Karnataka Politics : ಜೆಡಿಎಸ್ ಅಧ್ಯಕ್ಷ ರಾಜೀನಾಮೆ
ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಹುಣಸೂರು : ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಕಚೇರಿ ಆವರಣದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಪಕ್ಷದ ಅಧ್ಯಕ್ಷನಾಗಿ ನೇಮಕಗೊಂಡು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕರ್ತವ್ಯ ನಿರ್ವಹಿಸಿದ್ದೇನೆ. 2018ರ ಉಪ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಪಕ್ಷದಿಂದ ಟಿಕೆಟ್ ನೀಡಿದ್ದ ಕಾರಣ ಸ್ಪರ್ಧಿಸಿ ಉತ್ತಮ ಮತಗಳನ್ನು ಪಡೆದಿದ್ದೇನೆ. ಪಕ್ಷ ಮೂರು ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ಪಕ್ಷ ಸಂಘಟನೆಯನ್ನು ಯಶಸ್ವಿಯಾಗಿ ನಡೆಸಿದ್ದೇನೆ.
ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ನನಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ಭರವಸೆ ಹುಸಿಗೊಳಿಸಿದ್ದಾರೆ. ಕಡೆಯತನಕವೂ ದುಡುಕಬೇಡ, ನಿಧಾನಿಸು ಎಂದು ಹೇಳುತ್ತಲೇ ನನಗೆ ಮೋಸ ಮಾಡಿದ್ದಾರೆ. ಕೋಟ್ಯಾಂತರ ರು. ಗಳನ್ನು ಖರ್ಚು ಮಾಡಿ ಪಕ್ಷ ಸಂಘಟಿಸಿದ್ದ ನನಗೆ ಪಕ್ಷವು ನ್ಯಾಯ ನೀಡಲಿಲ್ಲ. ಹಾಗಾಗಿ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆಂದರು.
ನಗರಸಭಾ ಸದಸ್ಯ ಶರವಣ ಮಾತನಾಡಿ, 2023 ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಈ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡೋಣ. ನೀವು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.
ಮುಖಂಡ ಸತೀಶ್ ಪಾಪಣ್ಣ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಹಾಗಾಗಿ ಮುಂದಿನ ದಿನಗಳಲ್ಲಿ ಪಕ್ಷ ನಿಮಗೆ ಒಳ್ಳೆಯ ಸ್ಥಾನವನ್ನೇ ಕಲ್ಪಿಸಲಿದೆ. ಎಲ್ಲರೂ ಒಗ್ಗಟ್ಟಾಗಿ ದುಡಿಯೋಣವೆಂದರು. ಮಿಕ್ಕವರಿಂದಲೂ ಇದೇ ತೆರನಾದ ಸಲಹೆಗಳು ಬಂದರೂ ತಮ್ಮ ನಿರ್ಧಾರವನ್ನು ಬದಲಿಸದ ಸೋಮಶೇಖರ್ ಪಕ್ಷದ ಕಚೇರಿಯಲ್ಲಿ ರಾಜೀನಾಮೆ ಪತ್ರ ನೀಡಿ ಹೊರನಡೆದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಶ್ರೀನಾಥ್, ಸಿರಾಜ್, ರಾಧಾ, ರಾಣಿ ಪೆರುಮಾಳ್, ಮುಖಂಡರಾದ ಚಿಕ್ಕಹುಣಸೂರು ಗೋವಿಂದೇಗೌಡ, ವಾಸು, ಮಹಿಳಾ ಘಟಕದ ಅಧ್ಯಕ್ಷೆ ಯಶೋಧಮ್ಮ, ನಗರಾಧ್ಯಕ್ಷೆ ಚಂದ್ರಮ್ಮ ಇದ್ದರು.
ಗೆಲ್ಲುವ ಸಂಕಲ್ಪ
ಕಲಬುರಗಿ (ಜ.13): ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಕನಿಷ್ಠ 35 ಸ್ಥಾನಗಳಲ್ಲಿ ಜಯ ಗಳಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ. ಜೆಡಿಎಸ್ ಬರೀ ಮಂಡ್ಯ, ಹಾಸನಕ್ಕೆ ಸೀಮಿತ ಅನ್ನುವವರಿಗೆ ನಾವು ಈ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅಫಜಲ್ಪುರ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ತಿಳಗೂಳ ಬಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಕಲ್ಯಾಣ, ಕಿತ್ತೂರು ಎಂದು ಹೆಸರಿಟ್ಟರಾಗದು.
