Asianet Suvarna News Asianet Suvarna News

ಉತ್ತರ ಕರ್ನಾಟಕದತ್ತ ಜೆಡಿಎಸ್‌ ಚಿತ್ತ: ದೊಡ್ಡಗೌಡರ ಮಾಸ್ಟರ್ ಪ್ಲ್ಯಾನ್ ರೆಡಿ!

ಪಕ್ಷ ಸಂಘಟಿಸುವ ಉದ್ದೇಶದಿಂದ ಶಿಬಿರ: ದತ್ತಾ| ಜಿಲ್ಲಾ ಮುಖಂಡರೊಂದಿಗೆ ದೇವೇಗೌಡ ಸಂವಾದ|ಉತ್ತರದಲ್ಲಿ ಜೆಡಿಎಸ್‌ ಸಂಘಟನೆಯತ್ತ ದೇವೇಗೌಡರ ಚಿತ್ತ| ಪಕ್ಷ ಸಂಘಟನೆಗಾಗಿ ಕಾರ್ಯಕರ್ತರಿಗೆ ತರಬೇತಿ ಶಿಬಿರ ನಡೆಸಲಿರುವ ದೊಡ್ಡಗೌಡ್ರು| ಹುಬ್ಬಳ್ಳಿಯಲ್ಲಿ ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ ಜೆಡಿಎಸ್‌ ಮುಖಂಡರಿಗೆ ಇಂದಿನಿಂದ ತರಬೇತಿ| 

JDS Training Workshop Will Be Held in Hubballi
Author
Bengaluru, First Published Mar 7, 2020, 7:35 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ[ಮಾ.07]:  ಜೆಡಿಎಸ್‌ ಇದೀಗ ತನ್ನ ಚಿತ್ತವನ್ನು ಉತ್ತರ ಕರ್ನಾಟಕದತ್ತ ನೆಟ್ಟಿದೆ. ಇಲ್ಲಿ ಪಕ್ಷ ಸಂಘಟಿಸುವ ಮೂಲಕ 2023ರ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮತ್ತೆ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕಬೇಕೆಂಬ ಹಂಬಲ ಹೊಂದಿದೆ. ಈ ನಿಟ್ಟಿನಲ್ಲಿ ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಕುರಿತು ತರಬೇತಿ ಕಾರ್ಯಾಗಾರವನ್ನು ಮಾ.7 ಮತ್ತು 8ರಂದು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರೇ ನಡೆಸಲಿದ್ದಾರೆ.

ಸಂಘಟನೆ, ನಾಯಕತ್ವದ ಕೊರತೆಯಿಂದ ಕಂಗೆಟ್ಟಿರುವ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿ ಪಕ್ಷಕ್ಕೆ ಪುನಶ್ಚೇತನ ನೀಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಮೂಲಕ ವಿಧಾನಸಭೆ ಚುನಾವಣೆಯ ತಯಾರಿಗೆ ಶ್ರೀಕಾರ ಹಾಕಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಗಟ್ಟಿನೆಲೆಯೆಂಬುದೇ ಇಲ್ಲ. ಈ ಭಾಗದಿಂದ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವಂತಾಗಲಿ ಎಂಬ ಉದ್ದೇಶದಿಂದ ಆಗ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲೇ ಮನೆ ಮಾಡಿದ್ದರು. ಇಲ್ಲಿಂದಲೇ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಏನೆಲ್ಲ ಕಸರತ್ತು ಮಾಡಿದರೂ ವಿಧಾನಸಭೆ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಲಾಭವೇನು ಆಗಲಿಲ್ಲ. ವಿಜಯಪುರದಲ್ಲಿ 2, ಬೀದರದಲ್ಲಿ ಒಂದು, ರಾಯಚೂರಲ್ಲಿ 2 ಸ್ಥಾನಗಳನ್ನು ಮಾತ್ರ ಜೆಡಿಎಸ್‌ ಗೆದ್ದಿತ್ತು. ಆದರೆ ಬರೀ ಇಷ್ಟೇ ಸ್ಥಾನಗಳನ್ನು ತಂದುಕೊಟ್ಟರೂ ಕುಮಾರಸ್ವಾಮಿ ಮುಖ್ಯಮಂತ್ರಿ ಗದ್ದುಗೆ ಏರಿದ್ದಂತೂ ಸುಳ್ಳಲ್ಲ.

