ತುಮಕೂರಿಗೆ ಜೆಡಿಎಸ್ ಪಂಚರತ್ನ ಯಾತ್ರೆ : ಕುಮಾರಸ್ವಾಮಿ ನೆತೃತ್ವ
ಜೆಡಿಎಸ್ ಪಂಚರತ್ನ ಯಾತ್ರೆ ಗುರುವಾರ ತುಮಕೂರು ನಗರಕ್ಕೆ ಆಗಮಿಸಲಿದ್ದು, ಅಂದು ಇಡೀ ದಿನ ತುಮಕೂರು ನಗರದಲ್ಲಿ ಯಾತ್ರೆ ಸಂಚರಿಸಲಿದೆ.
ತುಮಕೂರು (ಡಿ.01): ಜೆಡಿಎಸ್ ಪಂಚರತ್ನ ಯಾತ್ರೆ ಗುರುವಾರ ತುಮಕೂರು ನಗರಕ್ಕೆ ಆಗಮಿಸಲಿದ್ದು, ಅಂದು ಇಡೀ ದಿನ ತುಮಕೂರು ನಗರದಲ್ಲಿ ಯಾತ್ರೆ ಸಂಚರಿಸಲಿದೆ.
ಗುರುವಾರ ಬೆಳಗ್ಗೆ 9 ಗಂಟೆಯಿಂದ ಯಾತ್ರೆ ಆರಂಭವಾಗಲಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಿದ್ಧಗಂಗಾ ಮಠಕ್ಕೆ ಯಾತ್ರೆ ಆಗಮಿಸಲಿದೆ.
ಸಿದ್ದಗಂಗಾ ಮಠದಲ್ಲಿ ಶಿವ ಕುಮಾರ್ ಶ್ರೀಗಳ ಗದ್ದುಗೆಯ ದರ್ಶನ ಹಾಗೂ ಸಿದ್ದಲಿಂಗ ಶ್ರೀಗಳ ಆರ್ಶೀವಾದ ಪಡೆದು ಯಾತ್ರೆ ಆರಂಭವಾಗಲಿದ್ದು, ಪಂಚರತ್ನ ಯಾತ್ರೆಯಲ್ಲಿ ಮಾಜಿ ಸಿ ಎಂ ಕುಮಾರ ಸ್ವಾಮಿ, ಸಿಎಂ ಇಬ್ರಾಹಿಂ, ನಿಖಿಲ… ಕುಮಾರ ಸ್ವಾಮಿ (Kumaraswamy) ಹಾಗೂ ಜಿಲ್ಲೆಯ ಮುಖಂಡರು ಭಾಗಿಯಾಗಲಿದ್ದಾರೆ. ಸಿದ್ಧ ಗಂಗಾ ಮಠದಿಂದ (Siddaganga Mutt) ಸೀದಾ ಕ್ಯಾತ್ಸಂದ್ರಕ್ಕೆ ಯಾತ್ರೆ ತೆರಳಲಿದೆ. ಅಲ್ಲಿ ಸಭೆ ಮುಗಿಸಿ ಬಳಿಕ ಬಟವಾಡಿ ಸರ್ಕಲ್‌ನಲ್ಲಿ ಮತ್ತೊಂದು ಸಭೆ ನಡೆಯಲಿದೆ. ಅಲ್ಲಿಂದ ಗಂಗೋತ್ರಿ ರೋಡ್ ಮೂಲಕ ಉಪ್ಪಾರ ಹಳ್ಳಿಗೆ ಪ್ರವೇಶ ನೀಡಲಿದ್ದು ಅಲ್ಲೂ ಕೂಡ ಸಭೆ ನಡೆಯಲಿದೆ.
ಬಳಿಕ ಕೆ ಎನ್ ಎಸ್ ಬೀದಿಗೆ ಆಗಮಿಸುವ ಯಾತ್ರೆ ಅಲ್ಲೂ ಕೂಡ ಸಭೆ ನಡೆಸಲಿದೆ. ಅಲ್ಲಿಂದ ನೇರವಾಗಿ ಶೆಟ್ಟಿ ಹಳ್ಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಿ ಜಿ ಸರ್ಕಾಲ್‌ಗೆ ಆಗಮಿಸಲಿದೆ. ಬಳಿಕ ಟೌನ್ ಹಾಲ್ ಸರ್ಕಲ್‌ನಲ್ಲಿ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎಂಜಿ ರೋಡ್ ಮೂಲಕ ಶಿರಾ ಗೇಟ್‌ಗೆ ತೆರಳಿ ಅಲ್ಲಿ ಸಭೆಯಲ್ಲಿ ಮುಖಂಡರು ಪಾಲ್ಗೊಳ್ಳುವರು. ನಂತರ ಹನುಮಂತಪುರ ಮೂಲಕ ದಿಬ್ಬೂರಿಗೆ ತೆರಳಿ ರಾತ್ರಿ ದಲಿತ ಜೆಡಿಎಸ್ ಮುಖಂಡರ ಮನೆಯಲ್ಲಿ ಉಪಹಾರ ಸೇವಿಸಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ ಮಧುಗಿರಿ ಕಡೆ ಪ್ರಯಾಣ ನಡೆಸಲಿದೆ. ಈ ಯಾತ್ರೆಯಲ್ಲಿ 20 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಈ ವೇಳೆ ತುಮಕೂರಿನ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆಂದು ಜೆಡಿಎಸ್ ಮುಖಂಡ ಗೋವಿಂದರಾಜು ತಿಳಿಸಿದ್ದಾರೆ.
