ಮಳವಳ್ಳಿ (ಏ.06):  ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಹೆಚ್ಚು ಸ್ಥಾನ ಗೆಲ್ಲಲು ಈಗಾಗಲೇ ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅಭಿಮಾನಿಗಳ ಬಳಗ ಹಾಗೂ ಡಾ.ಕೆ.ಅನ್ನದಾನಿ ಅಭಿಮಾನಿಗಳ ಬಳಗದಿಂದ ಅಂಶು ಅನ್ನದಾನಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿಖಿಲ್-ಡಿಕೆಶಿ ಸಪೋರ್ಟರ್ಸ್ ಗಲಾಟೆ : 'ಹುಡುಗ್ರು ನಾವ್ ತಲೆ ಕೆಡಿಸಿಕೊಳ್ಳೋಕಾಗುತ್ತಾ' ..

ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಹಿಡಿಯಲು ಕಾರ್ಯಕರ್ತರು ಮತ್ತು ಮುಖಂಡರು ಮಾನಸಿಕವಾಗಿ ಸಿದ್ದರಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ರೀತಿಯಲ್ಲಿ ಪಕ್ಷವನ್ನು ಸಂಘಟಿಸುತ್ತೇನೆ. ಮಂಡ್ಯ ಜಿಲ್ಲೆಗೆ ನಿರಂತರವಾಗಿ ಭೇಟಿ ನೀಡಿ ಪಕ್ಷ ಸಂಘಟಿಸುವುದಾಗಿ ಹೇಳಿದರು.

ರಾಮನಗರ ನಗರಸಭೆ ಚುನಾವಣೆಯಲ್ಲಿ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಹಾಗೂ ಕೆಲವೊಂದು ಸಮಸ್ಯೆ ನಿವಾರಿಸಿ ಹೆಚ್ಚು ಸ್ಥಾನ ಗೆಲ್ಲಿಸುವ ಪ್ರಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ನನ್ನ ತಂದೆಗೆ ಡಾ.ಅನ್ನದಾನಿ ತಮ್ಮ:  ಶಾಸಕ ಡಾ.ಕೆ.ಅನ್ನದಾನಿ ಹುಟ್ಟು ಹಬ್ಬದ ಪ್ರಯಕ್ತ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನನ್ನ ತಂದೆ ಕುಮಾರಸ್ವಾಮಿ ಅವರು ಅನ್ನದಾನಿ ಅವರನ್ನು ತಮ್ಮನ ರೀತಿಯಲ್ಲಿ ಕಾಣುತ್ತಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅನ್ನದಾನಿ ನಮ್ಮ ಮನೆಯ ಸದಸ್ಯರಾಗಿದ್ದಾರೆ ಎಂದರು.

ಕೊರೋನಾ 2ನೇ ಅಲೆ ಹೆಚ್ಚಾಗಿದೆ. ಜನರು ಎಚ್ಚರ ವಹಿಸಬೇಕು. ಕೋವಿಡ್‌ 19 ನಿಯಮ ಅನುಸರಿಸಬೇಕು. ಗ್ರಾಮೀಣ ಪ್ರದೇಶದ ಜನರು ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಆರೋಗ್ಯದ ಬಗ್ಗೆ ಗಮನಕೊಡಬೇಕು ಎಂದು ಕಿವಿಮಾತು ಹೇಳಿದರು.