ನಾಯಕರ ನಡುವಿನ ಭಿನ್ನಾಭಿಪ್ರಾಯ, ಕಚ್ಚಾಟಗಳಿಂದಾಗಿ ಈ ಭಾಗದಲ್ಲಿ ಪಕ್ಷಕ್ಕೆ ಒಂದು ನೆಲೆಯೇ ಸಿಗುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲುವುದಿಲ್ಲ. ಈ ಪಕ್ಷ ಬರೀ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ. ಇನ್ನು ದೇವೇಗೌಡರಿಗೆ ಉತ್ತರ ಕರ್ನಾಟಕವೆಂದರೆ ಆಗಲ್ಲ. ಹಿಂದೆ ನೈರುತ್ಯ ರೈಲ್ವೆ ವಲಯ ನಿರ್ಮಾಣದ ವೇಳೆ ಅಡ್ಡಿ ಪಡಿಸಿದ್ದರು ಎಂಬ ಆರೋಪ ಕೂಡ ನಿತ್ಯ ನಿರಂತರವಾಗಿದೆ. ಇದು ಹಳೆಯದ್ದಾದರೂ ಇನ್ನೂ ಜೀವಂತವಾಗಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಪಕ್ಷ ಉತ್ತರ ಕರ್ನಾಟಕದ ಭಾಗದಲ್ಲಿ ಅಲ್ಪಸ್ವಲ್ಪ ಉಸಿರಾಡುವಂತಿತ್ತು. ಆದರೆ ಇದೀಗ ಸರ್ಕಾರವೂ ಇಲ್ಲದ ಕಾರಣ ಪಕ್ಷವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜ. ಇದರಿಂದಾಗಿ ಪಕ್ಷದ ಕಾರ್ಯಕರ್ತರು ಕಂಗೆಟ್ಟಿದ್ದಾರೆ. ತಮ್ಮ ಕೆಲಸಗಳಿಗೆ ಯಾರನ್ನು ಕೇಳಬೇಕು. ಯಾರು ತಮ್ಮ ನಾಯಕ ಎಂಬುದು ತಿಳಿಯದೇ ಕಂಗೆಟ್ಟಿದ್ದಾರೆ.

ಪಕ್ಷ ಸಂಘಟನೆಯತ್ತ:

ಪಕ್ಷ ಸಂಘಟನೆಯಿಲ್ಲದೇ ಕಂಗಾಲಾಗಿರುವ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಹಾಗೂ ಪಕ್ಷವನ್ನು ಯಾವ ರೀತಿ ಬೇರು ಮಟ್ಟದಿಂದ ಬೆಳೆಸಬೇಕು ಎಂಬ ತಂತ್ರಗಾರಿಕೆ ರೂಪಿಸಲು, ಮುಖಂಡರಿಗೆ ತರಬೇತಿ ನೀಡಲು ಹುಬ್ಬಳ್ಳಿಯಲ್ಲಿ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಪಕ್ಷ ಏರ್ಪಡಿಸಿದೆ. ಸದ್ಯ ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಉದ್ದೇಶ ಜೆಡಿಎಸ್‌ನದ್ದು. ಇದರೊಂದಿಗೆ ಆಗಾಗ ಈ ಭಾಗಕ್ಕೆ ಬಂದರೆ ಉತ್ತರ ಕರ್ನಾಟಕದ ವಿರೋಧಿ ಎಂಬ ಹಣೆಪಟ್ಟಿಯಿಂದಲೂ ಕಳಚಿಕೊಳ್ಳಬಹುದು ಎಂಬ ಇರಾದೆ ಗೌಡರದ್ದು ಎಂಬ ಮಾತು ಪಕ್ಷದಿಂದಲೇ ಕೇಳಿ ಬರುತ್ತಿವೆ.