ಪ್ರಗತಿ ಎಲ್ಲಿದೆ? ಜನರನ್ನು ಭಾವನೆಗಳ ಮೂಲಕ ಕೆರಳಿಸುವವವರಿಂದ ಪ್ರಗತಿ ಸಾಧ್ಯವಿಲ್ಲವೆಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಈ ಭಾಗದ ಶಾಸಕರು ತಾವು ಸಿಎಂ ಆಗಿದ್ದಾಗ ಬಂದು ಹೆಸರು ಬದಲಾವಣೆಗೆ ಆಗ್ರಹಿಸಿದ್ದನ್ನು ಮೆಲಕು ಹಾಕಿದ ಅವರು ಪ್ರಗತಿಯಾಗದ ಹೊರತು ಹೆಸರು ಬದಲಾವಣೆಯೊಂದೇ ಬೇಡವೆಂದು ಹೇಳಿದ್ದೆ. ಬಿಜೆಪಿಯವ್ರು ಹೆಸರಷ್ಟೇ ಬದಲಾವಣೆ ಮಾಡಿದ್ದಾರೆ. ಜನ ಇಂತಹದ್ದಕ್ಕೆಲ್ಲ ಮರಳಾಗಬಾರದು ಎಂದರು.
ಜೆಡಿಎಸ್ ಗೆದ್ದರೆ ಸಕ್ಕರೆ ಕಾರ್ಖಾನೆ ಸ್ಥಾಪನೆ: ಎಚ್.ಡಿ.ಕುಮಾರಸ್ವಾಮಿ
ಜ.17ರಿಂದ ಪಂಚರತ್ನ 3ನೇ ಹಂತ: ವಿಜಯಪುರ, ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲೂ ಪಂಚರತ್ನ ರಥಯಾತ್ರೆ ನಡೆಸಲಾಗುತ್ತದೆ. ಸಂಕ್ರಾಂತಿ ನಂತರದ ಜ.17ರಿಂದ ಸಿಂದಗಿಯಿಂದಲೇ ಕಥಯಾತ್ರೆ 3ನೇ ಹಂತ ಶುರುವಾಗಲಿದೆ, ಮಾರ್ಚ್ 20ರವರೆಗೆ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ರಾಜ್ಯಕ್ಕೆ ಜೆಡಿಎಸ್ ಅನಿವಾರ್ಯ ಅನ್ನೋದು ರಥಯಾತ್ರೆಯಿಂದ ಗೊತ್ತಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಹೆಚ್ಡಿಕೆ ಅಧಿಕಾರಕ್ಕೆ ಬಂದರೆ ನಮ್ಮ ಸಮಸ್ಯೆ ಬಗೆಹರಿಯುತ್ತೆ, ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಭಾವನೆ ವ್ಯಕ್ತವಾಗ್ತಿದೆ, ಕಲ್ಯಾಣ ಕರ್ನಾಟಕ ಹೆಸರಿಟ್ಟಮಾತ್ರಕ್ಕೆ ಅಭಿವೃದ್ಧಿ ಆಗಲ್ಲ. ಇಲ್ಲಿನ ರಸ್ತೆಗಳ ಸ್ಥಿತಿ ನೋಡಿದ್ರೆ ದೇವರೇ ಕಾಪಾಡಬೇಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡುವ ಹಣ ಎಲ್ಲಿಗೆ ಹೋಗುತ್ತೆ? ಶೌಚಾಲಯ ಇಲ್ಲದೇ ಮಹಿಳೆಯರು ತಮ್ಮ ಅಳಲು ತೋಡಿಕೊಳ್ತಿದ್ದಾರೆ. ಒಂದು ಕಡೆ ಸ್ವಚ್ಛ ಭಾರತ್ ಅಂತಾರೆ, ಎಲ್ಲಿದೆ ಸ್ವಚ್ಛ ಭಾರತ್? ಎಂದು ಪ್ರಶ್ನಿಸಿದರು.