ಹಾಸನ [ಮಾ.01]:  ಮಾಜಿ ಸಚಿವ ಜಿ.ಟಿ. ದೇವೇಗೌಡರ ದ್ವಂದ್ವ ನಿಲುವನ್ನು ಯಾರು ಒಪ್ಪುವುದಿಲ್ಲ. ಅದು ಅಶಿಸ್ತಿನ ಪರಮಾವಧಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಪಕ್ಷಕ್ಕೆ ನಿಷ್ಟರಾಗಿ ಇರುವುದಾದರೆ ಇರಬಹುದು. ದ್ವಂದ್ವ ನಿಲುವು ತೆಗೆದುಕೊಂಡು ಕಾರ್ಯಕರ್ತರನ್ನು ಅಧೀರರನ್ನಾಗಿ ಮಾಡಬಾರದು. ಜಿಟಿಡಿ ತಮ್ಮ ಮುಂದಿನ ರಾಜಕೀಯ ಅನುಕೂಲದ ದೃಷ್ಟಿಯನ್ನು ಇಟ್ಟುಕೊಂಡು ನೀಡುವ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತಂದಿವೆ. ಇಲ್ಲೂ ಇದ್ದು ಅಲ್ಲೂ ಇರೋ ಕೆಲಸ ಮಾಡೋದು ಬೇಡ. ಅವರಿಗೆ ಇನ್ನೂ ಯಾವುದೇ ನೋಟಿಸ್‌ ಕೊಟ್ಟಿಲ್ಲ. ಅವರ ನಡವಳಿಕೆ ಖಂಡಿತಾ ಸರಿಯಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟೀಕಿಸಿದರು.

ಬಿಎಸ್‌ವೈ ಹುಟ್ಟುಹಬ್ಬಕ್ಕೆ ಹೋದ ಸಿದ್ದುಗೆ ಕಾಂಗ್ರೆಸ್ಸಲ್ಲೇ ವಿರೋಧ..

ಮೊದಲು ಅವರ ದೇಹ ಮತ್ತು ಮನಸು ಜೆಡಿಎಸ್‌ನಲ್ಲಿ ಇತ್ತು. ಈಗ ಎರಡೂ ಬಿಜೆಪಿ ಜೊತೆ ಇದೆ. ಎಂಎಲ್‌ಸಿ ಚುನಾವಣೆಯಲ್ಲಿ ಗುಪ್ತ ಮತದಾನ ಇತ್ತು. ವಿಪ್‌ ನೀಡಿರಲಿಲ್ಲ. ಮುಂದೆ ರಾಜ್ಯಸಭಾ ಚುನಾವಣೆ ಇದೆ. ಆ ಸಂದರ್ಭದಲ್ಲಿ ಕಾನೂನು ಕಟ್ಟಲೆ ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ನಾನೇ ನನ್ನ ಸ್ವಂತ ಶಕ್ತಿಯಿಂದ ಶ್ರೀಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದೇನೆ ಎನ್ನುವ ಭಾವನೆ ಇರಬಹುದು. ಯಾವುದೇ ಸಮಸ್ಯೆ ಇದ್ದರೇ ನಾಯಕರ ಜೊತೆ ಮಾತಾಡಿ ಬಗೆಹರಿಸಿ ಕೊಳ್ಳಲಿ ಎಂದರು.

ಇದೇ ವೇಳೆ ಭವಿಷ್ಯದಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರ ಚುಕ್ಕಾಣಿ ಹಿಡಿಯಲು, ರಾಜಕೀಯ ಚಾಣಾಕ್ಷ ಪ್ರಶಾಂತ್‌ ಕಿಶೋರ್‌ ಸಹಾಯ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಶಾಂತ್‌ ಕಿಶೋರ್‌ ಕರೆಸುವ ಬಗ್ಗೆ ಯೋಚಿಸಿರುವುದು ನಿಜ. ಆದರೆ, ಪ್ರಶಾಂತ್‌ ಕಿಶೋರ್‌ ಭೇಟಿ ಮಾಡಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಪ್ರಶಾಂತ್‌ ಕಿಶೋರ್‌ ಬಗ್ಗೆ ಮನಸ್ಸು ಮಾಡಿದ್ದಾರೆ. ಅನುಕೂಲ ಆಗೋದಾದ್ರೆ ಯಾರೇ ಸಲಹೆ ಸೂಚನೆ ನೀಡಿದರೂ ಸ್ವಾಗತಿಸಲಾಗುವುದು ಎಂದರು.