ಪ್ರಶಾಂತ ಕಿಶೋರ್‌ ಸಲಹೆಯೇ?

ಇನ್ನೊಂದು ಅಚ್ಚರಿಯೆಂದರೆ 2012ರಲ್ಲಿ ಗುಜರಾತ್‌ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಗೆ ಬಿಜೆಪಿಯ ರಾಜಕೀಯ ಸಲಹೆಗಾರರ ಕೆಲಸ ಮಾಡಿ ಆ ಪಕ್ಷವನ್ನು ಅಧಿಕಾರದ ಗದ್ದುಗೆಗೆ ತೆಗೆದುಕೊಂಡು ಹೋದ ಪ್ರಶಾಂತ ಕಿಶೋರ್‌ ಅವರನ್ನು ಇತ್ತೀಚಿಗೆ ಕುಮಾರಸ್ವಾಮಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯ ವೇಳೆ ಪಕ್ಷ ಸಂಘಟನೆ ಕುರಿತಂತೆ ಕುಮಾರಸ್ವಾಮಿ ಅವರು ಪ್ರಶಾಂತ ಕಿಶೋರ್‌ ಅವರಿಂದ ಸಲಹೆ ಪಡೆದಿದ್ದಾರೆ ಎಂಬೆಲ್ಲ ಗುಲ್ಲು ರಾಜಕೀಯದಲ್ಲಿ ಹಬ್ಬಿತ್ತು. ಇದಾಗಿ ಹದಿನೈದು ದಿನಗಳೊಳಗೆ ಹುಬ್ಬಳ್ಳಿಯಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಒಟ್ಟಿನಲ್ಲಿ ಜೆಡಿಎಸ್‌ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಪುನಶ್ಚೇತನ ಮಾಡಬೇಕು ಎಂಬ ಉದ್ದೇಶದಿಂದ ದೇವೇಗೌಡರು ಆಯೋಜಿಸಿರುವ ಈ ಕಾರ್ಯಾಗಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ? ಮುಖಂಡರಲ್ಲಿನ ಅಸಮಾಧಾನ, ಭಿನ್ನಮತಗಳೆಲ್ಲ ಶಮನವಾಗುತ್ತದೆಯೇ? ಈ ಕಾರ್ಯಾಗಾರ ಕಾರ್ಯಕರ್ತರಿಗೆ ‘ಬೂಸ್ಟ್‌’ನಂತೆ ಕೆಲಸ ಮಾಡುತ್ತದೆಯೇ? ಎಂಬುದನ್ನೆಲ್ಲ ಕಾಯ್ದು ನೋಡಬೇಕಿದೆ.

ಸಮಾವೇಶದಲ್ಲಿ ಏನು ತರಬೇತಿ

ಬೇರು ಮಟ್ಟದಿಂದ ಪಕ್ಷ ಸಂಘಟನೆ, ಸಾಮಾಜಿಕ ಜಾಲತಾಣ ನಿರ್ವಹಣೆ, ಪಕ್ಷಕ್ಕೆ ಮುಜುಗರವಾಗದಂತೆ ಹೇಗೆ ನಡೆದುಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ತರಬೇತಿ ನೀಡಲಾಗುವುದು. ವಿವಿಧ ವಿಷಯಗಳ ಗೋಷ್ಠಿ, ಸಂವಾದ ನಡೆಯಲಿದೆ. ಹುಬ್ಬಳ್ಳಿ ವಾಸವಿ ಮಹಲ್‌ನಲ್ಲಿ ಎರಡು ದಿನ ಶಿಬಿರ ನಡೆಯಲಿದೆ.

ಹೌದು ಮುಂಬೈ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಆಯ್ದ ಮುಖಂಡರು, ಕಾರ್ಯಕರ್ತರ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಎನ್‌.ಎಚ್‌. ಕೋನರಡ್ಡಿ ಹೇಳಿದ್ದಾರೆ. 

