ತುಮಕೂರು(ಜ.25): ಎಷ್ಟೇ ಕಷ್ಟಬಂದರೂ ಕೊಟ್ಟಮಾತನ್ನು ಈಡೇರಿಸುವಂತಹ ದಿಟ್ಟನಾಯಕತ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಲ್ಲಿದೆ ಎಂದು ಜೆಡಿಎಸ್‌ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಹಾಡಿಹೊಗಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪನವರಿಗೆ ಟೈಟ್‌ ಮಾಡಿರಬಹುದು. ಆದರೆ ಅವರು ನಂಬಿಗಸ್ತರು. ಕೊಟ್ಟ ಆಶ್ವಾಸನೆಯನ್ನು ಖಂಡಿತ ನೆರವೇರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ರಮ ವಲಸಿಗರ ಐಡೆಂಟಿಟಿ ಚೆಕ್‌ಗೆ ವಿರೋಧ, ಎಸ್‌ಪಿ ಗರಂ

ಸದ್ಯ ಬಿಜೆಪಿಯಿಂದ ಆಯ್ಕೆಯಾಗಿರುವ ನೂತನ ಶಾಸಕರೆಲ್ಲಾ ಈ ಹಿಂದೆ ಸಚಿವರಾಗುವ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ಈಗ ಅವರಿಗೆ ಮಂತ್ರಿ ಸ್ಥಾನ ನೀಡದೇ ಇದ್ದರೆ ಜೀವ ಹೋಗಿ ಬಿಡುತ್ತದೆ. ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಚಟಾಕಿ ಹಾರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಸಭೆಗೆ ಗೈರು ಹಾಜರಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವಿರುದ್ಧ ನನಗ್ಯಾವ ಅಸಮಾಧಾನವೂ ಇಲ್ಲ. ತಡವಾಗಿ ಹೋಗಿದ್ದೆ. ನಾನು ಹೋಗುವಷ್ಟರಲ್ಲಿ ಕಾರ್ಯಕ್ರಮ ಮುಗಿದಿತ್ತು. ಹೀಗಾಗಿ ವೇದಿಕೆಗೆ ಹೋಗಲಿಲ್ಲ. ಕಾರ್ಯಕ್ರಮ 9.30ಕ್ಕೆ ಆರಂಭವಾಗುತ್ತದೆ ಎಂದು ಆಮಂತ್ರಣ ಪತ್ರಿಕೆಯಲ್ಲಿತ್ತು. ಸಾಮಾನ್ಯವಾಗಿ ಮುಖಂಡರು 11.30ಕ್ಕೆ ಬರುತ್ತಾರೆ. ಹೀಗಾಗಿ ಕಾರ್ಯಕ್ರಮ ತಡವಾಗಬಹುದು ಅಂತಾ ಲೇಟಾಗಿ ಹೋದೆ ಎಂದು ಸ್ಪಷ್ಟಪಡಿಸಿದರು.