ಮಂಡ್ಯ : ಮಂಡ್ಯದಲ್ಲಿ ದೋಸ್ತಿ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಕಸರತ್ತು ನಡೆಯುತ್ತಿದೆ. ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ ಹಿಡಿಯಲು ರೆಸಾರ್ಟ್ ರಾಜಕೀಯ ಆರಂಭವಾಗಿದೆ. 

ಕೆ.ಆರ್.ಪೇಟೆ ಪುರಸಭೆಯಲ್ಲಿ ಅಧಿಕಾರ ಗದ್ದುಗೆಗೆ ಏರಲು ಜೆಡಿಎಸ್ ಕಸರತ್ತು ನಡೆಸುತ್ತಿದ್ದು, 11 ಜೆಡಿಎಸ್ ಸದಸ್ಯರು ಹಾಗೂ ಓರ್ವ ಪಕ್ಷೇತರರನ್ನು ರೆಸಾರ್ಟ್ ಗೆ ಶಿಪ್ಟ್ ಮಾಡಲಾಗಿದೆ.  ಅಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. 

ಜೆಡಿಎಸ್ ಶಾಸಕ ನಾರಾಯಣ ಗೌಡರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದು, 20 ವರ್ಷಗಳಿಂದ ಕಾಂಗ್ರೆಸ್ ವಶದಲ್ಲಿದ್ದ ಕೆ.ಆರ್.ಪೇಟೆ ಪುರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆ ಅಧಿಕಾರ ಹಿಡಿಯಲು ಜೆಡಿಎಸ್ ಪ್ಲಾನ್ ಮಾಡಿದೆ. 

23 ಸದಸ್ಯ ಬಲದ ಕೆ.ಆರ್.ಪೇಟೆ ಪುರಸಭೆಯಲ್ಲಿ ಮ್ಯಾಜಿಕ್ ಸಂಖ್ಯೆ 12 ಆಗಿದ್ದು, ಜೆಡಿಎಸ್ 11 ಸ್ಥಾನ ಹೊಂದಿದೆ. ಕಾಂಗ್ರೆಸ್ 10 ಸ್ಥಾನ ಪಡೆದಿದ್ದು, ಓರ್ವ ಪಕ್ಷೇತರ, ಓರ್ವ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದು, ಅಧಿಕಾರ ಪಡೆಯಲು ಕಸರತ್ತು ಜೋರಾಗಿದೆ. 

ಒಟ್ಟು 11 ಜೆಡಿಎಸ್ ಸದಸ್ಯರು ಹಾಗೂ ಓರ್ವ ಪಕ್ಷೇತರರನ್ನು ಮುಂಬೈಗೆ ಕರೆದೊಯ್ದಿದ್ದ ಜೆಡಿಎಸ್ ಶಾಸಕ ನಾರಾಯಣ ಗೌಡ ಇದೀಗ ಬೆಂಗಳೂರು ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದಾರೆ. 

ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮಂಡ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದೆ. ಜೆಡಿಎಸ್ ಪಕ್ಷೇತರ ಅಭ್ಯರ್ಥಿಯನ್ನು ಹೈಜಾಕ್ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.