ಪ್ರತಿ ಜಿಲ್ಲೆಯಿಂದ 50 ಜನ ಮುಖಂಡರು, ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವೇಗೌಡರು ಎರಡು ದಿನ ಇಲ್ಲೇ ವಾಸ್ತವ್ಯ ಹೂಡಿ ಕಾರ್ಯಾಗಾರ ನಡೆಸಲಿದ್ದಾರೆ. ವಿವಿಧ ಗಣ್ಯರು ವಿವಿಧ ವಿಷಯ ಮಂಡಿಸಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದ್ದಾರೆ. 

ಇಂದಿನಿಂದ ಹುಬ್ಬಳ್ಳಿಯಲ್ಲಿ 2 ದಿನ ಜೆಡಿಎಸ್‌ ಕಾರ್ಯಾಗಾರ

ಜೆಡಿಎಸ್‌ ಪಕ್ಷವನ್ನು ಮತ್ತೆ ಬೇರು ಮಟ್ಟದಿಂದ ಸಂಘಟನೆ ಮಾಡಬೇಕೆಂಬ ಉದ್ದೇಶದಿಂದ ಮಾ.7 ಮತ್ತು 8ರಂದು ಹುಬ್ಬಳ್ಳಿಯಲ್ಲಿ ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ ಎರಡು ದಿನದ ತರಬೇತಿ ಕಾರ್ಯಾಗಾರವನ್ನು ಇಲ್ಲಿಯ ವಾಸವಿ ಮಹಲ್‌ನಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ವೈಎಸ್‌ವಿ ದತ್ತಾ, ಇಲ್ಲಿನ ವಾಸವಿ ಮಹಲ್‌ನಲ್ಲಿರುವ ತರಬೇತಿ ಕಾರ್ಯಾಗಾರವನ್ನು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು 7ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಎರಡು ದಿನ ವಿವಿಧ ಗೋಷ್ಠಿ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಮುಂಬೈ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ಆಯ್ದ 50 ಜನ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷ ಬಲಪಡಿಸಲು ವಿವಿಧ ಗೋಷ್ಠಿಗಳು ನಡೆಯಲಿವೆ. ಮಾ.8ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಪ್ರತಿ ಜಿಲ್ಲೆಯ ಮುಖಂಡರೊಂದಿಗೆ ದೇವೇಗೌಡರು ಪ್ರತ್ಯೇಕವಾಗಿ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ದೇವನೂರು ಮಹಾದೇವ ಬರೆದಿರುವ ‘ಇಂದು ಭಾರತ ಮಾತನಾಡುತ್ತಿದೆ’ ಹಾಗೂ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಾಗಿದ್ದಾಗ ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳೇನು ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಸಮಾವೇಶದಲ್ಲಿ ಏನು ತರಬೇತಿ?:

ಬೇರು ಮಟ್ಟದಿಂದ ಪಕ್ಷ ಸಂಘಟನೆ, ಸಾಮಾಜಿಕ ಜಾಲತಾಣ ನಿರ್ವಹಣೆ, ಪಕ್ಷಕ್ಕೆ ಮುಜುಗರವಾಗದಂತೆ ಹೇಗೆ ನಡೆದುಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ತರಬೇತಿ ನೀಡಲಾಗುತ್ತದೆ.

ಕುಮಾರಸ್ವಾಮಿ ಮೈಸೂರಿಗೆ

ಹುಬ್ಬಳ್ಳಿಯಲ್ಲಿ ಶನಿವಾರ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್‌ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದರೆ, ಮೈಸೂರಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾರ್ಯಕರ್ತ ಜೊತೆ ಸಂವಾದ ನಡೆಸಲಿದ್ದಾರೆ. ಶನಿವಾರ ಮಧ್ಯಾಹ್ನ 3ಕ್ಕೆ ಮೈಸೂರಿಗೆ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಮಂಜುನಾಥಪುರದಲ್ಲಿರುವ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವರು. ಇದೇ ಸಂದರ್ಭದಲ್ಲಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರ ಮದುವೆಯ ಆಮಂತ್ರಣವನ್ನು ವಿತರಿಸುವರು.
 

Follow Us:
Download App:
  • android
  • ios