೀಸಲಾತಿಗೆ ಒಳಪಡದ ಸದಸ್ಯರಾಗಿದ್ದರು. ಹಾಗಾಗಿ, ಜೆಡಿಎಸ್‌ ಪಕ್ಷದಿಂದ ಮಂಜುಳ ಸತ್ಯನಾರಾಯಣ್‌ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಭಾರತಿ ಸಿದ್ದಮಲ್ಲಯ್ಯ ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್‌ ಪಕ್ಷದ ಸದಸ್ಯರಾದ ಭಾಗ್ಯಮ್ಮ ಗಣೇಶ್‌ ಹಾಗೂ ಕಾಂಗ್ರೆಸ್‌ ಪಕ್ಷದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿದ್ದು, ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ 5 ಜೆಡಿಎಸ್‌ ಸದಸ್ಯರು ಹಾಗೂ ಬಿಜೆಪಿ ಮತ್ತು ಪಕ್ಷೇತರ ತಲಾ ಒಂದು ಸದಸ್ಯರು ಚುನಾವಣೆ ಸಮಯದಲ್ಲಿ ಹಾಜರಿದ್ದರು.

ಆಯ್ಕೆ ನಂತರ ಅಧ್ಯಕ್ಷೆ ಮಂಜುಳ ಸತ್ಯನಾರಾಯಣ್‌ ಮಾತನಾಡಿ, ಪಟ್ಟಣದ ಮೂಲ ಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಶ್ರಮಿಸುವುದಾಗಿ ತಿಳಿಸಿದರು. ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಪಕ್ಷಕ್ಕೆ ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಉಪಾಧ್ಯಕ್ಷರಾದ ಭಾರತಿ ಸಿದ್ದಮಲ್ಲಯ್ಯ ಮಾತನಾಡಿ, ಪಟ್ಟಣದ ಏಳಿಗೆಗೆ ಹಾಗೂ ಅಭಿವೃದ್ಧಿಗೆ ಅಧ್ಯಕ್ಷರೊಂದಿಗೆ ಜೊತೆಗೂಡಿ ಎಲ್ಲಾ ಸದಸ್ಯರೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಆರ್‌ ಸುಧಾಕರ್‌ಲಾಲ್‌, ಜಿ.ಪಂ ಸದಸ್ಯ ಶಿವರಾಮಯ್ಯ, ಜೆಡಿಎಸ್‌ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಲಿಂಗಪ್ಪ, ತಾಲೂಕು ಕಾರ್ಯಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ, ನಗರಾಧ್ಯಕ್ಷ ನಾಗೇಂದ್ರ, ಮುಖಂಡರಾದ ವಿ.ಕೆ ವೀರಕ್ಯಾತರಾಯ, ಆನಂದ್‌, ನಂಜಪ್ಪ,, ಲಕ್ಷ್ಮೇಶ ಕಾಮರಾಜು, ಪ.ಪಂ ಸದಸ್ಯರಾದ, ಪುಟ್ಟನರಸಯ್ಯ, ಲಕ್ಷ್ಮೇನಾರಾಯಣ್‌, ಪ್ರದೀಪ್‌ಕುಮಾರ್‌, ನಟರಾಜು, ಕಾವ್ಯಶ್ರೀ, ಹುಸ್ನಾಫರೀಯಾ, ಅನಿತಾ ಇದ್ದರು.