ಅರಸೀಕೆರೆ (ಅ.17):  ಅರಸೀಕೆರೆ ತಾಲೂಕಿನ ಟಿ. ಕೋಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹನ್ನೆರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಂಭತ್ತು ಸ್ಥಾನಗಳಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಸಹಕಾರ ಸಂಘದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪಕ್ಷದ ಸದಸ್ಯರಿಗೆ ಪುಷ್ಪಾಹಾರ ಹಾಕುವ ಮೂಲಕ ಅಭಿನಂದಿಸಿದ ಶಾಸಕ ಕೆ ಎಂ ಶಿವಲಿಂಗೇಗೌಡ ಮಾತನಾಡಿ, ಜನ ಸೇವೆ ಮಾಡುವ ಹಂಬಲ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಆಸೆ ಹೊಂದಿದವರಿಗೆ ಸಹಕಾರಿ ಸಂಘ ಉತ್ತಮ ವೇದಿಕೆಯಾಗಲಿದೆ. ಈ ಕ್ಷೇತ್ರದಲ್ಲಿ ಯಾರು ಜನಪರವಾಗಿ ಕೆಲಸ ಮಾಡುತ್ತಾರೋ ಅವರು ಜನನಾಯಕರಾಗಿ ಹೊರ ಉಮ್ಮಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.

ಮೂವರು ಮುಖಂಡರು ಜೆಡಿಎಸ್‌ ಸೇರ್ಪಡೆ ...

ನಿರೀಕ್ಷೆಯಂತೆ ಟಿ ಕೋಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜೆಡಿಎಸ್‌ ವಶವಾಗಿದೆ. ನೂತನ ಸದಸ್ಯರು ಪರಸ್ಪರ ವಿಶ್ವಾಸದೊಂದಿಗೆ ಸಹಕಾರ ಸಂಘದ ಜೊತೆಗೆ ಸರ್ವ ಸದಸ್ಯರ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.

ಸಹಕಾರ ಸಂಘದ ನೂತನ ಸದಸ್ಯ ಗಗನ್‌ ಮಾತನಾಡಿ, ಶಾಸಕ ಶಿವಲಿಂಗೇಗೌಡರ ಮಾರ್ಗದರ್ಶನದಲ್ಲಿ ಚುನಾವಣೆ ಸ್ಪರ್ಧಿಸಿದ್ದ ನಾವು ನಿರಾಸಯಾವಾಗಿ ಗೆಲುವು ಸಾಧಿಸಿದ್ದೇವೆ, ನಮ್ಮ ಶಾಸಕರಲ್ಲಿರುವ ಜನಪರ ಸೇವಾ ಮನೋಭಾವ ಎಲ್ಲರಿಗೂ ಆದರ್ಶವಾಗಿದೆ. ಅವರಂತೆ ನಾವು ಸಹ ಜನರ ಸೇವೆಗೆ ತೊಡಗಿಕೊಳ್ಳುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹುಚ್ಚೇಗೌಡ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸದಸ್ಯ ಎಂ ಸಮಿವುಲ್ಲಾ ಜೆಡಿಎಸ್‌ ಮುಖಂಡರಾದ ಮಲ್ಲಿಕಣ್ಣ ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾ ಪ್ರಕ್ರಿಯೆಯು ಸಹಕಾರ ಸಂಘದ ಉಪ ನಿರ್ದೇಶಕರಾದ ಸುನೀಲ್‌ ಅವರ ಸಮ್ಮುಖದಲ್ಲಿ ನಡೆಯಿತು.