ಕುಮಾರಣ್ಣ ರಾಜ್ಯಕ್ಕೆ ಮತ್ತೊಮ್ಮೆ ಅನಿವಾರ‍್ಯ
ದಾಬಸ್‌ಪೇಟೆ: ಪಂಚರತ್ನ ಯೋಜನೆ ಯಾವುದೇ ಒಂದು ಧರ್ಮಕ್ಕೆ, ಜಾತಿಗೆ ಸೀಮಿತವಾಗದೆ ಎಲ್ಲರಿಗೂ ಅನ್ವಯವಾಗಲಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ದಾಬಸ್‌ಪೇಟೆ ಪಟ್ಟಣದಲ್ಲಿ ಆಗಮಿಸಿದ ಪಂಚರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆಯಲ್ಲಿ ಹಮ್ಮಿಕೊಂಡಿರುವ ಐದು ಯೋಜನೆಗಳು ಕುಮಾರಣ್ಣನ ಕನಸಿನ ಕೂಸಾಗಿವೆ. ಪ್ರತಿ ಹಳ್ಳಿಗೆ ಹೋದಾಗ ಸರ್ಕಾರಿ ಶಾಲೆಗಳಲ್ಲಿ ನೀರು ಲೀಕೇಜ್ ಆಗುತ್ತಿರುತ್ತದೆ. ಹಳ್ಳಿಗಳಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ ಮಾಡಿ, ಉಚಿತವಾಗಿ ಶಿಕ್ಷಣ ನೀಡುವ ಸಂಕಲ್ಪ ಇದೆ. 1ರಿಂದ 12ನೇ ತರಗತಿವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಕನ್ನಡ ಯುವಕ, ಯುವತಿಯರಿಗೆ ಶೇ.50ರಷ್ಟುಮೀಸಲಾತಿ ಸಿಗುವಂತೆ ಮಾಡಲಿದ್ದಾರೆ. ಜೆಡಿಎಸ್ ನಾಡಿನ ಜನತೆಯ ಸರ್ವತೋಮುಖ ಅಭಿವೃದ್ಧಿಗೆ ಕುಮಾರಣ್ಣ ಸಂಕಲ್ಪ ಮಾಡಿದ್ದಾರೆ. ಕುಮಾರಣ್ಣ ರಾಜ್ಯಕ್ಕೆ ಮತ್ತೊಮ್ಮೆ ಅನಿವಾರ್ಯ. ರೈತರ ಪರ ಧ್ವನಿ ಎತ್ತುವವರು ಕುಮಾರಣ್ಣ, ಅವರನ್ನ ಎಲ್ಲರೂ ಬೆಂಬಲಿಸಿ ಎಂದ ನಿಖಿಲ್ ಮನವಿ ಮಾಡಿದರು. 2023ರ ಚುನಾವಣೆಯಲ್ಲಿ ಕುಮಾರಸ್ವಾಮಿರವರ ನೇತೃತ್ವದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದ್ದೇವೆ. 2018ರಲ್ಲಿ ಚುನಾವಣಾ ಸಂದರ್ಭದಲ್ಲಿ ಸಾಲಮನ್ನಾ ಮಾಡುವ ಘೋಷಣೆ ಮಾಡಿದ್ದರು. ಅದನ್ನು ಮತ್ತೆ 2023ರ ಚುನಾವಣೆಯಲ್ಲಿ ಸಾಲಮನ್ನಾ ಮಾಡಲಿದ್ದಾರೆ ಎಂದರು.
ಮಕ್ಕಳೊಂದಿಗೆ ನಿಖಿಲ್ ಸೆಲ್ಪಿ: ಪಂಚರತ್ನ ರಥಯಾತ್ರೆ ಬರಗೇನಹಳ್ಳಿ ಗ್ರಾಮಕ್ಕೆ ಆಗಮಿಸಿದಾಗ ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರ ಮಕ್ಕಳ ಜೊತೆ ಸೆಲ್ಪಿ ತೆಗೆದುಕೊಂಡರು.